
ನವದೆಹಲಿ: 'ಗ್ರೇಟ್‌ವಾಲ್' ಎಂಬ ಪ್ರೀತಿಯ ಬಿರುದು ಭಾರತದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗಿತ್ತು. ವಿಕೆಟ್‌ಗೆ ಅಡ್ಡಗೋಡೆಯಂತೆ ನಿಂತು ದ್ರಾವಿಡ್ ಎಷ್ಟೋ ಸಾರಿ ಸೋಲಿನಂಚಿನಲ್ಲಿದ್ದ ಭಾರತವನ್ನು ಪಾರು ಮಾಡಿದ್ದರು. ಇದೇ ಕಾರಣಕ್ಕೆ ದ್ರಾವಿಡ್‌ಗೆ ಆಪಾದ್ಭಾಂದವ ಹೆಸರೂ ಇತ್ತು.
ಆದರೆ ಈಗ ಭಾರತ ತಂಡದಲ್ಲಿ ಚೇತೇಶ್ವರ ಪೂಜಾರ ಅವರನ್ನು 'ಗ್ರೇಟ್ ವಾಲ್-2' ಎಂದು ಕರೆಯಲಾಗುತ್ತದೆ. ಪೂಜಾರ ಕೂಡ ದ್ರಾವಿಡ್ ಹಾದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಜಯ ದಾಖಲಿಸುವಲ್ಲಿ ಪೂಜಾರ ಕೊಡುಗೆಯೂ ಮಹತ್ವದ್ದಾಗಿತ್ತು.
ಜನವರಿ 25ಕ್ಕೆ ಚೇತೇಶ್ವರ್ 33ನೇ ಹರೆಯಕ್ಕೆ ಕಾಲಿರಿಸುತ್ತಿದ್ದಾರೆ. ಪೂಜಾರಗೆ ಕ್ರಿಕೆಟ್ ದಂತಕತೆಗಳಿಂದ, ಸಿನಿಮಾ ತಾರೆಯರಿಂದ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಬಿಸಿಸಿಐ, ಆರ್‌ಪಿ ಸಿಂಗ್, ವಾಸಿಂ ಜಾಫರ್, ಯುವರಾಜ್ ಸಿಂಗ್ ಸೇರಿದಂತೆ ಅನೇಕರು ಶ್ರೇಷ್ಠ ಕ್ರಿಕೆಟಿಗನಿಗೆ ಶುಭಾಶಯ ತಿಳಿಸಿದ್ದಾರೆ.
ಚೇತೇಶ್ವರ ಪೂಜಾರ ಅವರು 81 ಪಂದ್ಯ (136 ಇನ್ನಿಂಗ್ಸ್)ಗಳಲ್ಲಿ 6111 ರನ್, 18 ಶತಕ, 3 ದ್ವಿಶತಕಗಳನ್ನು ಬಾರಿಸಿದ್ದಾರೆ. 5 ಏಕದಿನ ಪಂದ್ಯಗಳಲ್ಲಿ 51 ರನ್ ಬಾರಿಸಿದ್ದಾರೆ. ಟೆಸ್ಟ್ ಸ್ಪೆಶಾಲಿಸ್ಟ್ ಎಂದು ಕರೆಯಲಾಗುವ ಪೂಜಾರ ಈವರೆಗೆ ಟೆಸ್ಟ್‌ನಲ್ಲಿ ಬರೋಬ್ಬರಿ 13572 ಎಸೆತಗಳನ್ನು ಎದುರಿಸಿದ್ದಾರೆ. ಫೆಬ್ರವರಿ 5ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪೂಜಾರ ಸಜ್ಜಾಗುತ್ತಿದ್ದಾರೆ.