ಹ್ಯಾಪಿ ಬರ್ತ್‌ಡೇ ಧೋನಿ: ದಿಗ್ಗಜರಿಗೂ ದಿಗ್ಭ್ರಮೆ ಮೂಡಿಸಿತ್ತು ಧೋನಿಯ ಈ ನಾಲ್ಕು ನಿರ್ಧಾರಗಳು!

ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ ವಿಶ್ವ ಕ್ರಿಕೆಟ್‌ನ ಚಾಣಾಕ್ಷ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ನಾಯಕತ್ವದಲ್ಲಿ ಧೋನಿ ಭಾರತಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಏಕದಿನ ಮತ್ತು ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ನ ಪಟ್ಟಕ್ಕೇರಿತ್ತು. ಈ ವಿಶೇಷ ಸಾಧನೆಯನ್ನು ಮಾಡಿದ ಧೋನಿ ಇಂದು(ಜುಲೈ 7) 41ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ.
ನಾಯಕನಾಗಿದ್ದ ವೇಳೆ ಧೋನಿ ಟೀಮ್ ಇಂಡಿಯಾ ಪರವಾಗಿ ಕೆಲ ಊಹೆಗೂ ಮೀರಿದ ನಿರ್ಧಾರಗಳ ಮೈದಾನದಲ್ಲಿ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಧೋನಿ ತೆಗೆದುಕೊಂಡ ನಿರ್ಧಾರಗಳು ಎಲ್ಲರನ್ನೂ ಅಚ್ಚರಿಯುಂಟು ಮಾಡುತ್ತಿತ್ತು. ಆದರೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಮಾಹಿಯ ನಿರ್ಧಾರಗಳು ಫಲಿತಾಂಶವನ್ನು ನೀಡುತ್ತಿದ್ದವು.
ನಾಯಕನಾಗಿದ್ದ ಸಂದರ್ಭದಲ್ಲಿ ಧೋನಿ ತೆಗೆದುಕೊಂಡ ಕೆಲ ನಿರ್ಧಾರಗಳು ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲ ಕ್ರಿಕೆಟ್ ಪಂಡಿತರು, ದಿಗ್ಗಜ ಆಟಗಾರರಿಗೂ ದಿಗ್ಭ್ರಮೆ ಮೂಡಿಸುವಂತಿತ್ತು. ಅಂತಾ ಅಚ್ಚರಿ ಹುಟ್ಟಿಸುವಂತಾ 4 ನಿರ್ಧಾರಗಳ ಮಾಹಿತಿ ಇಲ್ಲಿದೆ..

ಚೊಚ್ಚಲ ಟಿ20 ವಿಶ್ವಕಪ್ ಫೈನಲ್‌ನ ಕೊನೆಯ ಓವರ್
ಟಿ20 ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಟೀಮ್ ಇಂಡಿಯಾಗೆ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ಬದ್ಧ ಎದುರಾಳಿ ಪಾಕಿಸ್ತಾನ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನೀಡಿದ್ದ ಗುರಿಯನ್ನು ಪಾಕಿಸ್ತಾನ ಬೆನ್ನಟ್ಟಲು ಆರಂಭಿಸಿತ್ತು. ಅಂತಿಮ ಓವರ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 13 ರನ್‌ಗಳ ಅವಶ್ಯಕತೆಯಿತ್ತು. ಪಾಕ್ ತನ್ನ 9 ವಿಕೆಟ್‌ಗಳು ಅದಾಗಲೇ ಕಳೆದುಕೊಂಡಿತ್ತು. ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಕ್ರೀಸ್‌ನಲ್ಲಿದ್ದು ಗೆಲುವಿಗಾಗಿ ಪಣತೊಟ್ಟಿದ್ದರು.
ಈ ಅಂತಿಮ ಓವರ್‌ನಲ್ಲಿ ಧೋನಿಯ ಮುಂದೆ ಎರಡು ಆಯ್ಕೆಗಳಿತ್ತು. ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಬೌಲಿಂಗ್ ಕೋಟಾ ಇನ್ನೂ ಮುಗಿದಿರಲಿಲ್ಲ. ಮತ್ತೊಂದೆಡೆ ಯುವ ಆಟಗಾರ ಜೋಗಿಂದರ್ ಶರ್ಮಾ ಇದ್ದರು. ಕ್ರಿಕೆಟ್ ಅಭಿಮಾನಿಗಳೆಲ್ಲಾ ಅನುಭವಿ ಹರ್ಭಜನ್ ಸಿಂಗ್ ಕೈಗೆ ಬಾಲ್ ನೀಡುತ್ತಾರೆ ಎಂದೇ ಭಾವಿಸಿದ್ದರು. ಆದರೆ ಧೋನಿ ಬಾಲ್ ನೀಡಿದ್ದು ಅನನುಭವಿ ಜೋಗಿಂದರ್ ಶರ್ಮಾಗೆ. ಮೊದಲೆರಡು ಎಸೆತದಲ್ಲಿ ಸಿಕ್ಸರ್ ಸಹಿತ ರನ್ ನೀಡಿದ ಜೋಗಿಂದರ್ ಶರ್ಮಾ ಧೋನಿ ನಿರ್ಧಾರವನ್ನು ತಲೆಕೆಳಗೆ ಮಾಡುತ್ತಾರೆ ಎಂದೇ ಎಲ್ಲಾರೂ ಅಂದುಕೊಂಡರು. ಆದರೆ ಮುಂದಿನ ಎಸೆತದಲ್ಲಿ ಮಿಸ್ಬಾ ಉಲ್ ಹಕ್ ವಿಕೆಟ್ ಪಡೆದ ಜೋಗಿಂದರ್ ಶರ್ಮಾ ಭಾರತದ ಗೆಲುವಿಗೆ ಕಾರಣರಾದರು.

2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಮತ್ತೊಂದು ಅಚ್ಚರಿ
ಎಂಎಸ್ ಧೋನಿ ತೆಗೆದುಕೊಂಡ ಮತ್ತೊಂದು ಅಚ್ಚರಿಯ ನಿರ್ಧಾರವೆಂದರೆ ಟೀಮ್ ಇಂಡಿಯಾ 2011ರ ಏಕದಿನ ವಿಶ್ವಕಪ್ ಗೆದ್ದ ಫೈನಲ್ ಪಂದ್ಯದಲ್ಲಿ. ಟೀಮ್ ಇಂಡಿಯಾ ಗೆಲ್ಲಲು 28.2 ಓವರ್‌ಗಳಲ್ಲಿ 161ರನ್‌ಗಳ ಅಗತ್ಯವಿತ್ತು. ಟೀಮ್ ಇಂಡಿಯಾ ತನ್ನ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಮೂರನೇ ವಿಕೆಟ್ ಕೊಹ್ಲಿ ಔಟಾಗುತ್ತಿದ್ದಂತೆಯೇ ಟೂರ್ನಿಯುದ್ದಕ್ಕೂ ಅದ್ಭುತ ಫಾರ್ಮ್‌ನಲ್ಲಿದ್ದ ಯುವರಾಜ್ ಸಿಂಗ್ ಬ್ಯಾಟಿಂಗ್‌ಗೆ ಇಳಿಯಬೇಕಾಗಿತ್ತು.
ಭಾರತೀಯ ಕ್ರಿಕೆಟ್‌ನ ಅಭಿಮಾನಿಗಳು ಇಂಥಾ ಸಂದರ್ಭದಲ್ಲಿ ಯುವರಾಜ್ ಸಿಂಗ್ ಅಂಗಳದಕ್ಕಿಳಿಯುವುದನ್ನು ಎದುರುನೋಡುತ್ತಿದ್ದರು. ಕ್ರಮಾಂಕದ ಪ್ರಕಾರ ಯುವರಾಜ್ ಸಿಂಗ್ ಅವರೇ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಿತ್ತು. ಆದರೆ ಯುವಿಯ ಬದಲು ಟೀಮ್ ಇಂಡಿಯಾ ನಾಯಕ ಧೋನಿ ತಾನೇ ಆಡಲು ಇಳಿದಿದ್ದರು. ಅಲ್ಲದೆ ಗೌತಮ್ ಗಂಭೀರ್ ಜೊತೆಗೆ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು. ಈ ಪಂದ್ಯದಲ್ಲಿ ಧೋನಿ ಅಜೇಯ 91 ರನ್ ಗಳಿಸಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. ಭಾರತ ಎರಡನೇ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು.

ವಿವಾದಕ್ಕೆ ಕಾರಣವಾದ ಧೋನಿಯ ನಿರ್ಧಾರ
ಮಹೇಂದ್ರ ಸಿಂಗ್ ಧೋನಿಯ ವಿವಾದಿತ ನಿರ್ಧಾರವೆಂದರೆ ಅದು 2012ರ ಏಕದಿನ ತ್ರಿಕೋನ ಸರಣಿಯಲ್ಲಿ ತೆಗೆದುಕೊಂಡ ನಿರ್ಧಾರ. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಈ ತ್ರಿಕೋನ ಸರಣಿಯಲ್ಲಿ ಭಾರತದ ಜೊತೆಗೆ ಪಾಲ್ಗೊಂಡಿತ್ತು. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಅಗ್ರ ಮೂವರು ಆಟಗಾರರಿಗೆ ರೊಟೇಶನ್ ಪದ್ದತಿಯನ್ನು ಮಾಡಲಾಯಿತು. ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ಅವರಿಗೆ ರೊಟೆಶನ್ ಆಧಾರದಲ್ಲಿ ವಿಶ್ರಾಂತಿ ನೀಡಲು ನಿರ್ಧರಿಸಿದ್ದರು.
ಆದರೆ ಈ ರೊಟೇಶನ್ ಪದ್ದತಿಯಲ್ಲಿ ಧೋನಿ ವೈಫಲ್ಯವನ್ನು ಕಂಡರು. ನಂತರ ಇದು ಸಾಕಷ್ಟು ಚರ್ಚೆಗೂ ಕಾರಣವಾಯಿತು. ಈ ಸರಣಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಲು ವಿಫಲವಾಗಿ ಹೊರಬಿದ್ದಿತ್ತು. ಆದರೆ ತಮ್ಮ ನಿರ್ಧಾರವನ್ನು ನಾಯಕ ಧೋನಿ ಸಮರ್ಥಿಸಿಕೊಂಡರು. ಆಟಗಾರರು ಗಾಯಗೊಳ್ಳದಂತೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ಕಾರಣ ಮುಂದಿಟ್ಟರು. ಆದರೆ ಈ ನಿರ್ಧಾರದ ಬಗ್ಗೆ ಗೌತಮ್ ಗಂಭೀರ್ ತಮ್ಮ ನಿವೃತ್ತಿಯ ಬಳಿಕ ಧೋನಿಯನ್ನು ಟೀಕಿಸಿ ಸುದ್ದಿಯಾಗಿದ್ದರು.

ಐಪಿಎಲ್‌ನಲ್ಲಿ ಮಿಂಚಿದ ಧೋನಿಯ ಡ್ಯಾಡ್ಸ್ ಆರ್ಮಿ
2018ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡು ವರ್ಷಗಳ ನಿಷೇಧವನ್ನು ಪೂರ್ಣಗೊಳಿಸಿ ಕಮ್‌ಬ್ಯಾಕ್ ಮಾಡಿತ್ತು. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸದಾಗಿ ಆಯ್ಕೆ ಮಾಡಿಕೊಳ್ಳುವಾಗಲೂ ಹಿರಿಯ ಆಟಗಾರರನ್ನೇ ತಂಡಕ್ಕೆ ಸೇರಿಸಿಕೊಂಡಿತ್ತು. ಸಿಎಸ್‌ಕೆ ತಂಡದ ಎಲ್ಲಾ ಆಟಗಾರರೂ 30 ವರ್ಷ ಮೇಲ್ಪಟ್ಟವರೇ ಆಗಿದ್ದರು. ಅದರಲ್ಲೂ ಕೆಲವರಂತೂ 40ರ ಆಸುಪಾಸಿನಲ್ಲಿದ್ದರು. ಈ ಕಾರಣಕ್ಕೆ ಈ ತಂಡವನ್ನು ಡ್ಯಾಡ್ಸ್ ಆರ್ಮಿ ಎಂದು ಕ್ರಿಕೆಟ್ ಅಭಿಮಾನಿಗಳು ಕಾಲೆಳೆಯಲು ಆರಂಭಿಸಿದ್ದರು. ಆದರೆ ಇದೇ ಹಿರಿಯ ಆಟಗಾರರು ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications