
ನವದೆಹಲಿ: ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಎರಡನೇ ಮಗುವಿಗೆ ತಂದೆಯಾಗಲಿದ್ದಾರೆ. ಭಜ್ಜಿ ಪತ್ನಿ, ನಟಿ ಗೀತಾ ಬಸ್ರಾ ಮತ್ತು ಭಜ್ಜಿ ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದಾರೆ. ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರೂ ಈ ಸಂಗತಿ ತಿಳಿಸಿದ್ದಾರೆ.
ಗೀತಾ ಬಸ್ರಾ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಸುರಿ ಗೀತಾ, ಹರ್ಭಜನ್ ಸಿಂಗ್ ಮತ್ತು ಪುತ್ರಿ ಹಿನಾಯ ಇದ್ದಾರೆ. ಹಿನಾಯ ಕೈಯಲ್ಲಿ ಕಪ್ಪು ಬಣ್ಣದ ಟಿ ಶರ್ಟ್ ಇದ್ದು, ಇದರಲ್ಲಿ 'ಸೂನ್ ಟುಬಿ ಬಿಗ್ ಸಿಸ್ಟರ್' (ಶೀಘ್ರ ಹಿರಿಯ ಸಹೋದರಿ ಅನ್ನಿಸಲಿದ್ದೇನೆ) ಎಂದು ಬರೆದುಕೊಂಡಿದೆ.
ಹರ್ಭಜನ್ ಸಿಂಗ್-ಗೀತಾ ಬಸ್ರಾ ಚಿಕ್ಕ ಕುಟುಂಬವಿರುವ ಈ ಚಿತ್ರದ ಫೋಟೋ ನೋಡೋಕೆ ಮುದ್ದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ್ಹಾಗೆ ಟ್ವಿಟರ್ ಪೋಸ್ಟ್ ಜೊತೆ ಕಮಿಂಗ್ ಸೂನ್ ಜುಲೈ 2021 (ಜುಲೈ 2021ಕ್ಕೆ ಬರಲಿದೆ) ಎಂದು ಬರೆದುಕೊಳ್ಳಲಾಗಿದೆ.
ಹರ್ಭಜನ್ ಮತ್ತು ಗೀತಾ ಮದುವೆ 2015 ಅಕ್ಟೋಬರ್ 29ರಂದು ಪಂಜಾಬ್‌ನ ಜಲಂದರ್‌ನಲ್ಲಿ ನಡೆದಿತ್ತು. ಬಲಗೈ ಆರ್ಮ್‌ಬ್ರೇಕ್ ಬೌಲರ್ ಆಗಿರುವ ಭಜ್ಜಿ ಭಾರತ ಪರ 103 ಟೆಸ್ಟ್ ಪಂದ್ಯಗಳಲ್ಲಿ 2225 ರನ್, 417 ವಿಕೆಟ್, 236 ಏಕದಿನ ಪಂದ್ಯಗಳಲ್ಲಿ 1237 ರನ್, 269 ವಿಕೆಟ್, 28 ಟಿ20ಐ ಪಂದ್ಯಗಳಲ್ಲಿ 108 ರನ್, 25 ವಿಕೆಟ್ ಪಡೆದಿದ್ದಾರೆ. 2019ರ ಸೀಸನ್‌ನಲ್ಲಿ ಹರ್ಭಜನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.