ನಾನು ನಾಯಕನಾಗಲಿಲ್ಲ ಏಕೆಂದರೆ ಬಿಸಿಸಿಐನಲ್ಲಿ ನನಗೆ ಬೇಕಾದವರು ಇರಲಿಲ್ಲ: ಸಂಚಲನ ಮೂಡಿಸಿದ ಹರ್ಭಜನ್ ಹೇಳಿಕೆ

ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ನಿವೃತ್ತಿಯ ಬಳಿಕವೂ ಭಜ್ಜಿ ಆಗಾಗ ತಮ್ಮ ಹೇಳಿಕೆಗಳಿಂದ ಸುದ್ದಿಯಾಗುತ್ತಲೇ ಇದ್ದಾರೆ. 41ರ ಹರೆಯದ ಹರ್ಭಜನ್ ಸಿಂಗ್ ಈಗ ಐಪಿಎಲ್‌ನಲ್ಲಿ ಕೋಚಿಂಗ್ ವಿಭಾಗದತ್ತ ಗಮನ ಹರಿಸುತ್ತಿದ್ದಾರೆ. ಈ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಈ ಮಧ್ಯೆ ಹರ್ಭಜನ್ ಸಿಂಗ್ ಹೇಳಿಕೆಯೊಂದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಟೀಮ್ ಇಂಡಿಯಾ ನಾಯಕತ್ವದ ವಿಚಾರವಾಗಿ ಮಾತನಾಡುತ್ತಾ ಹರ್ಭಜನ್ ಸಿಂಗ್ ಗಂಭೀರ ಹೇಳಿಕೆಯೊಂದನ್ನು ನೀಡಿದ್ದಾರೆ. ಭಾರತ ತಂಡದ ನಾಯಕತ್ವ ಪಡೆಯಬೇಕಿದ್ದರೆ ಬಿಸಿಸಿಐನಲ್ಲಿ ತಮಗೆ ಬೇಕಾದವರು ಇದ್ದರೆ ಮಾತ್ರ ಸಾಧ್ಯ ಎಂಬರ್ಥದ ಮಾತುಗಳನ್ನು ಭಜ್ಜಿ ಆಡಿರುವುದು ಈಗ ಚರ್ಚೆಯ ವಸ್ತುವಾಗಿದೆ.

ಉನ್ನತ ಹುದ್ದೆಯಲ್ಲಿದ್ದವರಿಗೆ ಆಪ್ತವಾಗಿದ್ದರೆ ಮಾತ್ರ ನಾಯಕತ್ವ
ನ್ಯೂಸ್ 18ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹರ್ಭಜನ್ ಸಿಂಗ್ ಮನಬಿಚ್ಚಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ನಾಯಕನಾಗಿ ಯಶಸ್ಸು ಸಾಧಿಸಿದ್ದರು ಅದಕ್ಕೆ ಯಾರಿಂದಲೂ ಬೆಂಬಲ ದೊರೆಯದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಬಿಸಿಸಿಐನ ಪ್ರಭಾವಶಾಲಿ ಹುದ್ದೆಗಳಲ್ಲಿ ನಿಮಗೆ ಆಪ್ತರಾದವರು ಇದ್ದರೆ ಮಾತ್ರವೇ ಅಂತಾ ಹುದ್ದೆಗಳು ದೊರೆಯಲು ಸಾಧ್ಯ ಎಂದು ಹರ್ಭಜನ್ ಸಿಂಗ್ ನೇರವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ಭಜ್ಜಿ
ಹರ್ಭಜನ್ ಸಿಂಗ್ ಚಾಂಪಿಯನ್ಸ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ ಸಂದರ್ಭದಲ್ಲಿ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಆದರೆ ಅದಾದ ಬಳಿಕ ಹರ್ಭಜನ್ ಸಿಂಗ್‌ಗೆ ಐಪಿಎಲ್‌ನಲ್ಲಿಯೂ ನಾಯಕತ್ವ ಕೈ ತಪ್ಪಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡದ ನಾಯಕತ್ವ ದೊರೆಯದ ವಿಚಾರವಾಗಿ ಭಜ್ಜಿಗೆ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಚರ್ಚೆಗೆ ಕಾರಣವಾಯ್ತು ಭಜ್ಜಿ ಹೇಳಿಕೆ
"ನನ್ನ ಸಾಧನೆಗಳಲ್ಲಿ ಅದೂ ಕೂಡ ಒಂದು. ಆದರೆ ನನ್ನ ನಾಯಕತ್ವದ ಬಗ್ಗೆ ಯಾರೂ ಕೂಡ ಮಾತನಾಡುವುದಿಲ್ಲ. ನನಗೆ ಬಿಸಿಸಿಐನಲ್ಲಿ ಪರಿಚಯದವರು ಯಾರೂ ಇರಲಿಲ್ಲ. ರಾಷ್ಟ್ರೀಯ ತಂಡದ ನಾಯಕತ್ವವನ್ನು ಪಡೆಯಬೇಕಿದ್ದರೆ ಯಾರಾದರೂ ಬೆಂಬಲಿಸುವವರು ಬೇಕಿತ್ತು. ಬಿಸಿಸಿಐನ ಉನ್ನತ ಹುದ್ದೆಗಳಲ್ಲಿ ಇರುವವರಿಗೆ ನೀವು ಫೇವರೀಟ್‌ಗಳು ಆಗಿಲ್ಲದಿದ್ದರೆ ನಿಮಗೆ ನಾಯಕತ್ವದಂತಾ ಗೌರವಗಳು ದೊರೆಯುವುದಿಲ್ಲ" ಎಂದು ಹರ್ಭಜನ್ ಸಿಂಗ್ ಹೇಳಿಕೆ ನೀಡಿದ್ದಾರೆ. ಹರ್ಭಜನ್ ಸಿಂಗ್ ನೀಡಿದ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಆಟಗಾರನಾಗಿ ತಂಡವನ್ನು ಪ್ರತಿನಿಧಿಸಿರುವುದು ಖುಷಿ ನೀಡಿದೆ
ಮುಂದುವರಿದು ಮಾತನಾಡಿದ ಹರ್ಭಜನ್ ಸಿಂಗ್ "ಆ ವಿಚಾರವನ್ನು ಬಿಡೋಣ, ಆದರೆ ಸಾಕಷ್ಟು ನಾಯಕರಿಗೆ ಸಲಹೆಗಳನ್ನು ನೀಡುತ್ತಾ ತಂಡವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದೆ. ನಾನು ತಂಡದ ನಾಯಕನೋ ಅಲ್ಲವೋ ಎಂಬುದು ದೊಡ್ಡ ಸಂಗತಿಯಲ್ಲ. ನಾನು ಆಟಗಾರನಾಗಿ ಈ ದೇಶಕ್ಕೆ ಸೇವೆ ನೀಡಲು ಸಾಧ್ಯವಾಗಿದ್ದಕ್ಕೆ ಖುಷಿ ಪಡುತ್ತೇನೆ" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications