ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಹರ್ಭಜನ್ ಸಿಂಗ್ ಅವರು 2024ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದ ವಿಕೆಟ್ ಕೀಪರ್ ಸ್ಥಾನದ ಕುರಿತು ತಮ್ಮ ಅಭಿಪ್ರಾಯವನ್ನು ನೀಡಿದರು. ಅಲ್ಲದೆ, ರೋಹಿತ್ ಶರ್ಮಾ ನಂತರ ಭಾರತ ತಂಡವನ್ನು ಮುನ್ನಡೆಸುವ ನಾಯಕನ ಬಗ್ಗೆಯೂ ಮಾತನಾಡಿದರು.
ರಿಷಭ್ ಪಂತ್, ಕೆಎಲ್ ರಾಹುಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಹೋರಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಆದರೆ, ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಈ ರೇಸ್‌ನಲ್ಲಿ ಉಳಿದವರಿಗಿಂತ ಮುಂದಿದ್ದಾರೆ ಎಂದು ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಭಾವಿಸಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನಲ್ಲಿ ಸಂಜು ಸ್ಯಾಮ್ಸನ್ ನಿರ್ಣಾಯಕ ಪಾತ್ರ ನೋಡಿದ ನಂತರ, ಹರ್ಭಜನ್ ಸಿಂಗ್ ಕೇವಲ ವಿಕೆಟ್ ಕೀಪರ್ ಪಾತ್ರಕ್ಕೆ ಸಂಜು ಸ್ಯಾಮ್ಸನ್ ಹೆಸರನ್ನು ಪ್ರತಿಪಾದಿಸಲಿಲ್ಲ. ಆದರೆ ರೋಹಿತ್ ಶರ್ಮಾ ಬಳಿಕ ಭಾರತ ತಂಡದ ಟಿ20 ನಾಯಕನಾಗಿ ಅವರನ್ನು ಬೆಂಬಲಿಸಿದರು.

ಪ್ರಸ್ತುತ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ತಂಡದಲ್ಲಿ ಟಿ20 ಸ್ವರೂಪದ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ರೋಹಿತ್ ಶರ್ಮಾ ನಂತರ ಭಾರತ ತಂಡದ ಪೂರ್ಣ ಸಮಯದ ವೈಟ್-ಬಾಲ್ ನಾಯಕನಾಗಲು ಸದ್ಯದ ಅವರ ಫಾರ್ಮ್ ಮತ್ತು ಫಿಟ್ನೆಸ್ ಅಡ್ಡಿಯಾಗುತ್ತಿದೆ.
ಐಪಿಎಲ್ 2024ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿರುವ ಸಂಜು ಸ್ಯಾಮ್ಸನ್ ಸ್ವತಃ ಬ್ಯಾಟರ್ ಆಗಿ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ, ಭಾರತ ತಂಡದ ವಿಕೆಟ್ ಕೀಪರ್ ಮತ್ತು ನಾಯಕನ ಜವಾಬ್ದಾರಿಗೆ ಸಂಜು ಸ್ಯಾಮ್ಸನ್ ಉತ್ತಮ ಆಯ್ಕೆ ಎಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ.
"ಯಶಸ್ವಿ ಜೈಸ್ವಾಲ್ ಅವರ ಶತಕ ಕ್ಲಾಸ್ ಆಟಕ್ಕೆ ಶಾಶ್ವತ ಪುರಾವೆಯಾಗಿದೆ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಬಗ್ಗೆ ಯಾವುದೇ ಚರ್ಚೆ ನಡೆಯಬಾರದು. ಸಂಜು ಸ್ಯಾಮ್ಸನ್ ಟಿ20 ವಿಶ್ವಕಪ್‌ಗಾಗಿ ಭಾರತ ತಂಡಕ್ಕೆ ಕಾಲಿಡಬೇಕು ಮತ್ತು ರೋಹಿತ್ ನಂತರ ಭಾರತಕ್ಕೆ ಮುಂದಿನ ಟಿ20 ನಾಯಕನಾಗಿಯೂ ಸಹ ಜವಾಬ್ದಾರಿ ತೆಗೆದುಕೊಳ್ಳಬೇಕು," ಎಂದು ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 9 ವಿಕೆಟ್ ಗೆಲುವು ಸಾಧಿಸಿದ ನಂತರ ಹರ್ಭಜನ್ ಸಿಂಗ್ ಎಕ್ಸ್ (ಟ್ವಿಟ್ಟರ್) ನಲ್ಲಿ ಬರೆದುಕೊಂಡಿದ್ದಾರೆ.
ಸಂಜು ಸ್ಯಾಮ್ಸನ್ ಈ ಋತುವಿನ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ಗಾಗಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಆಡಿದ 8 ಪಂದ್ಯಗಳ ಬಳಿಕ ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಫ್ರಾಂಚೈಸಿಯನ್ನು ಮುನ್ನಡೆಸುತ್ತಿದ್ದಾರೆ.
ವಿಕೆಟ್ ಕೀಪರ್-ಬ್ಯಾಟರ್ ಪ್ರಸ್ತುತ ಈ ಅವಧಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. 8 ಪಂದ್ಯಗಳಿಂದ 62.80ರ ಸರಾಸರಿ ಮತ್ತು 152.42 ಸ್ಟ್ರೈಕ್-ರೇಟ್‌ನಲ್ಲಿ ಒಟ್ಟು 314 ರನ್‌ಗಳನ್ನು ಗಳಿಸಿದ್ದಾರೆ.
2024ರ ಐಪಿಎಲ್ ಅಭಿಯಾನದಲ್ಲಿ ಸಂಜು ಸ್ಯಾಮ್ಸನ್ 3 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಆದರೆ, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಇದುವರೆಗಿನ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಅದು ಬ್ಯಾಟರ್, ಬೌಲರ್ ಮತ್ತು ನಾಯಕನಾಗಿ ವಿಫಲರಾಗಿದ್ದಾರೆ.