ಆತ ಇಡೀ ತಂಡ ಯೋಚಿಸುವ ರೀತಿಯನ್ನೇ ಬದಲಾಯಿಸಿದ: ಭಾರತದ ನಾಯಕನ ಬಗ್ಗೆ ಹರ್ಭಜನ್ ಸಿಂಗ್ ಮೆಚ್ಚುಗೆ

ಭಾರತೀಯ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಹರ್ಭಜನ್ ಸಿಂಗ್ ಮೊನ್ನೆಯಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ನಿವೃತ್ತಿಯ ಬಳಿಕ ಹರ್ಭಜನ್ ಸಿಂಗ್ ತಮ್ಮ ತಂಡದ ಸಹ ಆಟಗಾರರ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ತಂಡದ ಓರ್ವ ನಾಯಕನ ಬಗ್ಗೆ ಹರ್ಭಜನ್ ಸಿಂಗ್ ವಿಶೇಷವಾಗಿ ಮಾತನಾಡಿದ್ದು ಆತನಂತಾ ಆಟಗಾರರು ತಂಡಕ್ಕೆ ಬಹಳ ಅಗತ್ಯವಿದ್ದು ತಂಡದ ಏಳಿಗೆಗೆ ಆತನಂತಾ ಆಟಗಾರರ ಅಗತ್ಯ ಭಾರತ ತಂಡಕ್ಕೆ ಹೆಚ್ಚಿದೆ ಎಂದಿದ್ದಾರೆ.
ಭಾರತೀಯ ಕ್ರಿಕೆಟ್ ತಂಡ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಬಹಳಷ್ಟು ಯಶಸ್ಸು ಸಾಧಿಸುತ್ತಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಿ ನೆಲದಲ್ಲಿಯೂ ಟೀಮ್ ಇಂಡಿಯಾ ಸರಣಿಯನ್ನು ಗೆಲ್ಲುತ್ತಿದೆ. ಆಸ್ಟ್ರೇಲಿಯಾ ನೆಲದಲ್ಲಿ ಸತತ ಎರಡು ಬಾರಿ ಭಾರತ ಟೆಸ್ಟ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ನೆಲದಲ್ಲಿಯೂ ಭಾರತದ ಪ್ರದರ್ಶನ ಅಮೋಘವಾಗಿತ್ತು. ಭಾರತ ತಂಡದ ಈ ಪ್ರದರ್ಶನದ ಹಿಂದೆ ಓರ್ವ ಆಟಗಾರನ ಕೊಡುಗೆ ಬಹಳಷ್ಟಿದೆ ಎಂದಿದ್ದಾರೆ ಹರ್ಭಜನ್ ಸಿಂಗ್. ಆಸ್ಟ್ರೇಲಿಯಾದಂತಾ ಸವಾಲಿನ ಪರಿಸ್ಥಿತಿಯಲ್ಲಿ ಭಾರತ ಗೆಲ್ಲುವ ಯೋಚನೆ ಮಾಡಿದ್ದು ಈತನ ನಾಯಕತ್ವದಿಂದ ಎಂದು ಹರ್ಭಜನ್ ಸಿಂಗ್ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಹಾಗಾದರೆ ಹರ್ಭಜನ್ ಸಿಂಗ್ ಈ ಮಾತುಗಳನ್ನು ಆಡಿದ್ದು ಯಾರ ಬಗ್ಗೆ? ಭಜ್ಜಿಯಿಂದ ಪ್ರಶಂಸೆಗೆ ಒಳಗಾದ ಟೀಮ್ ಇಂಡಿಯಾದ ನಾಯಕ ಯಾರು? ಮುಂದೆ ಓದಿ..

ಭಾರತದ ಟೆಸ್ಟ್ ನಾಯಕನನ್ನು ಹೊಗಳಿದ ಹರ್ಭಜನ್
ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಟೀಮ್ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿಯ ಬಗ್ಗೆ ಈ ರೀತಿಯ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಭಾರತದ ಮೂರು ಮಾದರಿಯ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಸೀಮಿತ ಓವರ್‌ಗಳ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತೀಯ ತಂಡವನ್ನು ಮುನ್ನಡೆಸುತ್ತಿದ್ದಾರೆ.

ವಿರಾಟ್ ಕೊಹ್ಲಿ ತರಹದ ಆಟಗಾರರು ತಂಡಕ್ಕೆ ಅಗತ್ಯ
ನಿವೃತ್ತಿಯ ಬಳಿಕ ಹರ್ಭಜನ್ ಸಿಂಗ್ ಇಂಡಿಯಾ ಟಿವಿ ಜೊತೆಗೆ ಮಾತನಾಡಿದರು. ಈ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಟೀಮ್ ಇಂಡಿಯಾ ಟೆಸ್ಟ್ ಮಾದರಿಯಲ್ಲಿ ಮತ್ತಷ್ಟು ಪ್ರಗತಿಯನ್ನು ಸಾಧಿಸಬೇಕಾದರೆ ವಿರಾಟ್ ಕೊಹ್ಲಿಯಂತಾ ಆಟಗಾರರು ತಂಡಕ್ಕೆ ಅಗತ್ಯ ಎಂದಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ವಿದೇಶಿ ನೆಲದಲ್ಲಿ ಟೆಸ್ಟ್ ಆಡುವಾಗ ತಂಡದ ಒಟ್ಟಾರೆ ಮನಸ್ಥಿತಿ ಹೇಗೆ ಬದಲಾಯಿತು ಎಂಬುದನ್ನು ಕೂಡ ವಿವರಿಸಿದ್ದಾರೆ.
ಅಜಿಂಕ್ಯ ರಹಾನೆ ಔಟಾದ ರೀತಿಗೆ ಬೇಸರ ವ್ಯಕ್ತಪಡಿಸಿದ ಸಂಜಯ್ ಬಂಗಾರ್

ಬದಲಾಯಿತು ತಂಡದ ಮನಸ್ಥಿತಿ
ಆತ ನಾಯಕತ್ವಕ್ಕೆ ಅದ್ಭುತವಾಗಿ ಹೊಂದಿಕೊಳ್ಳುತ್ತಾನೆ. ತಂಡ ಮುನ್ನಡೆಯಲು ಆತನಂತಾ ಆಟಗಾರರ ಅಗತ್ಯ ಭಾರತ ತಂಡಕ್ಕಿದೆ. ಮೊದಲು ಭಾರತ ಆಸ್ಟ್ರೇಲಿಯಾ ತಂಡಕ್ಕೆ ತೆರಳುವಾಗ ಹೇಗೆ ಟೆಸ್ಟ್ ಪಂದ್ಯವನ್ನು ಉಳಿಸಿಕೊಳ್ಳುವುದು ಎಂಬ ಯೋಚನೆ ಮಾಡಲಾಗುತ್ತಿತ್ತು. ಆದರೆ ವಿರಾಟ್ ನಾಯಕತ್ವದಲ್ಲಿ ಆಸ್ಟ್ರೇಲಿಯಾಗೆ ಪ್ರವಾಸ ಕೈಗೊಳ್ಳುವಾಗ ಹೇಗೆ ಸರಣಿಯನ್ನು ಗೆಲ್ಲುವುದು ಎಂದು ಇಡೀ ತಂಡ ಯೋಚಿಸುತ್ತದೆ" ಎಂದು ಹರ್ಭಜನ್ ಸಿಂಗ್ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತಂಡದ ಮನಸ್ಥಿತಿ ಹೇಗೆ ಬದಲಾಯಿತು ಎಂಬುದನ್ನು ವಿವರಿಸಿದ್ದಾರೆ.

"ಗೆಲ್ಲಬೇಕು ಇಲ್ಲಾ ಸೋಲಬೇಕು.. ಡ್ರಾಗೆ ಮಹತ್ವವಿಲ್ಲ"
ಇನ್ನು ಈ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಸರಣಿಯೊಂದರಲ್ಲಿ ಭಾರತ ಪಂದ್ಯವನ್ನು ಸೋತ ಬಳಿಕ ವಿರಾಟ್ ಕೊಹ್ಲಿ ಆಡಿದ್ದ ಮಾತನ್ನು ನೆನಪಿಸಿಕೊಂಡಿದ್ದಾರೆ. "ಸರಣಿಯೊಂದರಲ್ಲಿ ಭಾರತ ಸಾಕಷ್ಟು ರನ್‌ಗಳಿಸಿದ ನಂತರವೂ ಸೋಲು ಕಂಡ ನಂತರ ವಿರಾಟ್ ಕೊಹ್ಲಿ ಆಡಿದ ಒಂದು ಮಾತು ನನಗೆ ಚೆನ್ನಾಗಿ ನೆನಪಿದೆ. ಆ ಪಂದ್ಯದಲ್ಲಿ ಭಾರತ 400ಕ್ಕೂ ಹೆಚ್ಚು ರನ್‌ಗಳನ್ನು ಬೆನ್ನಟ್ಟಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕವನ್ನು ಬಾರಿಸಿದ್ದರು. ಆ ಪಂದ್ಯ ಮುಗಿದ ನಂತರ ಫೆವಿಲಿಯನ್‌ಗೆ ತೆರಳಿದಾಗ ವಿರಾಟ್ ಕೊಹ್ಲಿಯಲ್ಲಿ ನಾನು ಪಂದ್ಯ ಡ್ರಾದಲ್ಲಿಯಾದರೂ ಅಂತ್ಯವಾಗಬೇಕಿತ್ತು ಎಂದಿದ್ದೆ. ಅದಕ್ಕೆ ವಿರಾಟ್ ಕೊಹ್ಲಿ 'ಡ್ರಾಗೆ ಪ್ರಾಮುಖ್ಯತೆಯಿಲ್ಲ. ಒಂದೋ ನೀವು ಗೆಲ್ಲಬೇಕು, ಇಲ್ಲಾ ಸೋಲಬೇಕು' ಎಂದಿದ್ದರು. ಆ ದಿನ ನಾವು ಹೋರಾಡುವುದನ್ನು ಕಲಿತೆವು. ನಾವು ಗೆಲ್ಲುವುದನ್ನು ಕಲಿಯುತ್ತೇವೆ ಹಾಗೂ ಮುಂದೊಂದು ದಿನ ಗೆಲ್ಲುತ್ತೇವೆ" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications