ದೀಪಕ್ ಚಹರ್‌ಗೆ ಪ್ರಶಸ್ತಿ ಕೊಟ್ಟಂತೆ ನಮಗೂ ಕೊಟ್ಟಿದ್ದರೆ ಕೋಟ್ಯಧಿಪತಿಯಾಗಿರುತ್ತಿದ್ದೆ: ಹರ್ಭಜನ್

ಸದ್ಯ ನ್ಯೂಜಿಲೆಂಡ್ ಭಾರತ ಪ್ರವಾಸವನ್ನು ಕೈಗೊಂಡಿದ್ದು ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಮೊದಲಿಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ಆರಂಭವಾಗಿದ್ದು ಮೊದಲನೇ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಜಯ ಸಾಧಿಸುವುದರ ಮೂಲಕ 1-0 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡದ ಪರ ಮಾರ್ಟಿನ್ ಗಪ್ಟಿಲ್ 42 ಎಸೆತಗಳಲ್ಲಿ 70 ರನ್ ಬಾರಿಸಿ ಅಬ್ಬರಿಸಿದರು. 3 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿದ ಮಾರ್ಟಿನ್ ಗಪ್ಟಿಲ್ 18ನೇ ಓವರ್‌ನಲ್ಲಿ ದೀಪಕ್ ಚಹರ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಹೌದು, 18ನೇ ಓವರ್ ಬೌಲಿಂಗ್ ಮಾಡಲು ಬಂದ ದೀಪಕ್ ಚಹರ್ ಎಸೆದ ಮೊದಲ ಎಸೆತಕ್ಕೆ ಗಪ್ಟಿಲ್ ಸಿಕ್ಸರ್ ಬಾರಿಸಿದರು. ಹೀಗೆ ದೀಪಕ್ ಚಹರ್ ಎಸೆತಕ್ಕೆ ಸಿಕ್ಸರ್ ಬಾರಿಸಿದ ಮಾರ್ಟಿನ್ ಗಪ್ಟಿಲ್ ದೀಪಕ್ ಚಹರ್ ಅವರನ್ನೇ ದಿಟ್ಟಿಸಿ ನೋಡುವುದರ ಮೂಲಕ ಕೆರಳಿಸಿದ್ದರು. ಹೀಗೆ ಮೊದಲನೇ ಎಸೆತವನ್ನು ಹಾಕಿ ಸಿಕ್ಸರ್ ಚಚ್ಚಿಸಿಕೊಂಡಿದ್ದ ದೀಪಕ್ ಚಹರ್ ದ್ವಿತೀಯ ಎಸೆತದಲ್ಲಿ ಗಪ್ಟಿಲ್ ವಿಕೆಟ್ ಪಡೆಯುವ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡರು. ಹೌದು ವಿಕೆಟ್ ಪಡೆದ ನಂತರ ಮಾರ್ಟಿನ್ ಗಪ್ಟಿಲ್ ಅವರನ್ನು ದೀಪಕ್ ಚಹರ್ ದಿಟ್ಟಿಸಿ ನೋಡುವ ಮೂಲಕ ತಮ್ಮ ಸೇಡನ್ನು ತೀರಿಸಿಕೊಂಡರು.
ಹೀಗೆ ಜೈಪುರ ಕ್ರಿಕೆಟ್ ಕ್ರೀಡಾಂಗಣದ ಅಂಗಳದಲ್ಲಿ ಮಾರ್ಟಿನ್ ಗಪ್ಟಿಲ್ ಮತ್ತು ದೀಪಕ್ ಚಹರ್ ನಡುವೆ ನಡೆದ ದೃಷ್ಟಿಯುದ್ಧ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಮನರಂಜನೆಯನ್ನು ನೀಡಿತು. ಪಂದ್ಯ ಮುಗಿದ ನಂತರ ದೀಪಕ್ ಚಹರ್ ಮಾರ್ಟಿನ್ ಗಪ್ಟಿಲ್ ಅವರನ್ನು ದಿಟ್ಟಿಸಿ ನೋಡಿದ ಕ್ಷಣವನ್ನು ಮೂಮೆಂಟ್ ಆಫ್ ದಿ ಮ್ಯಾಚ್ ಎಂದು ಗುರುತಿಸಿ 1 ಲಕ್ಷ ಬಹುಮಾನ ನೀಡಲಾಯಿತು.
ಇದೀಗ ಈ ಪ್ರಶಸ್ತಿಯ ಕುರಿತು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮಾತನಾಡಿದ್ದು ತಾವು ಕ್ರಿಕೆಟ್ ಆಡುತ್ತಿದ್ದ ಸಮಯದಲ್ಲಿಯೂ ದಿಟ್ಟಿಸಿ ನೋಡಿದ್ದಕ್ಕೆ ಈ ರೀತಿ ಪ್ರಶಸ್ತಿ ನೀಡುವ ಹಾಗೆ ಇದ್ದಿದ್ದರೆ ನಾನು ಇಷ್ಟೊತ್ತಿಗೆ ಕೋಟ್ಯಧಿಪತಿಯಾಗಿರುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಹರ್ಭಜನ್ ಸಿಂಗ್ ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ಎದುರಾಳಿ ತಂಡದ ಆಟಗಾರನ ವಿಕೆಟ್ ಪಡೆದಾಗಲೆಲ್ಲಾ ಹೆಚ್ಚಾಗಿ ದಿಟ್ಟಿಸಿ ನೋಡುವ ಮೂಲಕ ಸಂಭ್ರಮಾಚರಣೆ ಮಾಡುತ್ತಿದ್ದರು. ಹೀಗಾಗಿಯೇ ದೀಪಕ್ ಚಹರ್ ಗಪ್ಟಿಲ್ ಅವರನ್ನು ದಿಟ್ಟಿಸಿ ನೋಡಿದ್ದಕ್ಕೆ ಪ್ರಶಸ್ತಿ ನೀಡಿದ್ದರ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಹರ್ಭಜನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications