ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಇವರು ಒಂದು ವಿಕೆಟ್ ಪಡೆಯುತ್ತಲೇ ಹೊಸ ದಾಖಲೆ ನಿರ್ಮಿಸಿದರು. ಹಾರ್ದಿಕ್ ತಮ್ಮ ಹೆಸರಿಗೆ ನಮೂದಿಸಿಕೊಂಡಿರುವ ಹೊಸ ದಾಖಲೆ ಯಾವುದು? ಇಲ್ಲಿದೆ ಮಾಹಿತಿ
ಟೀಮ್ ಇಂಡಿಯಾ ಸ್ಟಾರ್ ಬೌಲಿಂಗ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಏಷ್ಯಾ ಕಪ್ ಟಿ20ಯ ವೇಳೆ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ತಂಡದ ಭಾಗವಾಗಿರಲಿಲ್ಲ. ಗಾಯದಿಂದ ಚೇತರಿಸಿಕೊಂಡ ಬಳಿಕ ಪಾಂಡ್ಯ ದೇಶೀಯ ಟಿ20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಕಂಬ್ಯಾಕ್ ಮಾಡಿದರು. ಇವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವಿಗೆ ಕಾರಣರಾಗಿದ್ದರು. ಮೂರನೇ ಟಿ20 ಪಂದ್ಯದಲ್ಲಿ ಟ್ರಿಸ್ಟನ್ ಸ್ಟಬ್ಸ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು.

ಹಾರ್ದಿಕ್ ಪಾಂಡ್ಯ, ಸ್ಟಬ್ಸ್ ಅವರಿಗೆ ಆಫ್-ಸ್ಟಂಪ್‌ನಿಂದ ಹೊರಗೆ ಚೆಂಡನ್ನು ಹಾಕಿದರು. ಸ್ಟಬ್ಸ್ ಇದನ್ನು ಬಾರಿಸಲು ಕೆಣಕಿ ಜಿತೇಶ್ ಶರ್ಮಾ ಅವರಿಗೆ ಕ್ಯಾಚ್ ನೀಡಿದರು. ಈ ವಿಕೆಟ್ ಪಡೆಯುತ್ತಲೇ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಸಾಧನೆ ಮಾಡಿದ 3ನೇ ಭಾರತೀಯ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾದರು. ಇದಕ್ಕೂ ಮೊದಲು ಈ ಸಾಧನೆಯನ್ನು ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್, ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಮಾಡಿದ್ದರು.
ಹಾರ್ದಿಕ್ ಪಾಂಡ್ಯ ವಿಶ್ವ ಕ್ರಿಕೆಟ್‌ನಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದರು. 100 ವಿಕೆಟ್ ಹಾಗೂ ಸಾವಿರಕ್ಕೂ ಹೆಚ್ಚು ರನ್‌ಗಳನ್ನು ಬಾರಿಸಿದ ವಿಶ್ವದ ಮೊದಲ ವೇಗದ ಬೌಲಿಂಗ್ ಆಲ್‌ರೌಂಡರ್ ಎಂಬ ಹೆಗ್ಗಳಿಕೆ ಈಗ ಹಾರ್ದಿಕ್ ಪಾಲಾಗಿದೆ. ಇದಕ್ಕೂ ಮೊದಲು ಬಾಂಗ್ಲಾದೇಶದ ಶಾಕಿಬ್ ಅಲ್-ಹಸನ್, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಮತ್ತು ಜಿಂಬಾಬ್ವೆ ತಂಡದ ಸಿಕಂದರ್ ರಾಜಾ ಮಾಡಿದ್ದರು. ಆದರೆ ಈ ಮೂವರು ಆಟಗಾರರು ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳಾಗಿದ್ದಾರೆ. ಹಾರ್ದಿಕ್ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಶ್ರೇಯ ತಮ್ಮದಾಗಿಸಿಕೊಂಡರು.