ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟಿ20 ಪಂದ್ಯ ಪುಣೆಯಲ್ಲಿ ನಡೆಯಿತು. ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ 15 ರನ್ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪರ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಇವರಿಬ್ಬರೂ ನಾಲ್ಕನೇ ಟಿ20 ಪಂದ್ಯದಲ್ಲಿ ಲಯಕ್ಕೆ ಮರಳಿದ್ದು ತಂಡದ ಮ್ಯಾನೇಜ್ಮೆಂಟ್ ಮುಖದಲ್ಲಿ ಮಂದಹಾಸ ಮುಡಿಸಿದೆ.
ನಾಲ್ಕನೇ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ 181 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತು. ಈ ಗುರಿಯನ್ನು ಕಲೆ ಹಾಕುವ ಮುನ್ನ ಟೀಮ್ ಇಂಡಿಯಾ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ 3 ಅಮೂಲ್ಯ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆದಲ್ಲಿತ್ತು. ಈ ವೇಳೆ ಟೀಮ್ ಇಂಡಿಯಾದ ಭರವಸೆಯ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ನೈಜ ಆಟವನ್ನು ಆಡಿ ಮಿಂಚಿದರು. ಈ ಮೂಲಕ ಇವರು ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾದರು.

ಟೀಮ್ ಇಂಡಿಯಾದ ಭರವಸೆಯ ಆಟಗಾರ ಹಾರ್ದಿಕ್ ಪಾಂಡ್ಯ ಪುಣೆಯಲ್ಲಿ 176ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದರು. ಇವರು 50 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 53 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಈ ಮೂಲಕ ಹಾರ್ದಿಕ್ ಪಾಂಡ್ಯ 113 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದು, 1803 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಸೇರಿವೆ. ಇನ್ನು ಬೌಲಿಂಗ್‌ನಲ್ಲಿ 94 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಲ್‌ರೌಂಡರ್ ಎಂಬ ಹಿರಿಮೆಗೆ ಪಾತ್ರರಾದರು.
ಭಾರತ ಬ್ಯಾಟಿಂಗ್ ಮಾಡುವಗ ಹಾರ್ದಿಕ್ ಪಾಂಡ್ಯ 16ನೇ ಓವರ್‌ನಲ್ಲಿ 21 ಎಸೆತಗಳಲ್ಲಿ 28 ರನ್ ಸಿಡಿಸಿದ್ದರು. ಆದರೆ ಡೆತ್ ಓವರ್‌ಗಳಲ್ಲಿ ಇವರು ಆರ್ಭಟ ನಡೆಸಿದರು. ಇವರು 27 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರ್ಣಗೊಳಿಸಿದರು. ಇವರ ಆರ್ಭಟವನ್ನು ಕಂಡು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲಿರುವ ತಂಡಗಳಿಗೆ ನಡುಕ ಆರಂಭವಾಗಿದೆ. ಇನ್ನು ಈ ಅಮೋಘ ಇನಿಂಗ್ಸ್ ಪರಿಣಾಮ ಹಾರ್ದಿಕ್ ಪಾಂಡ್ಯ, ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿಯ ದಾಖಲೆಯನ್ನು ಅಳಿಸಿದರು.

ಹಾರ್ದಿಕ್ ಡೆತ್ ಓವರ್‌ಗಳಲ್ಲಿ ಗರಿಷ್ಠ ರನ್ ಬಾರಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಈ ಸಾಧನೆ ವಿರಾಟ್ ಹೆಸರಿನಲ್ಲಿತ್ತು. 16 ರಿಂದ 20 ಓವರ್‌ಗಳಲ್ಲಿ ವಿರಾಟ್ ಕೊಹ್ಲಿ 1032 ರನ್ ಕಲೆ ಹಾಕಿದ್ದರು. ಹಾರ್ದಿಕ್ ಪಾಂಡ್ಯ ಪುಣೆಯಲ್ಲಿ ಈ ದಾಖಲೆಯನ್ನು ಅಳಿಸಿ ಹಾಕಿದರು. ಸದ್ಯ ಹಾರ್ದಿಕ್ ಬುಟ್ಟಿಯಲ್ಲಿ 1068 ರನ್‌ಗಳಿವೆ. ಈ ಮೂಲಕ ಭಾರತದ ಪರ ಡೆತ್ ಓವರ್‌ಗಳಲ್ಲಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.