ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೆ ಟಿ20 ಪಂದ್ಯ ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಹಲವು ಸ್ಟಾರ್ ಆಟಗಾರರು ದಾಖಲೆಯ ಪುಸ್ತಕಕ್ಕೆ ಎಂಟ್ರಿ ನೀಡುವ ಕನಸು ಕಾಣುತ್ತಿದ್ದಾರೆ. ಈ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಟಗಾರ ಹಾರ್ದಿಕ್ ಪಾಂಡ್ಯ. ಐದನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅಮೋಘ ಪ್ರದರ್ಶನ ನೀಡಿದ್ದೇ ಆದಲ್ಲಿ ಮತ್ತೊಂದು ದಾಖಲೆ ಉಡೀಸ್ ಮಾಡಬಹುದು.
ಹಾರ್ದಿಕ್ ಪಾಂಡ್ಯ ಬರೋಡಾ ಪರ ರಣಜಿ ಆಡಿದರೂ, ಅವರಿಗೆ ತವರು ನೆಲ ಮುಂಬೈ. ಏಕೆಂದರೆ ಅವರು ಹೆಚ್ಚಾಗಿ ಐಪಿಎಲ್‌ನಲ್ಲಿ ಮುಂಬೈ ತಂಡವನ್ನೆ ಪ್ರತಿನಿಧಿಸಿದ್ದಾರೆ. ತಮ್ಮ ಎರಡನೇ ತವರಿನಲ್ಲಿ ಹಾರ್ದಿಕ್ ಪಾಂಡ್ಯ ಅಮೋಘ ಪ್ರದರ್ಶನ ನೀಡಿ ಮತ್ತೊಂದು ದಾಖಲೆಯನ್ನು ನಿರ್ಮಿಸುವ ಹೊಸ್ತಿಲಲ್ಲಿ ನಿಂತಿದ್ದಾರೆ. ಹಾಗಿದ್ದರೆ ಹಾರ್ದಿಕ್ ಪಾಂಡ್ಯ ಬರೆಯಲು ಸಜ್ಜಾಗಿರುವ ಆ ದಾಖಲೆ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಸದ್ಯ ಇಂಗ್ಲೆಂಡ್ ಭಾರತದ ಪ್ರವಾಸದಲ್ಲಿದೆ. ಈ ವೇಳೆ ಇಂಗ್ಲೆಂಡ್ ತಂಡವನ್ನು ಬಹುವಾಗಿ ಕಾಡಿದ ಟೀಮ್ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಸ್ಥಾನ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದಾರೆ. ಈಗಾಗಲೇ ಆಡಿರುವ 4 ಪಂದ್ಯಗಳಲ್ಲಿ 103 ರನ್ ಸಿಡಿಸಿರುವ ಹಾರ್ದಿಕ್ 5 ವಿಕೆಟ್ ಪಡೆದಿದ್ದಾರೆ. ಮುಂಬೈ ಅಂಗಳದಲ್ಲೂ ಇಂತಹದ್ದೇ ಪ್ರದರ್ಶನ ನೀಡಿದ್ದೇ ಆದಲ್ಲಿ ಮತ್ತೊಂದು ದಾಖಲೆ ನಿರ್ಮಿಸಬಹುದು.
ಹಾರ್ದಿಕ್ ಪಾಂಡ್ಯ ಭಾರತದ ಪರ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ನಿಂತು ಕೊಳ್ಳುತ್ತಾರೆ. ಇವರು ಆಡಿದ 113 ಟಿ20 ಪಂದ್ಯಗಳಲ್ಲಿ 94 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಂದು ವೇಳೆ ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಎರಡು ವಿಕೆಟ್ ಪಡೆದರೆ, ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಅವರ ದಾಖಲೆಯ ಸಮಕ್ಕೆ ನಿಲ್ಲ ಬಹುದು. ಇನ್ನು ಐದನೇ ಪಂದ್ಯದಲ್ಲಿ ಹಾರ್ದಿಕ್ 3 ವಿಕೆಟ್ ಪಡೆದಲ್ಲಿ ಚಹಾಲ್ ಸಾಧನೆಯನ್ನು ಅಳಿಸಿ ಹಾಕಬಹುದು. ಟೀಮ್ ಇಂಡಿಯಾ ಪರ ಯುಜುವೇಂದ್ರ ಚಹಾಲ್ ಟಿ20 ಕ್ರಿಕೆಟ್‌ನಲ್ಲಿ 96 ವಿಕೆಟ್‌ಗಳನ್ನು ಪಡೆದಿದ್ದಾರೆ.

ಯುಜುವೇಂದ್ರ ಚಹಾಲ್ ಗಿಂತಲೂ ಮುಂದೆ ಟೀಮ್ ಇಂಡಿಯಾದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಇದ್ದು, ಇವರು ಟೀಮ್ ಇಂಡಿಯಾ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಂದು ವೇಳೆ ಇವರು ಮುಂಬೈ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನವನ್ನು ಪಡೆದಿದ್ದೇ ಆದಲ್ಲಿ ಇವರು ಸಹ ಇತಿಹಾಸ ನಿರ್ಮಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಐದನೇ ಪಂದ್ಯದಲ್ಲಿ ಇನ್ನು ಒಂದು ವಿಕೆಟ್ ಪಡೆದರೆ, ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ.