ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಕಂ ಬ್ಯಾಕ್ ಮಾಡುತ್ತಲೇ ಅಬ್ಬರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅಮೋಘ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿದರು. ಹಾರ್ದಿಕ್ ಪಾಂಡ್ಯ ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸುವ ಕನಸಿನಲ್ಲಿದ್ದರು. ಆದರೆ 1 ವಿಕೆಟ್ ಮಾತ್ರ ಪಡೆದರು. ಆದರೂ ಸಹ ಹಾರ್ದಿಕ್ ವಿಶೇಷ ಕ್ಲಬ್‌ಗೆ ಎಂಟ್ರಿ ಪಡೆದಿದ್ದಾರೆ.
32 ವರ್ಷದ ಹಾರ್ದಿಕ್ ಪಾಂಡ್ಯ 2016 ರಿಂದ ಟೀಮ್ ಇಂಡಿಯಾದ ಪರ ಟಿ20 ಕ್ರಿಕೆಟ್ ಆಡುತ್ತಿದ್ದಾರೆ. ಇವರು ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈಗಲೂ ಇದೇ ರೀತಿಯ ಪ್ರದರ್ಶನ ನೀಡಿದ್ದಾರೆ. ಏಷ್ಯಾ ಕಪ್ ಟಿ20 ಕ್ರಿಕೆಟ್ ವೇಳೆ ಗಾಯಕ್ಕೆ ತುತ್ತಾಗಿದ್ದ ಹಾರ್ದಿಕ್ ಪಾಂಡ್ಯ, ಚೇತರಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ದೇಶೀಯ ಟೂರ್ನಿಗಳಲ್ಲೂ ಆರ್ಭಟ ನಡೆಸಿದ್ದರು. ಈಗ ಇದೇ ಫಾರ್ಮ್‌ನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಮುಂದುವರೆಸಿದ್ದಾರೆ. ಮೊದಲ ಪಂದ್ಯದಲ್ಲಿ ಆಲ್‌ರೌಂಡರ್ ಆಟದ ಪ್ರದರ್ಶನದ ನೀಡಿದ ಹಾರ್ದಿಕ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಬಂದಿದೆ.

ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್‌ಗಳು ಕಟಕ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದರು. ಆಗ ಭಾರತ ಸಾಧಾರಣ ಮೊತ್ತ ಕಲೆ ಹಾಕುತ್ತದೆ ಎಂಬ ಲೆಕ್ಕಾಚಾರವನ್ನು ಅಭಿಮಾನಿಗಳು ಹಾಕಿಕೊಂಡಿದ್ದರು. ಆದರೆ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಹಾರ್ದಿಕ್ ಪಾಂಡ್ಯ, ಬಿರುಸಿನ ಆಟಕ್ಕೆ ಮುಂದಾದರು. ಇವರು 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 59 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಈ ವೇಳೆ ಹಾರ್ದಿಕ್ ಪಾಂಡ್ಯ ಅವರ ಸ್ಟ್ರೈಕ್ ರೇಟ್ 210 ಆಗಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಾಲ್ಕು ಸಿಕ್ಸರ್ ಬಾರಿಸುತ್ತಲೇ ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ನೂರು ಸಿಕ್ಸರ್ ಬಾರಿಸಿದ ಭಾರತದ ನಾಲ್ಕನೇ ಬ್ಯಾಟರ್ ಎಂಬ ಖ್ಯಾತಿ ಪಡೆದಿದ್ದಾರೆ.
ರೋಹಿತ್ ಶರ್ಮಾ, 159 ಪಂದ್ಯ, 205 ಸಿಕ್ಸರ್
ಸೂರ್ಯಕುಮಾರ್ ಯಾದವ್, 96 ಪಂದ್ಯ, 155 ಸಿಕ್ಸರ್
ವಿರಾಟ್ ಕೊಹ್ಲಿ, 125 ಪಂದ್ಯ, 124 ಸಿಕ್ಸರ್
ಹಾರ್ದಿಕ್ ಪಾಂಡ್ಯ, 121 ಪಂದ್ಯ, 100 ಸಿಕ್ಸರ್
ಕೆಎಲ್ ರಾಹುಲ್, 72 ಪಂದ್ಯ, 99 ಸಿಕ್ಸರ್
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಹಾರ್ದಿಕ್ ಪಾಂಡ್ಯ ಮಾತನಾಡಿ, ಕಳೆದ ಕೆಲವು ತಿಂಗಳುಗಳಿನಿಂದ ಫಿಟ್ನೆಸ್ ಬಗ್ಗೆ ಕೆಲಸ ಮಾಡಿದ್ದೇನೆ. ಪಿಚ್‌ನಲ್ಲಿ ಸ್ವಲ್ಪ ಪ್ರಮಾಣದ ಸ್ಪಿನ್ ಇರುವುದನ್ನು ನಾನು ಅರಿತುಕೊಂಡೆ. ಮೊದಲ ಪಂದ್ಯದಲ್ಲಿ ಮಾಡಿದ ಬ್ಯಾಟಿಂಗ್ ಶೈಲಿ ನನಗೆ ತೃಪ್ತಿ ತಂದಿದೆ. ತಂಡದ ಗೆಲುವಿನಲ್ಲಿ ಮಿಂಚಿದ್ದು ಖುಷಿಯ ವಿಚಾರ ಎಂದು ಹೇಳಿದ್ದಾರೆ.