2023ರಲ್ಲಿ ವಿಶ್ವಕಪ್ ಇರುವ ಕಾರಣ ಈತ ತಂಡದಲ್ಲಿದ್ದಾನೆ ನಂತರ ನಿವೃತ್ತಿ ಹೇಳುತ್ತಾನೆ ಎಂದ ರವಿಶಾಸ್ತ್ರಿ

ಇತ್ತೀಚಿನ ದಿನಗಳಲ್ಲಿ ಕ್ರಿಕೆಟಿಗರು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿಯೂ ಭಾಗವಹಿಸುವುದು ತೀರ ಒತ್ತಡಕ್ಕೆ ಸಿಲುಕಲು ಕಾರಣವಾಗುತ್ತಿದೆ ಎಂದು ಹಲವಾರು ಕ್ರಿಕೆಟಿಗರು ಸ್ವತಃ ಹೇಳಿಕೆ ನೀಡಿದ್ದಾರೆ. ಅದರಲ್ಲಿಯೂ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳು ಹಾಗೂ ಟಿ ಟ್ವೆಂಟಿ ಕ್ರಿಕೆಟ್ ಮಾದರಿ ಆರಂಭವಾದ ನಂತರ ಆಟಗಾರರ ಮೇಲಿನ ಒತ್ತಡ ಹೆಚ್ಚಾಗುತ್ತಿದೆ ಎಂಬ ಅಭಿಪ್ರಾಯ ಹೆಚ್ಚಾಗಿ ವ್ಯಕ್ತವಾಗುತ್ತಿದ್ದು, ಈ ಕಾರಣದಿಂದಲೇ ಸ್ಟಾರ್ ಆಟಗಾರರು ಹಲವು ಅಂತರರಾಷ್ಟ್ರೀಯ ಸರಣಿಗಳಲ್ಲಿ ಭಾಗವಹಿಸಲಾಗದೇ ಹೊರಗುಳಿದು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.
ಇನ್ನು ಇದಕ್ಕೆ ತಾಜಾ ಉದಾಹರಣೆಯೆಂದರೆ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಆಟಗಾರ ಬೆನ್ ಸ್ಪೋಕ್ಸ್. ಹೌದು, 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ವಿಶ್ವಕಪ್ ಹೀರೋ ಎಂದೇ ಖ್ಯಾತಿಯನ್ನು ಪಡೆದಿದ್ದ ಬೆನ್ ಸ್ಟೋಕ್ಸ್ ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸುವುದರ ಮೂಲಕ ಕ್ರಿಕೆಟ್ ಜಗತ್ತು ಆಶ್ಚರ್ಯಕ್ಕೊಳಗಾಗುವಂತೆ ಮಾಡಿದ್ದರು. ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಂದರ್ಭದಲ್ಲಿ ಟೆಸ್ಟ್ ಹಾಗೂ ಟಿ ಟ್ವೆಂಟಿ ಮಾದರಿಗಳತ್ತ ಹೆಚ್ಚಿನ ಗಮನ ಹರಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದಿದ್ದ ಈ ಆಲ್‌ರೌಂಡರ್ ಕೊನೆಯ ಏಕದಿನ ಪಂದ್ಯವನ್ನಾಡಿದ ನಂತರ ಕ್ರಿಕೆಟಿಗರು ಇಂಧನ ತುಂಬಿಸಿ ಓಡಿಸುವ ವಾಹನಗಳಲ್ಲ ಮನುಷ್ಯರು ಎಂದು ಹೇಳಿಕೆ ನೀಡುವುದರ ಮೂಲಕ ತಾವು ಒತ್ತಡದಿಂದ ನಿವೃತ್ತಿ ಘೋಷಿಸಿದ್ದನ್ನು ಪರೋಕ್ಷವಾಗಿ ತಿಳಿಸಿದ್ದರು.
ಬೆನ್ ಸ್ಪೋಕ್ಸ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ವಿವಿಧ ದೇಶಗಳ ಹಲವು ಕ್ರಿಕೆಟಿಗರು ಇದೇ ರೀತಿಯ ನಿರ್ಧಾರ ತೆಗೆದುಕೊಳ್ಳುವ ದಿನಗಳು ದೂರ ಉಳಿದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಅದೇ ವಿಷಯದ ಕುರಿತಾಗಿ ಭಾರತದ ಮಾಜಿ ಕ್ರಿಕೆಟಿಗ ಮತ್ತು ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಮಾತನಾಡಿದ್ದು, ಭಾರತ ತಂಡದ ಪ್ರಮುಖ ಆಲ್‌ರೌಂಡರ್ ಓರ್ವ ಕೂಡ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯವಾದ ನಂತರ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯ ಕುರಿತು ಭವಿಷ್ಯ ನುಡಿದ ರವಿಶಾಸ್ತ್ರಿ
ಆಟಗಾರರು ಈಗಾಗಲೇ ತಾವು ಯಾವ ಮಾದರಿಯಲ್ಲಿ ಆಡಬೇಕು ಎಂಬುದನ್ನು ಸ್ವತಃ ತಾವೇ ನಿರ್ದರಿಸಿಕೊಳ್ಳುತ್ತಿದ್ದಾರೆ ಎಂಬ ಹೇಳಿಕೆ ನೀಡಿರುವ ರವಿಶಾಸ್ತ್ರಿ ಟೀಮ್ ಇಂಡಿಯಾಗೆ ಇತ್ತೀಚೆಗಷ್ಟೇ ಮರಳಿರುವ ಹಾರ್ದಿಕ್ ಪಾಂಡ್ಯರನ್ನು ಉದಾಹರಣೆಯಾಗಿ ತೆಗೆದುಕೊಂಡು ಮಾತನಾಡಿದ್ದಾರೆ. ಇಂಡಿಯಾ ಟುಡೇ ಸಂದರ್ಶನದಲ್ಲಿ ಮಾತನಾಡಿರುವ ರವಿಶಾಸ್ತ್ರಿ ಹಾರ್ದಿಕ್ ಪಾಂಡ್ಯ ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ ಮುಂದುವರೆಯಬೇಕೆಂಬ ನಿರ್ಧಾರವನ್ನು ಮಾಡಿದ್ದಾರೆ, ಅವರು ಮುಂದಿನ ವರ್ಷ ಏಕದಿನ ವಿಶ್ವಕಪ್ ಟೂರ್ನಿ ಇರುವ ಕಾರಣದಿಂದಾಗಿ ಏಕದಿನ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ ಅಷ್ಟೇ, ವಿಶ್ವಕಪ್ ಮುಕ್ತಾಯವಾದ ನಂತರ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಯಾವ ಮಾದರಿಯಲ್ಲಿ ಆಡಬೇಕೆಂಬ ಆಯ್ಕೆ ಅವರಿಗೆ ಬಿಟ್ಟದ್ದು
ಇನ್ನೂ ಮುಂದುವರೆದು ಮಾತನಾಡಿರುವ ರವಿಶಾಸ್ತ್ರಿ ಯಾವ ಮಾದರಿಯಲ್ಲಿ ಆಡಬೇಕೆಂಬ ನಿರ್ಧಾರವನ್ನು ಕೈಗೊಳ್ಳುವುದು ಆಟಗಾರರಿಗಿರುವ ಹಕ್ಕು ಎಂದು ರವಿಶಾಸ್ತ್ರಿ ಹೇಳಿಕೆ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ರೀತಿಯೇ ಇತರೆ ಆಟಗಾರರು ಸಹ ಶೀಘ್ರದಲ್ಲಿಯೇ ಯಾವ ಮಾದರಿಯಲ್ಲಿ ಆಡಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ರವಿಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ.

ಫ್ರಾಂಚೈಸಿ ಕ್ರಿಕೆಟ್ ಜಗತ್ತನ್ನು ಆಳಲಿದೆ
ಮುಂದಿನ ದಿನಗಳಲ್ಲಿ ಫ್ರಾಂಚೈಸಿ ಕ್ರಿಕೆಟ್ ಜಗತ್ತನ್ನು ಆಳಲಿದೆ, ಈ ರೀತಿಯಾದ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಹೇಗೆ ಹೆಚ್ಚು ನಡೆಯಲು ಸಾಧ್ಯ, ಹೀಗಿರುವಾಗ ದ್ವಿಪಕ್ಷೀಯ ಸರಣಿಗಳ ಸಂಖ್ಯೆಯನ್ನು ಕಡಿತಗೊಳಿಸಬೇಕು ಹಾಗೂ ಟ್ರೆಂಡ್‌ನ್ನು ಅನುಸರಿಸಬೇಕು ಎಂದು ರವಿಶಾಸ್ತ್ರಿ ಹೇಳಿಕೆ ನೀಡಿದ್ದಾರೆ. ಹಾಗೂ ಆಟಗಾರರು ವಿವಿಧ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡಲಿದ್ದಾರೆ ಮತ್ತು ಇದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದೂ ಸಹ ರವಿಶಾಸ್ತ್ರಿ ಹೇಳಿಕೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications