2023ರ ವಿಶ್ವಕಪ್ ಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಲಾಗಿದೆ. ನಿಜಕ್ಕೂ ಟೀಮ್ ಇಂಡಿಯಾದಲ್ಲಿರುವ ಒಂದು ವೆಪನ್ ನಿಜಕ್ಕೂ ವಿರೋಧಿಗಳ ನಡುಕ ಹೆಚ್ಚಿಸಿದೆ. ಆಲ್ ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಸ್ಟಾರ್ ಪ್ಲೇಯರ್ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್..
2023ರ ವಿಶ್ವಕಪ್ ಗೆ ಭಾರತ ತಂಡವನ್ನು ಘೋಷಿಸಲಾಗಿದ್ದು, ತಂಡದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ತಂಡ ಸೇರ್ಪಡೆಯಾಗಿದ್ದಾರೆ. ಪಾಂಡ್ಯ ಟೀಂ ಇಂಡಿಯಾ ಪರ ಹಲವು ಸಂದರ್ಭಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐಸಿಸಿ ಪಂದ್ಯಗಳಲ್ಲಿ ಭಾರತದ ಪರ ಭರ್ಜರಿ ಪ್ರದರ್ಶನ ನೀಡಿ ಮ್ಯಾಚ್ ವಿನ್ನರ್ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ವಿಶ್ವಕಪ್ ನಲ್ಲೂ ಪಾಂಡ್ಯ ಪಾತ್ರ ಮಹತ್ವದ್ದಾಗಿರಲಿದೆ.

ಸದ್ಯ ಹಾರ್ದಿಕ್ ಪಾಂಡ್ಯ ಸೊಗಸಾದ ಫಾರಂ ನಲ್ಲಿದ್ದಾರೆ. ಇತ್ತೀಚೆಗೆ, ಅವರು ಏಷ್ಯಾ ಕಪ್ 2023ರ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಧಾರವಾಗಿದ್ದರು. ಭಾರತ ಮೊದಲ 4 ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡಿತ್ತು. ಆದರೆ ಪಾಂಡ್ಯ ಇನ್ನಿಂಗ್ಸ್ ನಿಭಾಯಿಸಿದ ರೀತಿ, ಎದುರಾಳಿಗಳಿಗೆ ನಡುಕ ಹೆಚ್ಚಿಸಿದೆ. ಅವರು ಇಶಾನ್ ಕಿಶನ್ ಜೊತೆ ಶತಕದ ಜೊತೆಯಾಟ ಆಡಿದರು.
ಪಾಂಡ್ಯ ಇಡೀ ಆಟವನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಹಿಂದೆಯೂ ಅವರು ಇಂತಹ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಅನೇಕ ಸ್ಮರಣೀಯ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ. ಹಾರ್ದಿಕ್ ಭಾರತ ಪರ 79 ಏಕದಿನ ಪಂದ್ಯಗಳಲ್ಲಿ 1,753 ರನ್ ಗಳಿಸಿದ್ದಾರೆ. ಇದರೊಂದಿಗೆ 74 ವಿಕೆಟ್ ಕಬಳಿಸಿದ್ದಾರೆ.
ಪಾಂಡ್ಯ ಅವರ ಅತ್ಯುತ್ತಮ ಏಕದಿನ ಸ್ಕೋರ್ 92 ರನ್ ಆಗಿದೆ. ಅವರು 11 ಅರ್ಧಶತಕಗಳನ್ನು ಬಾರಿಸಿದ್ದಾರೆ. ಏಕದಿನ ಬೌಲಿಂಗ್ ನಲ್ಲಿ 24 ರನ್ ಗಳಿಗೆ 4 ವಿಕೆಟ್ ಗಳನ್ನು ಪಡೆದಿರುವುದು ಅವರ ಅತ್ಯುತ್ತಮ ಸಾಧನೆ ಆಗಿದೆ. ಬೌಲಿಂಗ್ ನಲ್ಲಿ ಪಾಂಡ್ಯ 26.72 ಸರಾಸರಿ ಹೊಂದಿದ್ದಾರೆ. ಅಕ್ಟೋಬರ್ 5 ರಿಂದ ಭಾರತದಲ್ಲಿ ವಿಶ್ವಕಪ್ ಆಯೋಜಿಸಲಾಗುತ್ತಿದೆ. ಇದರಲ್ಲಿ ಭಾರತದ ಮೊದಲ ಪಂದ್ಯ ಆಸ್ಟ್ರೇಲಿಯಾ ವಿರುದ್ಧ, ಅಕ್ಟೋಬರ್ 8 ರಂದು ಚೆನ್ನೈನಲ್ಲಿ ನಡೆಯಲಿದೆ.
ಅಕ್ಟೋಬರ್ 14 ರಂದು ಅಹಮದಾಬಾದ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಮಿಡ್ಲ್ ಓವರುಗಳಲ್ಲಿ ಹಾರ್ದಿಕ್ ಬೌಲಿಂಗ್ ಮಾಡಿ ತಂಡಕ್ಕೆ ನೆರವಾಗಬಲ್ಲರು. ಅಲ್ಲದೆ ಹಾರ್ದಿಕ್ ಪಾಂಡ್ಯ ಉತ್ತಮ ಫೀಲ್ಡರ್ ಕೂಡ ಹೌದು.. ಹಾರ್ದಿಕ್ ಪಾಂಡ್ಯ ಚೊಚ್ಚಲ ಪ್ರಯತ್ನದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ.
ತಂಡಕ್ಕೆ ಅಗತ್ಯ ಬಿದ್ದಾಗ ನಾಲ್ಕನೇ ಕ್ರಮಾಂಕ ಹಾಗೂ ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲ ಕ್ಷಮತೆ ಹೊಂದಿದ್ದಾರೆ. ಇವರು ಕ್ರೀಸ್ ನಲ್ಲಿ ಇದ್ದಷ್ಟು ಹೊತ್ತು ರನ್ ವೇಗ ಸ್ಥಿರವಾಗಿ ಏರುಗತಿಯಲ್ಲಿ ಸಾಗುತ್ತಲೇ ಇರುತ್ತದೆ.
ಮಿಡ್ಲ್ ಆರ್ಡರ್ ಗಳಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅಲ್ಲದೆ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವ ಕಲೆ ಹಾರ್ದಿಕ್ ಅವರಲ್ಲಿದೆ. ಹೀಗಾಗಿಯೇ ಈ ಒಂದು ವೆಪನ್ ನಿಜಕ್ಕೂ ಎದುರಾಳಿಗಳ ನಿದ್ದೆಯನ್ನು ಹದಗೆಡಿಸಿದೆ.