ಐಪಿಎಲ್ 2025 ರ 20 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 12 ರನ್‌ಗಳಿಂದ ಸೋಲಿಸಿತು. ಉಭಯ ತಂಡಗಳ ನಡುವಿನ ಈ ಪಂದ್ಯ ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 221 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮುಂಬೈ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 209 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.
ಆರ್‌ಸಿಬಿ ನೀಡಿದ 222 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ರೋಹಿತ್ ಶರ್ಮಾ 17 ರನ್, ರಯಾನ್ ರಿಕಲ್ಟನ್ 17 ರನ್, ವಿಲ್ ಜ್ಯಾಕ್ 22 ರನ್, ಸೂರ್ಯಕುಮಾರ್ ಯಾದವ್ 28 ರನ್ ಗಳಿಸಿ ಔಟಾದರು. ಪರಿಣಾಮ ಮುಂಬೈ ಇಂಡಿಯನ್ಸ್ ತಂಡದಿಂದ ಪಂದ್ಯ ಕೈ ಜಾರಿತ್ತು. ಈ ವೇಳೆ ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಮೆರೆದರು.

ವಾಂಖೆಡೆ ಸ್ಟೇಡಿಯಂನಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದರೂ, ಪಂದ್ಯದ ನಿಜವಾದ ಹೀರೋ ಹಾರ್ದಿಕ್ ಪಾಂಡ್ಯ ಆದರು. ಹಾರ್ದಿಕ್ ಪಾಂಡ್ಯ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಲ್ಲೂ ಅದ್ಭುತ ಆಲ್‌ರೌಂಡರ್ ಪ್ರದರ್ಶನ ನೀಡಿದರು. ಹಾರ್ದಿಕ್ ಪಾಂಡ್ಯ ಒಂದೇ ಓವರ್‌ನಲ್ಲಿ ಆರ್‌ಸಿಬಿಯ ವಿರಾಟ್ ಕೊಹ್ಲಿ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಔಟ್ ಮಾಡುವ ಮೂಲಕ 2 ವಿಕೆಟ್ ಕಬಳಿಸಿ ಮಿಂಚಿದರು. ಇದಲ್ಲದೆ, ಅವರು ಬ್ಯಾಟಿಂಗ್‌ನಲ್ಲಿಯೂ ಕೆಲಕಾಲ ಆರ್‌ಸಿಬಿ ತಂಡವನ್ನು ಸೋಲಿನ ಭಯದಲ್ಲಿ ಇರಿಸಿದರು.
ಮುಂಬೈ ಇಂಡಿಯನ್ಸ್ ತಂಡ 12ನೇ ಓವರ್‌ನಲ್ಲಿ 4 ವಿಕೆಟ್‌ಗೆ 99 ರನ್‌ಗಳಿಸಿ ಸಂಕಷ್ಟದಲ್ಲಿತ್ತು. ಇಲ್ಲಿಂದ ಮುಂಬೈ ಸೋಲು ಖಚಿತ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ, ಆರ್‌ಸಿಬಿ ಬೌಲರ್‍ಗಳನ್ನು ತರಾಟೆಗೆ ತೆಗೆದುಕೊಂಡ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ಅವರು ಮುಂಬೈ ಅಭಿಮಾನಿಗಳಲ್ಲಿ ಮತ್ತೆ ಗೆಲುವಿನ ಆಸೆ ಚಿಗುರಿಸಿದರು.
ಹಾರ್ದಿಕ್ ಪಾಂಡ್ಯ ತಮ್ಮ ಅಣ್ಣ ಕೃನಾಲ್ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿ ಪಂದ್ಯಕ್ಕೆ ತಿರುವು ಕೊಟ್ಟರು. ಇದಕ್ಕೂ ಮುನ್ನ ವೇಗಿ ಜೋಶ್ ಹೇಜಲ್‌ವುಡ್ ಓವರ್‍ನಲ್ಲಿಯೂ 22 ರನ್ ಬಾರಿಸಿದರು. ಹಾರ್ದಿಕ್ ಪಾಂಡ್ಯ ಕೇವಲ 15 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 42 ರನ್ ಗಳಿಸಿ ಮುಂಬೈ ಗೆಲುವಿಗಾಗಿ ಹೋರಾಟ ನಡೆಸಿದರು. ಆದರೆ 18ನೇ ಓವರ್‍ನಲ್ಲಿ ದಾಳಿಗಿಳಿದ ಹೇಜಲ್‌ವುಡ್ ಕಳೆದ ಬಾರಿ ಮಾಡಿದ ತಪ್ಪುಗಳನ್ನು ಮಾಡಲಿಲ್ಲ. ಹಾರ್ದಿಕ್ ಪಾಂಡ್ಯ ಅವರನ್ನು ಮೊದಲ ಎಸೆತದಲ್ಲಿ ಔಟ್ ಮಾಡಿದರು. ಇದರೊಂದಿಗೆ ಮುಂಬೈ ಗೆಲುವು ದೂರವಾಯಿತು.ಕೊನೆವರೆಗೆ ಹಾರ್ದಿಕ್ ಪಾಂಡ್ಯ ನಿಂತು ಪಂದ್ಯವನ್ನು ಗೆಲ್ಲುಸುತ್ತಾರೆ ಅಂದುಕೊಂಡಿದ ಮುಂಬೈ ಅಭಿಮಾನಿಗಳಿಗೆ ನಿರಾಸೆ ಆಯಿತು.
ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ ಮತ್ತು ಫಾರ್ಮ್ ಬಗ್ಗೆ ಟೀಕೆಗಳು ಕೇಳಿಬರುತ್ತಿದ್ದವು. ಆದರೆ ಆರ್‌ಸಿಬಿ ವಿರುದ್ಧ ಹಾರ್ದಿಕ್ ಪಾಂಡ್ಯ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ.