ಪ್ರಸ್ತುತ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಎದುರಿಸಿದ ನಂತರ ಟೀಮ್ ಇಂಡಿಯಾ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.
ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಪಡೆ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇದಕ್ಕಾಗಿ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ರೋಹಿತ್ ಶರ್ಮಾ ಕೂಡ ವಿಶೇಷ ಪ್ಲಾನ್ ಮಾಡಿದ್ದಾರೆ. ಕಳೆದ 10 ವರ್ಷಗಳಿಂದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಆಸ್ಟ್ರೇಲಿಯಾ ಗೆಲ್ಲುವುದಕ್ಕೆ ಆಗಿಲ್ಲ.

ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ದೇಶೀಯ ಕ್ರಿಕೆಟ್‌ಗೆ ಪುನರಾಗಮನ ಮಾಡಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಆದರೆ ಯಾರ ಬದಲಿಗೆ ಹಾರ್ದಿಕ್ ಪಾಂಡ್ಯ ತಂಡದ ಸ್ಥಾನ ಪಡೆಯಲಿದ್ದಾರೆ ಎಂಬುದು ಚರ್ಚೆ ಆಗುತ್ತಿದೆ.
ಮೂಲಗಳ ಪ್ರಕಾರ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಹಾರ್ದಿಕ್ ವೈಟ್ ಬಾಲ್ ಕ್ರಿಕೆಟ್‌ಗೆ ಮರಳಲಿದ್ದಾರೆ. ಅವರು ತಮ್ಮ ರಾಜ್ಯ ಬರೋಡಾ ಪರವಾಗಿ ರಣಜಿ ಟ್ರೋಫಿಯನ್ನು ಆಡಲು ಸಜ್ಜಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ರೆಡ್ ಬಾಲ್‌ನೊಂದಿಗೆ ಅಭ್ಯಾಸ ನಡೆಸಿದ್ದರು. ಈ ಸಂಬಂಧ ಫೋಟೋ ಮತತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಅವರು ಟೆಸ್ಟ್ ಕ್ರಿಕೆಟ್ ಆಡಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಹಾರ್ದಿಕ್ ಪಾಂಡ್ಯ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿದ್ದಾರೆ.
2018ರಲ್ಲಿ ಅವರು ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಅಂದಿನಿಂದ ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ರಣಜಿ ಟ್ರೋಫಿಯಲ್ಲಿ ಆಡುವ ಅವರ ಬಯಕೆಯು ಟೆಸ್ಟ್ ಕ್ರಿಕೆಟ್‌ಗೆ ಮರಳುವ ಮತ್ತು ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಗುರಿಯನ್ನು
ತೋರಿಸುತ್ತಿದೆ.
ಪಾಂಡ್ಯ ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಟಿ20 ಸರಣಿಯನ್ನು ಆಡಿದ್ದರು. ಆದರೆ ದುಲೀಪ್ ಟ್ರೋಫಿಯಲ್ಲಿ ಭಾಗವಹಿಸಿರಲಿಲ್ಲ. ಇದೀಗ ಅವರ ಕಣ್ಣು ರಣಜಿ ಟ್ರೋಫಿಯತ್ತ ನೆಟ್ಟಿದ್ದು, ಇದು ಟೆಸ್ಟ್ ಕ್ರಿಕೆಟ್‌ಗೆ ತಯಾರಾಗಲು ನೆರವಾಗಲಿದೆ.
ಹಾರ್ದಿಕ್ ಪಾಂಡ್ಯ ಭಾರತ ಪರ ಇದುವರೆಗೆ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು 18 ಇನ್ನಿಂಗ್ಸ್‌ಗಳಲ್ಲಿ 31.29 ಸರಾಸರಿಯಲ್ಲಿ 532 ರನ್ ಗಳಿಸಿದ್ದು, ಶತಕ ಕೂಡ ಹೊಡೆದಿದ್ದಾರೆ. ಹಾರ್ದಿಕ್ ಹೆಸರಿನಲ್ಲಿ 4 ಅರ್ಧಶತಕಗಳು ದಾಖಲಾಗಿವೆ. ಬೌಲಿಂಗ್ ನಲ್ಲಿ 17 ವಿಕೆಟ್ ಪಡೆದಿದ್ದಾರೆ.
ಹಾರ್ದಿಕ್ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು 2017 ರಲ್ಲಿ ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ಆಡಿದ್ದರು. 2018 ರಲ್ಲಿ ಅವರು ಕೊನೆಯ ಬಾರಿಗೆ ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.