ಟೀಮ್ ಇಂಡಿಯಾ ಆಟಗಾರರು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಇನ್ನು ಕೆಲವು ಆಟಗಾರರು ದೇಶೀಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಇನ್ನು ಹಲವು ಆಟಗಾರರು ರಜೆಯ ಮಜೆಯಲ್ಲಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಇವರು ಮೈದಾನದಲ್ಲಿ ತಮ್ಮ ಭರ್ಜರಿ ಆಲ್‌ರೌಂಡರ್ ಆಟದಿಂದ ಸದ್ದು ಮಾಡಿರುವ ಆಟಗಾರ. ಈಗ ಇವರು ತಮ್ಮ ವೈಯಕ್ತಿಕ ಜೀವನದಿಂದ ಸುದ್ದಿ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಬಳಿಕ ಹಾರ್ದಿಕ್ ಪಾಂಡ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೇ ವೇಳೆ ಇವರು ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆ ನವದೆಹಲಿಯ ರೆಸ್ಟೋರೆಂಟ್‌ನಲ್ಲಿ ಭೋಜನಕ್ಕಾಗಿ ಆಗಮಿಸಿದ್ದರು. ಇಬ್ಬರೂ ಭೋಜನ ಮಾಡಿ ಹೊರಗಡೆ ಬರುವಾಗ ಹಾರ್ದಿಕ್ ಅವರನ್ನು ಅಭಿಮಾನಿಗಳು ಸುತ್ತುವರೆದರು. ಸೆಲ್ಫಿ ಪಡೆದು ಖುಷಿ ಪಟ್ಟರು.

ನೋಡ ನೋಡುತ್ತಲೇ ಹಾರ್ದಿಕ್ ಪಾಂಡ್ಯ ಅವರನ್ನು ನೋಡಲು ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಅಲ್ಲಿಗೆ ಭದ್ರತಾ ಸಿಬ್ಬಂದಿಗಳು ಬಂದರು. ಅಲ್ಲದೆ ಹಾರ್ದಿಕ್ ಹಾಗೂ ಅವರ ಗೆಳತಿಯನ್ನು ಕಾರಿನ ಕಡೆಗೆ ಕರೆದೊಯ್ಯಲು ನೆರವು ಮಾಡಿದರು. ಇದೇ ವೇಳೆ ಹಲವು ಅಭಿಮಾನಿಗಳಿಗೆ ಹಾರ್ದಿಕ್ ಪಾಂಡ್ಯ ಫೋಟೋ ನೀಡಿದರು. ಆದರೆ ಆ ಒಬ್ಬ ಅಭಿಮಾನಿಗೆ ಫೋಟೋ ಸಿಗಲಿಲ್ಲ.
ಹಾರ್ದಿಕ್ ಪಾಂಡ್ಯ ತನ್ನ ಗೆಳತಿ ಮಹಿಕಾ ಶರ್ಮಾ ಅವರನ್ನು ಕರೆದುಕೊಂಡು ಬಂದು ಕಾರಿನಲ್ಲಿ ಕೂರಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಬಳಿಕ ಹಾರ್ದಿಕ್ ಕಾರಿನ ಇನ್ನೊಂದು ಬದಿಗೆ ಬಂದು ಹತ್ತಲು ಹೋಗುತ್ತಾರೆ. ಆಗ ಅಭಿಮಾನಿಗಳು ಇವರನ್ನು ಕಂಡು ಸೆಲ್ಫಿ ಪಡೆಯುತ್ತಾರೆ. ಹಲವು ಅಭಿಮಾನಿಗಳು ಸ್ಟಾರ್ ಆಲ್‌ರೌಂಡರ್ ಸೆಲ್ಫಿ ಪಡೆದು ಖುಷಿ ಪಟ್ಟರೆ ಇನ್ನು ಹಲವರಿಗೆ ನಿರಾಸೆ ಕಾದಿತ್ತು. ಸೆಲ್ಫಿ ಸಿಗದ ಅಭಿಮಾನಿಯೊಬ್ಬ ಹಾರ್ದಿಕ್ ಅವರನ್ನು ನಿಂದಿಸುತ್ತಾನೆ. ಇದರ ಆಡಿಯೋ ಸಹ ರೆಕಾರ್ಡ್ ಆಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಅಭಿಮಾನಿ ನಿಂದಿಸಿದ ಶಬ್ದ ಹಾರ್ದಿಕ್ ಅವರಿಗೆ ಕೇಳಿಸಿದರೂ ಅವರು ಶಾಂತವಾಗಿ ಕಾರಿನತ್ತ ನಡೆಯುತ್ತಾರೆ. ಸದ್ಯ ಹಾರ್ದಿಕ್ ಶಾಂತ ವರ್ತನೆ ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಹಾರ್ದಿಕ್ ಪಾಂಡ್ಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಸರಣಿಯ ಕೊನೆಯ ಪಂದ್ಯದಲ್ಲಿ ಹಾರ್ದಿಕ್ ಆರ್ಭಟ ಜೋರಾಗಿತ್ತು. ಈ ಪಂದ್ಯದಲ್ಲಿ ಹಾರ್ದಿಕ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು. ಈ ಮೂಲಕ ಭಾರತದ ಪರ ವೇಗವಾಗಿ ಅರ್ಧಶತಕ ಬಾರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು 2007ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.