ಭಾರತ ಯುವ ತಂಡ ಸದ್ಯ ಬಾಂಗ್ಲಾ ವಿರುದ್ಧ ಟಿ20 ಸರಣಿಯನ್ನು ಆಡುತ್ತಿದೆ. ಆಡಿರುವ ಎರಡೂ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ, ಇನ್ನು ಒಂದು ಪಂದ್ಯ ಇರುವಾಗಲೇ ಸರಣಿ ವಶಕ್ಕೆ ಪಡೆದಿದೆ. ಈ ಪಂದ್ಯದಲ್ಲಿ ಯುವ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಡಿದ್ದಾರೆ. ಇನ್ನು ಅನುಭವಿಗಳು ತಮ್ಮಲ್ಲಿರುವ ತಾಕತ್ತು ಪ್ರದರ್ಶಿಸಿದ್ದಾರೆ.
ಟೀಮ್ ಇಂಡಿಯಾದ ಅನುಭವಿ ಆಟಗಾರ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಎಲ್ಲರ ಚಿತ್ತ ಕದ್ದಿದ್ದಾರೆ. ಮೊದಲು ಬ್ಯಾಟ್ ಮಾಡಿದ ಆಲ್‌ರೌಂಡರ್ 32 ರನ್ ಗಳಿಸಿ ಔಟ್ ಆದರು. ದೆಹಲಿಯಲ್ಲಿ ಇವರಿಗೆ ಬೌಲಿಂಗ್ ಮಾಡುವ ಅವಕಾಶ ಸಿಗಲೇ ಇಲ್ಲ. ಆದರೆ ಫೀಲ್ಡ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಎರಡನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಬೌಂಡರಿ ಲೈನ್‌ನಲ್ಲಿ ಸೆನ್ಸೇಷನಲ್ ಕ್ಯಾಚ್ ಪಡೆದರು.

ಬಾಂಗ್ಲಾದೇಶ ಬ್ಯಾಟಿಂಗ್ ಮಾಡುವಾಗ ಟೀಮ್ ಇಂಡಿಯಾ ಪ್ಲೇಯರ್‌ಗಳು ಅಮೋಘ ಪ್ರದರ್ಶನ ನೀಡಿದರು. ಈ ವೇಳೆ ಹಾರ್ದಿಕ್ ಪಾಂಡ್ಯ ಕ್ಲಾಸಿಕ್ ಡೈವ್ ಕ್ಯಾಚ್ ಹಿಡಿದು ಎಲ್ಲರ ಗಮನ ಸೆಳೆದರು. ಈ ಕ್ಯಾಚ್ ಕಂಡು ಅಭಿಮಾನಿಗಳು ಥ್ರಿಲ್ ಆದರು. ಇನಿಂಗ್ಸ್‌ನ 14ನೇ ಓವರ್‌ನಲ್ಲಿ ರಿಶಾದ್ ಹುಸೇನ್ ವರುಣ್ ಚಕ್ರವರ್ತಿ ವಿರುದ್ಧ ದೊಡ್ಡ ಹೊಡೆತಕ್ಕೆ ಮುಂದೆ ಬಂದಾಗ ಈ ದೃಶ್ಯ ಕಂಡು ಬಂದಿತು.
ವರುಣ್ ಚಕ್ರವರ್ತಿ ಅವರು ಬೌಲಿಂಗ್ ಮಾಡುವಾಗ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಡೀಪ್ ಮಿಡ್‌ವಿಕೆಟ್‌ನಲ್ಲಿ ಫೀಲ್ಡ್ ಮಾಡುತ್ತಿದ್ದರು. ರಿಶಾದ್ ಹುಸೇನ್ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಲು ಮುಂದಾಗಿದ್ದರು. ಎರಡು ಬೌಂಡರಿಗಳನ್ನು ಬಾರಿಸಿ ಭರವಸೆ ಮೂಡಿಸಿದ್ದರು. 14ನೇ ಓವರ್‌ನ ಮೂರನೇ ಎಸೆತದಲ್ಲೂ ಬಾಂಗ್ಲಾ ಬ್ಯಾಟರ್ ಇಂತಹದ್ದೇ ಕೆಲಸ ಮಾಡಲು ಮುಂದಾದರು. ವರುಣ್ ಚಕ್ರವರ್ತಿ ಅವರು ಎಸೆದ ಚೆಂಡನ್ನು, ರಿಶಾದ್ ಹುಸೇನ್ ಡಿಪ್ ಮಿಡ್ ವಿಕೆಟ್ ನತ್ತ ಬಾರಿಸಿದರು.

ಡೀಪ್ ಮಿಡ್ ವಿಕೆಟ್ ಮೇಲಿನಿಂದ ಚೆಂಡು ಹೋಗುತ್ತಿರುವುದನ್ನು ಹಾರ್ದಿಕ್ ಪಾಂಡ್ಯ ಗಮನಿಸಿ. ಚೆಂಡು ತಮಗೆ ಹತ್ತಿರದಲ್ಲಿದೆ ಎಂದು ಹಾರ್ದಿಕ್ ಪ್ರಯತ್ನ ಮಾಡಿದರು. ತಾವು ನಿಂತಲ್ಲಿಂದ ಎಡಗಡೆ ಓಡಿ, ಗಾಳಿಯಲ್ಲಿ ಜಿಗಿದರು. ಈ ಕ್ಯಾಚ್ ಪಡೆಯಲು ಹಾರ್ದಿಕ್ ಸುಮಾರು 27 ಮೀಟರ್ ದೂರ ಕ್ರಮಿಸಿದ್ದರು. ಅಲ್ಲದೆ ಒನ್ ಹ್ಯಾಂಡ್ ಕ್ಯಾಚ್ ಪಡೆದು ಅಬ್ಬರಿಸಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್ ಸಿಡಿಸಿದರು. ಭಾರತದ ಪರ ಯುವ ಆಟಗಾರ ನಿತೀಶ್ ರೆಡ್ಡಿ 34 ಎಸೆತಗಳಲ್ಲಿ 74 ರನ್ ಸಿಡಿಸಿದರು. ಇನ್ನು ರಿಂಕು ಸಿಂಗ್ 29 ಎಸೆತಗಳಲ್ಲಿ 53 ರನ್ ಬಾರಿಸಿದರು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 135 ರನ್ ಸೇರಿಸಿ ಸೋಲು ಕಂಡಿತು.