ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳು ನಡೆಯುತ್ತಿವೆ. ಈ ಪಂದ್ಯದಲ್ಲಿ ಮಂಗಳವಾರ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ದೊಡ್ಡ ಸಾಧನೆ ಮಾಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ 1000 ರನ್‌ಗಳನ್ನು ಪೂರೈಸಿದ ಮೊದಲ ಭಾರತದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಹರ್ಮನ್ ಪ್ರೀತ್ ಕೌರ್ ಪಾತ್ರರಾಗಿದ್ದಾರೆ.
ಡಿವೈ ಪಾಟೀಲ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 19.2 ಓವರ್‌ಗಳಲ್ಲಿ 3 ವಿಕೆಟ್‌ಗೆ 193 ರನ್ ಸೇರಿಸಿ ಜಯ ಸಾಧಿಸಿತು. ಈ ಗೆಲುವಿನಲ್ಲಿ ನಾಯಕಿ ಹರ್ಮನ್ ವಿಶಿಷ್ಠ ಕಾಣಿಕೆ ನೀಡಿದರು. ಹರ್ಮನ್ ಪ್ರೀತ್ 43 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 71 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಈ ಸೊಗಸಾದ ಇನಿಂಗ್ಸ್ ಸಹಾಯದಿಂದ ಹರ್ಮನ್ ಪ್ರೀತ್ ಕೌರ್ ಡಬ್ಲ್ಯೂಪಿಎಲ್ ಇತಿಹಾಸದಲ್ಲಿ 1000 ರನ್ ಪೂರೈಸಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇವರಿಗೂ ಮುನ್ನ ಈ ಸಾಧನೆಯನ್ನು 36 ವರ್ಷದ ನ್ಯಾಟ್ ಸಿವರ್-ಬ್ರಂಟ್ ಮಾಡಿ ಬೀಗಿದ್ದರು. ಹರ್ಮನ್ 1000 ಕ್ಲಬ್ ಸೇರಲು ಅವರಿಗೆ 55 ರನ್ ಅವಶ್ಯಕತೆ ಇತ್ತು. ಇವರು ಈ ಮೈಲಿಗಲ್ಲನ್ನು ತಮ್ಮದೇ ಧಾಟಿಯಲ್ಲಿ ಪೂರ್ಣಗೊಳಿಸಿದರು. ರಾಜೇಶ್ವರಿ ಗಾಯಕ್ವಾಡ್ ಎಸೆದ 18ನೇ ಓವರ್‌ನ ಐದನೇ ಎಸೆತದಲ್ಲಿ ಹರ್ಮನ್ ಬೌಂಡರಿ ಬಾರಿಸಿ ಈ ಸಾಧನೆ ಮಾಡಿದರು.
ಹರ್ಮನ್ ಪ್ರೀತ್ ಈ ಲೀಗ್‌ನಲ್ಲಿ ಮತ್ತೊಂದು ದಾಖಲೆಯನ್ನು ಸಹ ಬರೆದರು. ಒಂದು ಸಾವಿರ ರನ್ ಪೂರೈಸಿದ ಮೊದಲ ನಾಯಕಿ ಎಂಬ ಹೆಗ್ಗಳಿಕೆ ಸಹ ಇವರದ್ದಾಯಿತು. ಇದೇ ಸಾಲಿಗೆ ಸೇರಲು ಮೆಗ್ ಲ್ಯಾನಿಂಗ್ ಸಹ ಕಾತುರರಾಗಿದ್ದಾರೆ. ಬುಧವಾರ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ್ಸ್ ನಡುವಣ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ 4 ರನ್ ಬಾರಿಸುವಲ್ಲಿ ಸಫಲರಾದರೆ ಈ ದೊಡ್ಡ ಸಾಧನೆಯನ್ನು ಮಾಡಬಹುದು. ಇವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ 996 ರನ್ ಸಿಡಿಸಿದ್ದಾರೆ. ಮೆಗ್ ಲ್ಯಾನಿಂಗ್ ಈ ಸಾಧನೆ ಮಾಡುವಲ್ಲಿ ಸಫಲರಾದಲ್ಲಿ, ಈ ಸಾಧನೆ ಮಾಡಿದ ಮೂರನೇ ಆಟಗಾರ್ತಿ ಆಗಲಿದ್ದಾರೆ. ಅಲ್ಲದೆ ಸಾವಿರ ಕ್ಲಬ್ ಸೇರಿದ ಎರಡನೇ ನಾಯಕಿ ಎಂಬ ಹೆಗ್ಗಳಿಕೆ ಇವರದ್ದಾಗಲಿದೆ.
ನ್ಯಾಟ್ ಸಿವರ್-ಬ್ರಂಟ್- 1101
ಹರ್ಮನ್ ಪ್ರೀತ್ ಕೌರ್- 1018
ಮೆಗ್ ಲ್ಯಾನಿಂಗ್- 996
ಎಲ್ಲಿಸ್ ಪೆರ್ರಿ- 972
ಶಫಾಲಿ ವರ್ಮಾ- 887