ನವಿ ಮುಂಬೈ: ನಾಯಕಿ ಹರ್ಮನ್ ಪ್ರೀತ್ ಕೌರ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ಇಂಡಿಯ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಟೂರ್ನಿಯಲ್ಲಿ ಹರ್ಮನ್ ಪ್ರಿತ್ ಪಡೆ ಎರಡನೇ ಗೆಲುವಿನ ನಗೆ ಬೀರಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡದ ಆರಂಭ ಕಳಪೆಯಾಗಿತ್ತು. ಸ್ಟಾರ್ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ (8) ರನ್ ಕಲೆ ಹಾಕುವಲ್ಲಿ ವಿಫಲರಾದರು. ಇನ್ನೋರ್ವ ಆರಂಭಿಕ ಆಟಗಾರ್ತಿ ಬೆತ್ ಮೂನಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 33 ರನ್ ಬಾರಿಸಿ ಔಟ್ ಆದರು.

ನಾಯಕಿ ಆಶ್ಲೀ ಗಾರ್ಡ್ನರ್ 11 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 20 ರನ್ ಬಾರಿಸಿದ್ದಾಗ ನಿಕೋಲಾ ಕ್ಯಾರಿ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ 23 ವರ್ಷದ ಕನಿಕಾ ಅಹುಜಾ 18 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ 35 ರನ್ ಸಿಡಿಸಿ ಔಟ್ ಆದರು. ಆಯುಷಿ ಸೋನಿ ಗಾಯಕ್ಕೆ ತುತ್ತಾಗಿ ಮೈದಾನದಿಂದ ಹೊರ ನಡೆದರು.
ಮಧ್ಯಮ ಕ್ರಮಾಂಕದಲ್ಲಿ ಜಾರ್ಜಿಯಾ ವೇರ್ಹ್ಯಾಮ್ ಹಾಗೂ ಭಾರತಿ ಫುಲ್ಮಾಲಿ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾಯಿತು. ಜಾರ್ಜಿಯಾ ವೇರ್ಹ್ಯಾಮ್ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 43 ರನ್ ಸಿಡಿಸಿದರು. ಭಾರತಿ ಫುಲ್ಮಾಲಿ 3 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 36 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಗುಜರಾತ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 192 ರನ್ ಸೇರಿಸಿತು.

ಆರಂಭಿಕರಾದ ಜಿ ಕಮಲಿನಿ (13) ಹಾಗೂ ಹ್ಯಾಲಿ ಮ್ಯಾಥ್ಯೂಸ್ (22) ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡುವಲ್ಲಿ ವಿಫಲರಾದರು. ಈ ಜೋಡಿ ತಂಡದ ಮೊತ್ತ 37 ರನ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಅಮನ್‌ಜೋತ್ ಕೌರ್ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಜೋಡಿ ಭರ್ಜರಿ ಸೊಗಸಾದ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 44 ಎಸೆತಗಳಲ್ಲಿ 72 ರನ್ ಗಳ ಜೊತೆಯಾಟ ಕಾಣಿಕೆ ನೀಡಿತು. ಮಧ್ಯಮ ಕ್ರಮಾಂಕದಲ್ಲಿ ಅಮನ್‌ಜೋತ್ ಕೌರ್ 7 ಬೌಂಡರಿ ನೆರವಿನಿಂದ 40 ರನ್ ಬಾರಿಸಿ ಸೋಫಿ ಡಿವೈನ್ ಎಸೆತದಲ್ಲಿ ಔಟ್ ಆದರು.
ನಾಯಕಿ ಹರ್ಮನ್ ಪ್ರೀತ್ ಕೌರ್ ಸೊಗಸಾದ ಬ್ಯಾಟಿಂಗ್ ನಡೆಸಿದರು. ಸಮಯೋಚಿತ ಬ್ಯಾಟಿಂಗ್ ನಡೆಸಿದ ಹರ್ಮನ್ 43 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 71 ರನ್ ಸಿಡಿಸಿದರು. ನಿಕೋಲಾ ಕ್ಯಾರಿ 6 ಬೌಂಡರಿ ನೆರವಿನಿಂದಅಜೇಯ 38 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ಮುಂಬೈ 19.2 ಓವರ್‌ಗಳಲ್ಲಿ 3 ವಿಕೆಟ್‌ಗೆ 193 ರನ್ ಸೇರಿಸಿ ಜಯ ಸಾಧಿಸಿತು.