ಸದ್ಯ ನಡೆಯುತ್ತಿರುವ ಶ್ರೀಮಂತ ಟಿ20 ಕ್ರಿಕೆಟ್ ಪಂದ್ಯಾವಳಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ನಂತರ, 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಚಾಲನೆ ಸಿಗಲಿದೆ.
ಐಸಿಸಿ ಟಿ20 ವಿಶ್ವಕಪ್‌ಗೆ ತಂಡವನ್ನು ಸಲ್ಲಿಸುವ ಗಡುವು ಸಮೀಪಿಸುತ್ತಿದ್ದು, ಇದೇ ವೇಳೆ ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಅವರು ಟಿ20 ವಿಶ್ವಕಪ್‌ಗೆ ತಮ್ಮ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ.
ಐಸಿಸಿ ಟಿ20 ಟೂರ್ನಿಯಲ್ಲಿ ದೈತ್ಯ ತಂಡಗಳೊಂದಿಗೆ ಸ್ಪರ್ಧಿಸಲಿರುವ 15 ಸದಸ್ಯರ ತಂಡವನ್ನು ನೋಡಲು ದೇಶಾದ್ಯಂತ ಕ್ರಿಕೆಟ್ ಪ್ರೇಮಿಗಳು ಉಸಿರು ಬಿಗಿಹಿಡಿದು ಕಾಯುತ್ತಿರುವಾಗ, ಹರ್ಷಾ ಭೋಗ್ಲೆ ತಮ್ಮ ಆಯ್ಕೆಯ ತಂಡವನ್ನು ನೇರವಾಗಿ ಹೊಂದಿಸಿದ್ದಾರೆ.
ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಬಿಸಿಸಿಐ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಆದಾಗ್ಯೂ, ಇದಕ್ಕಾಗಿ ಏಪ್ರಿಲ್ 27ರಂದು ನವದೆಹಲಿಯಲ್ಲಿ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ.

ಮೇ 1ರೊಳಗೆ ಪ್ರಾಥಮಿಕ ತಂಡವನ್ನು ಐಸಿಸಿಗೆ ಸಲ್ಲಿಸಬೇಕಿರುವುದರಿಂದ, ಐಪಿಎಲ್ 2024ರ ಮಧ್ಯಯೇ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಒಂದೆರಡು ದಿನಗಳಲ್ಲಿ ಭಾರತ ತಂಡವನ್ನು ಆಯ್ಕೆ ಮಾಡಲಿದೆ.
ಟಿ20 ಕ್ರಿಕೆಟ್ ವಿಶ್ವಕಪ್‌ಗೆ ಭಾರತ ಆಯ್ಕೆಯಲ್ಲಿ ಹರ್ಷಾ ಭೋಗ್ಲೆ ಅವರು ಆರಂಭಿಕರ ಸ್ಥಾನಕ್ಕಾಗಿ ನಾಯಕ ರೋಹಿತ್ ಶರ್ಮಾ ಮತ್ತು ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ತಂಡದ ಸೇರ್ಪಡೆಯ ಬಗ್ಗೆ ತೀವ್ರ ಪರಿಶೀಲನೆಗೆ ಒಳಗಾಗಿದ್ದಾರೆ. ಆದರೆ ಹರ್ಷಾ ಭೋಗ್ಲೆ ಮಾತ್ರ ಸ್ಟಾರ್ ಬ್ಯಾಟರ್‌ಗೆ ಮಣೆ ಹಾಕಿದ್ದಾರೆ.

ಆಶ್ಚರ್ಯಕರವಾಗಿ, ಎರಡನೇ ವಿಕೆಟ್ ಕೀಪರ್-ಬ್ಯಾಟರ್ ಸ್ಥಾನಕ್ಕಾಗಿ ಕೆಎಲ್ ರಾಹುಲ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಸ್ಫೋಟಕ ಫಿನಿಶರ್ ರಿಂಕು ಸಿಂಗ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಹೊರಗಿಟ್ಟಿರುವುದು ಕುತೂಹಲ ಮೂಡಿಸಿದೆ.
ಐಪಿಎಲ್ 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಅಲೆಗಳನ್ನು ಸೃಷ್ಟಿಸುತ್ತಿರುವ ಸ್ಫೋಟಕ ಆಲ್‌ರೌಂಡರ್ ಶಿವಂ ದುಬೆ ಕೂಡ ಸೇರ್ಪಡೆಗೊಂಡಿದ್ದಾರೆ. ಇನ್ನು ಕಾರು ಅಪಘಾತದ ನಂತರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊರಗುಳಿದಿರುವ ರಿಷಭ್ ಪಂತ್ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರೊಂದಿಗೆ ಸ್ಥಾನ ಅಲಂಕರಿಸಿದ್ದಾರೆ.

ವೇಗದ ಬೌಲಿಂಗ್‌ನಲ್ಲಿ ಸಂದೀಪ್ ಶರ್ಮಾ ಅವರಿಗೆ ಆದ್ಯತೆ ನೀಡುವುದು ಹರ್ಷಾ ಭೋಗ್ಲೆ ಅವರ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ಸಂದೀಪ್ ಶರ್ಮಾ ಅವರು ನಿಧಾನಗತಿಯ ವೆಸ್ಟ್ ಇಂಡೀಸ್ ಪಿಚ್‌ಗಳಲ್ಲಿ ಹೇಳಿ ಮಾಡಿಸಿದ ಬೌಲರ್ ಆಗಿರಬಹುದು ಎಂದು ಹೇಳಿದ್ದಾರೆ.
ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮತ್ತು ಅರ್ಶ್‌ದೀಪ್ ಸಿಂಗ್ ಅವರು ತಂಡದಲ್ಲಿರುವ ಇತರ ವೇಗಿಗಳು. ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಸ್ಪಿನ್ ವಿಭಾಗದ ಚುಕ್ಕಾಣಿ ಹಿಡಿದಿದ್ದಾರೆ.
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಸಂದೀಪ್ ಶರ್ಮಾ.