
ಮುಂಬೈ, ಏಪ್ರಿಲ್ 15: ಭಾರತದ ವಿಶ್ವಕಪ್ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಸ್ಥಾನ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದ್ದ ಅನುಭವಿ ಆಟಗಾರ ಅಂಬಟಿ ರಾಯುಡುಗೆ ಕೊಕ್ ನೀಡಲಾಗಿದೆ. ಈ ವಿಚಾರವಾಗಿ ಕ್ರಿಕೆಟ್ ಪರಿಣತ ಹಾಗೂ ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಟ್ವಿಟರ್ ಮೂಲಕ ಬೇಸರ ವ್ಯಕ್ತ ಪಡಿಸಿದ್ದಾರೆ.
"ಅಂಬಟಿ ರಾಯುಡು ಆಘಾತ ಅನುಭವಿಸಿರುತ್ತಾರೆ. ಏಕದಿನ ಕ್ರಿಕೆಟ್ ಕಡೆಗೆ ಹೆಚ್ಚು ಗಮನ ನೀಡುವ ಉದ್ದೇಶದಿಂದ 4 ದಿನಗಳ (ಪ್ರಥಮ ದರ್ಜೆ) ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದ ಅವರಿಗೆ ತಂಡದಲ್ಲಿ ಸ್ಥಾನ ಬಹುತೇಕ ಖಾತ್ರಿಯಾಗಿತ್ತು. ಆದರೆ, ಸ್ಥಿರತೆ ಕಾಯ್ದುಕೊಳ್ಳುವುದು ಬಹಳ ಕಷ್ಟದ ಕೆಲಸ. ಲಯ ಕಂಡುಕೊಳ್ಳಲು ಹೆಚ್ಚು ಪ್ರಯತ್ನಿಸಿದಷ್ಟೂ ಪೀಕಲಾಟ ಹೆಚ್ಚಾಗುತ್ತದೆ. ಅವರಿಗಾಗಿ ನನ್ನ ಹೃದಯ ಕಳಚಿ ಬಿದ್ದಿದೆ,'' ಎಂದು ಹರ್ಷ ಭೋಗ್ಲೆ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ನೀಡಿದ್ದ 33 ವರ್ಷ ಹೈದರಾಬಾದ್ ಆಟಗಾರ, ಟೀಮ್ ಇಂಡಿಯಾದ ಏಕದಿನ ತಂಡದಲ್ಲಿ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಲು ಭಗೀರಥ ಪ್ರಯತ್ನವನ್ನೇ ನಡೆಸಿದ್ದರು.
ಭಾರತ ತಂಡದ ಪರ 55 ಏಕದಿನ ಪಂದ್ಯಗಳನ್ನು ಆಡಿರುವ ರಾಯುಡು, 47.06ರ ಸರಾಸರಿಯಲ್ಲಿ 1694 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 10 ಅರ್ಧಶತಕಗಳು ಮತ್ತು 3 ಶತಕಗಳು ಸೇರಿವೆ.
ಆದರೆ, ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾಗಿರುವ ರಾಯುಡು, ಕಳೆದ ಮೂರು ಸರಣಿಗಳಲ್ಲಿ ವೈಫಲ್ಯ ಎದುರಿಸಿದ್ದಾರೆ. ಕೇವಲ ನ್ಯೂಜಿಲೆಂಡ್ ಪ್ರವಾಸದಲ್ಲಿ ಮಾತ್ರವೇ ಒಂದು ಅರ್ಧಶತಕ ಗಳಿಸಿದ ಅವರು, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದರು.
ಹೀಗಾಗಿ ಕಳಪೆ ಫಾರ್ಮ್ ನಿಂದಾಗಿ ವಿಶ್ವಕಪ್‌ಗೆ ಪ್ರಕಟಿಸಲಾದ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲೂ 8 ಪಂದ್ಯಗಳಿಂದ ಒಂದು ಅರ್ಧಶತಕ ಸೇರಿದ ಕೇವಲ 138 ರನ್‌ಗಳನ್ನು ಮಾತ್ರವೇ ಗಳಿಸಿದ್ದಾರೆ.
2019ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಇಂಗ್ಲೆಂಡ್ ಆತಿಥ್ಯ ವಹಿಸಿದ್ದು, ಮೇ 30ರಂದು ಟೂರ್ನಿ ಆರಂಭವಾಗಲಿದೆ.