ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಬಾರ್ಡರ್ ಗವಾಸ್ಕರ್ ಸರಣಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಟೀಮ್ ಇಂಡಿಯಾ ಈ ಸರಣಿಯಲ್ಲಿ ಗೆಲುವು ಸಾಧಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಆಸ್ಟ್ರೇಲಿಯಾ ನೆಲದಲ್ಲಿ ಮೂರನೇ ಬಾರಿಗೆ ಬಾರ್ಡರ್ ಗವಾಸ್ಕರ್ ಸರಣಿಯನ್ನು ಎತ್ತಿ ಹಿಡಿಯುವ ಇರಾದೆ ಭಾರತ ತಂಡದ್ದಾಗಿದೆ. ಟೀಮ್ ಇಂಡಿಯಾ ಹಾಗೂ ಆಸೀಸ್ ನಡುವಣ ಮೊದಲ ಟೆಸ್ಟ್ ನವೆಂಬರ್ 22 ರಿಂದ ಪರ್ತ್‌ನಲ್ಲಿ ನಡೆಯಲಿದ್ದು, ರೋಚಕತೆ ಮನೆ ಮಾಡಿದೆ. ಟೀಮ್ ಇಂಡಿಯಾದ ಮೊದಲ ಟೆಸ್ಟ್‌ನ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಆಡುವುದು ಅನುಮಾನ. ಕೌಟುಂಬಿಕ ಕಾರಣಗಳಿಂದ ಇವರು ಇನ್ನು ಭಾರತದಲ್ಲಿ ಇದ್ದು, ಮೊದಲ ಟೆಸ್ಟ್‌ನಲ್ಲಿ ಜಸ್ಪ್ರಿತ್ ಬುಮ್ರಾ ತಂಡವನ್ನು ಮುನ್ನಡೆಸಬಹುದಾಗಿದೆ. ಈ ವೇಳೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಚಿಂತೆ ಮೂಡಿದೆ. ಟೀಮ್ ಇಂಡಿಯಾದ ಪರ ಇಬ್ಬರು ಯುವ ವೇಗಿಗಳು ಒಂದು ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ.

ಬೌನ್ಸಿ ಟ್ರ್ಯಾಕ್‌ನಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿ ಆಡುತ್ತಿರುವುದರಿಂದ ಮೊದಲ ಟೆಸ್ಟ್‌ಗೆ ಮೂರು ವೇಗಿಗಳು ಸ್ಥಾಣ ಪಡೆಯಬಹುದಾಗಿದೆ. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಸ್ಥಾನ ಬಹುತೇಕ ಖಚಿತವಾಗಿದೆ. ಇನ್ನೊಂದು ಸ್ಥಾನಕ್ಕೆ ಹರ್ಷಿತ್ ರಾಣಾ ಹಾಗೂ ಪ್ರಸಿದ್ಧ ಕೃಷ್ಣ ಪೈಪೋಟಿ ನಡೆಸಲಿದ್ದಾರೆ. ಈ ಇಬ್ಬರು ಯುವ ಆಟಗಾರರು ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿದ ಬಳಸಿಕೊಂಡು ಅಬ್ಬರಿಸಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಅನಧಿಕೃತ ಟೆಸ್ಟ್‌ನಲ್ಲಿ ಪ್ರಸಿದ್ಧ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇಷ್ಟೇ ಅಲ್ಲದೆ ಇವರು ಈಗಾಗಲೇ ಭಾರತದ ಪರ ಪದಾರ್ಪಣೆ ಮಾಡಿದ್ದಾರೆ. 2 ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಅಖಾಡಕ್ಕೆ ಇಳಿದಿರುವ ಪ್ರಸಿದ್ಧ 2 ವಿಕೆಟ್ ಕಬಳಿಸಿದ್ದಾರೆ. ದೇಶೀಯ ಟೂರ್ನಿಯಲ್ಲಿ ಇವರು ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 21 ಪ್ರಥಮ ದರ್ಜೆ ಪಂದ್ಯಗಳಲ್ಲಿ 75 ವಿಕೆಟ್ ಕಬಳಿಸಿದ್ದಾರೆ.
ಪ್ರಸಿದ್ಧ ಕೃಷ್ಣಾ ಅವರಿಗೆ ಹರ್ಷಿತಾ ರಾಣಾ ಭರ್ಜರಿ ಪೈಪೋಟಿ ನೀಡಬಲ್ಲರು. ಇವರು ಸಹ ಆಡಿದ 10 ಪ್ರಥಮ ದರ್ಜೆ ಪಂದ್ಯದಲ್ಲಿ 43 ವಿಕೆಟ್ ಕಬಳಿಸಿದ್ದಾರೆ. ಪಂದ್ಯ ಒಂದರಲ್ಲಿ 45 ರನ್ ನೀಡಿ 7 ವಿಕೆಟ್ ಕಬಳಿಸಿ ಹರ್ಷಿತ್ ಮಿಂಚಿದ್ದಾರೆ. ಅಲ್ಲದೆ ಹರ್ಷಿತ್ ಈಗಾಗಲೇ ಲೀಸ್ಟ್ ಎ ಪಂದ್ಯದಲ್ಲಿ 22 ವಿಕೆಟ್ ಕಬಳಿಸಿದ್ದಾರೆ. ಇವರು ಭಾರತದ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುವ ಕನಸು ಕಾಣುತ್ತಿದ್ದಾರೆ.

ಗೌತಮ್ ಗಂಭೀರ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಕೋಚ್ ಆಗಿದ್ದಾಗ, ಅವರು ಹರ್ಷಿತ್ ರಾಣಾ ಅದೇ ತಂಡದ ಸದಸ್ಯ. ಇವರೊಂದಿಗೆ ಗಂಭೀರ ಹೆಚ್ಚು ಹೊತ್ತು ಕೆಲಸ ಮಾಡಿದ್ದು, ಹರ್ಷಿತ್ ರಾಣಾ ಬಗ್ಗೆ ಗಂಭೀರ್‌ಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಮೊದಲ ಟೆಸ್ಟ್‌ನಲ್ಲಿ ಹರ್ಷಿತ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶವು ಲಭಿಸಬಹುದು ಎಂದು ಹೇಳಲಾಗುತ್ತಿದೆ.