ಲಂಡನ್, ಮೇ 30: ದಕ್ಷಿಣ ಆಫ್ರಿಕದ ಆರಂಭಿಕ ಆಟಗಾರ ಹಶೀಂ ಆಮ್ಲಾ ಅವರು ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭರ್ಜರಿಯಾಗಿ ತಯಾರಿ ನಡೆಸಿದ್ದಾರೆ. ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ತ್ವರಿತಗತಿಯಲ್ಲಿ 7,000 ರನ್ ಗಳಿಸಿದ ಸಾಧನೆ ಮಾಡುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆ ಮುರಿದಿದ್ದಾರೆ.
153ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ, 150ನೇ ಇನಿಂಗ್ಸ್‌ನಲ್ಲಿ ಅಮ್ಲ ಅವರು ಈ ಸಾಧನೆ ಮಾಡಿದ್ದಾರೆ.ಕೊಹ್ಲಿ ಅವರು 161 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಇದಕ್ಕೂ ಮುನ್ನ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ತ್ವರಿತಗತಿಯಲ್ಲಿ 7 ಸಾವಿರರನ್ ಗಳಿಸಿದ ಸಾಧನೆ ಮಾಡಿದ್ದರು. 174 ಇನ್ನಿಂಗ್ಸ್ ಗಳಲ್ಲಿ ಗಂಗೂಲಿ ಮಾಡಿದ್ದ ಸಾಧನೆ 13 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (166 ಇನ್ನಿಂಗ್ಸ್) ಮುರಿದಿದ್ದರು. ನಂತರ ಕೊಹ್ಲಿ ಅವರು ಎಬಿಡಿ ದಾಖಲೆ ಮುರಿದರು.

ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ 6.1ನೇ ಓವರ್‌ನಲ್ಲಿ ಫಿನ್ ಎಸೆತವನ್ನು ಬೌಂಡರಿಗಟ್ಟುವ ಮೂಲಕ 7 ಸಾವಿರ ರನ್‌ಗಳ ಮೈಲುಗಲ್ಲನ್ನು ಮುಟ್ಟಿದರು.
ಅಮ್ಲ ಅವರು ಏಕದಿನ ಕ್ರಿಕೆಟ್‌ನಲ್ಲಿ ಈ ಹಿಂದೆ 2,000, 3,000, 4,000, 5,000. 6,000 ರನ್‌ಗಳನ್ನು ಕೂಡಾ ತ್ವರಿತಗತಿಯ ಪೂರ್ಣಗೊಳಿಸಿದ ಸಾಧನೆ ಆಮ್ಲಾ ಅವರ ಹೆಸರಿನಲ್ಲಿದೆ.
ಅಮ್ಲ ಅವರು ಈ ಪಂದ್ಯದಲ್ಲಿ 54 ಎಸೆತಗಳನ್ನು 11 ಬೌಂಡರಿಗಳ ಸಹಾಯದಿಂದ 55 ರನ್ ಗಳಿಸಿದ್ದಲ್ಲದೆ, ಕ್ಲಿಂಟನ್ ಡಿ ಕಾಕ್ ಜತೆಗೂಡಿ ಮೊದಲ ವಿಕೆಟ್‌ಗೆ 95 ರನ್‌ಗಳ ಜೊತೆಯಾಟ ನೀಡಿದರು.
ದಕ್ಷಿಣ ಆಫ್ರಿಕ ತಂಡಕ್ಕೆ ಜಯ: ದಕ್ಷಿಣ ಆಫ್ರಿಕ ತಂಡ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಗೆಲುವಿಗೆ 154 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ಇನ್ನೂ 127 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 156 ರನ್ ಗಳಿಸಿತು. ಆದರೆ, ಮೂರು ಏಕದಿನ ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ.