
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಕನ್ನಡಿಗ ಕೆಎಲ್ ರಾಹುಲ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಕೆಎಲ್ ರಾಹುಲ್ ನಾಯಕತ್ವ ವಹಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ವೈಟ್‌ವಾಶ್ ಮುಖಭಂಗವನ್ನು ಅನುಭವಿಸಿತ್ತು. ಈ ಸೋಲಿನ ಬಳಿಕ ಕೆಎಲ್ ರಾಹುಲ್ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ ಗಂಭೀರ್ ರಾಹುಲ್ ನಾಯಕತ್ವದ ಬಗ್ಗೆ ಈಗಲೇ ತೀರ್ಮಾನಕ್ಕೆ ಬರುವುದು ಬಹಳ ಅವಸರ ಮಾಡಿದಂತಾಗುತ್ತದೆ ಎಂದಿದ್ದಾರೆ.
ಐಪಿಎಲ್‌ನಲ್ಲಿ ಗೌತಮ್ ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದು ಕೆಎಲ್ ರಾಹುಲ್ ಈ ತಂಡದ ನಾಯಕನಾಗಿದ್ದಾರೆ. ತಂಡದ ಲೋಗೋ ಅನಾವರಣದ ಬಳಿಕ ಗಂಭೀರ್ ಇಂಡಿಯಾ ಟುಡೇಗೆ ಪ್ರತಿಕ್ರಿಯಿಸಿದ್ದು ರಾಹುಲ್ ನಾಯಕತ್ವದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.
ಕೆಎಲ್ ರಾಹುಲ್ ಕಳೆದ ಎರಡು ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದರೂ ಆ ತಂಡವನ್ನು ಫ್ಲೇಆಫ್‌ಗೇರಿಸಲು ವಿಫಲವಾಗಿದ್ದರು. ಆದರೆ ವೈಯಕ್ತಿಕವಾಗಿ ಕೆಎಲ್ ರಾಹುಲ್ ಪ್ರದರ್ಶನ ಅಮೋಘವಾಗಿತ್ತು. ಇನ್ನು ವಿರಾಟ್ ಕೊಹ್ಲಿ ನಾಯಕತ್ವ ತೊರೆದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೆಎಲ್ ರಾಹುಲ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿತ್ತು. ಆದರೆ ನಾಯಕತ್ವ ವಹಿಸಿಕೊಂಡ ರೋಹಿತ್ ಶರ್ಮಾ ಗಾಯದ ಕಾರಣದಿಂದಾಗಿ ಸರಣಿಯಿಂದ ಹೊರಕ್ಕುಳಿದ ಕಾರಣ ತಂಡದ ನಾಯಕತ್ವದ ಹೊಣೆಗಾರಿಕೆ ಕೆಎಲ್ ರಾಹುಲ್ ಹೆಗಲಿಗೆ ಬಿದ್ದಿತ್ತು. ಈ ಸರಣಿಯಲ್ಲಿ ಭಾರತ ಅನುಭವಿಸಿದ ಹಿನ್ನಡೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.
"ಕೆಲವೊಮ್ಮೆ ನಾವು ಕೆಲವರನ್ನು ಪ್ರದರ್ಶನ ಹಾಗೂ ಫಲಿತಾಂಶದ ದೃಷ್ಟಿಕೋನದಿಂದ ಮಾತ್ರವೇ ನೋಡುತ್ತೇವೆ. ಆದರೆ ಕೇವಲ ನಾಲ್ಕು ಪಂದ್ಯಗಳ ಫಲಿತಾಂಶವನ್ನು ನೋಡಿ ಒಬ್ಬ ನಾಯಕನ ಅರ್ಹತೆಯನ್ನು ಹೇಳುವುದು ಬಹಳ ಆತುರಪಟ್ಟಂತಾಗುತ್ತದೆ" ಎಂದು ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ. ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಭಾರತ ತಂಡದ ಉಪನಾಯಕನಾಗಿ ಮುಂದುವರಿಯಲಿದ್ದಾರೆ.
"ನಾಯಕನಾದವನಲ್ಲಿ ಇರಬೇಕಾದ ಅತಿ ದೊಡ್ಡ ಗುಣವೆಂದರೆ ಗೆದ್ದಾಗ ತುಂಬಾ ಎತ್ತರಕ್ಕೇರುವುದು ಹಾಗೂ ಸೋತಾಗ ಕುಸಿದು ಹೋಗುವಂತೆ ಇರಬಾರದು. ಕೆಎಲ್ ರಾಹುಲ್ ಬಳಿ ಇರುವ ಅತ್ಯುತ್ತಮ ಗುಣವೆಂದರೆ ಅದೇ ಆಗಿದೆ. ಆತ ನಾಯಕತ್ವದ ಹಾದಿಯಲ್ಲಿ ಉತ್ತಮವಾಗಿ ಸಾಗುತ್ತಿದ್ದಾರೆ. ಆಟಗಾರನಾಗಿ ಅಥವಾ ನಾಯಕನಾಗಿ ನಾನು ಎಲ್ಲವನ್ನೂ ಸಾಧಿಸಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ. ನೀವು ಪ್ರತಿದಿನವೂ ಬೆಳವಣಿಗೆ ಸಾಧಿಸುತ್ತಿರಬೇಕು. ನಿಮ್ಮ ವೃತ್ತಿ ಜೀವನದ ಅಂತಿ ದಿನದವರೆಗೂ ನಿಮ್ಮಿಂದ ಅತ್ಯುತ್ತಮವಾದದ್ದನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತಲೇ ಇರಬೇಕು" ಎಂದಿದ್ದಾರೆ ಗಂಭೀರ್.
"ಕೆಎಲ್ ರಾಹುಲ್ ಅವರನ್ನು ನಾನು ಕಂಡಿರುವಂತೆ ಆತ ಶ್ರೇಷ್ಠವಾದ ಭವಿಷ್ಯವನ್ನು ಹೊಂದಿದ್ದಾರೆ. ಕೇವಲ ಆಟಗಾರನಾಗಿ ಮಾತ್ರವಲ್ಲ. ನಾಯಕನಾಗಿಯೂ ರಾಹುಲ್ ಅತ್ಯುತ್ತಮ ಭವಿಷ್ಯ ಹೊಂದಿದ್ದಾರೆ. ಯಾಕೆಂದರೆ ಅವರಲ್ಲಿರುವ ಆ ತಾಳ್ಮೆ ಹಾಗೂ ಸಮಚಿತ್ತ ಕೆಲವರಲ್ಲಿ ಮಾತ್ರವೇ ಇರಲು ಸಾಧ್ಯ. ನೀವು ಆ ಗುಣವನ್ನು ಹೊಂದಿದ್ದಾಗ ಇಡೀ ತಂಡದ ಮೇಲೆ ಕೂಡ ಅದು ಪರಿಣಾಮವನ್ನು ಬೀರುತ್ತದೆ" ಎಂದಿದ್ದಾರೆ ಗೌತಮ್ ಗಂಭೀರ್.