ಜುಲೈ 10 ಬುಧವಾರ, ಟೀಮ್ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಘಟಾನುಘಟಿಗಳ ಹೆಸರುಗಳೊಂದಿಗೆ ಎದ್ದಿದ್ದ ಕೆಲವು ಊಹಾಪೋಹಗಳಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂತ್ಯ ಹಾಡಿದೆ.
2011ರ ವಿಶ್ವ ಚಾಂಪಿಯನ್ ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ಸದ್ಯ ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸದಲ್ಲಿದ್ದು, ವಿವಿಎಸ್ ಲಕ್ಷ್ಮಣ್ ಹಂಗಾಮಿ ಕೋಚ್ ಆಗಿ ತಂಡವನ್ನು ನೋಡಿಕೊಳ್ಳುತ್ತಿದ್ದಾರೆ.

ಇದೀಗ ಟೀಮ್ ಇಂಡಿಯಾ ನೂತನ ಹೆಡ್ ಕೋಚ್ ಆಗಿರುವ ಗಂಭೀರ್ ಯಾವಾಗ ತಂಡ ಸೇರಿಕೊಳ್ಳುತ್ತಾರೆ? ಅವರ ಸಂಭಾವನೆ ಎಷ್ಟು? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ತಿಳಿಯಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ.
ಮಂಗಳವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, ಗೌತಮ್ ಗಂಭೀರ್ ಹೆಡ್ ಕೋಚ್ ಆಗಿ ನೇಮಕಗೊಂಡಿರುವುದನ್ನು ದೃಢಪಡಿಸಿದ್ದಾರೆ. ಕೋಚ್ ಆಗಿದ್ದಕ್ಕೆ ಅಭಿನಂದನೆಗಳೊಂದಿಗೆ ಗಂಭೀರ್ ಅವರನ್ನು ಸ್ವಾಗತಿಸಿದ್ದಾರೆ.
ಇದಾದ ನಂತರ ಗಂಭೀರ್ ಅವರು ಸಹಾ ಹೆಡ್ ಕೋಚ್ ಆಗಿರುವುದನ್ನು ಸಂತಸ ವ್ಯಕ್ತಪಡಿಸಿದ್ದು, ಜಯ್ ಶಾ ಮತ್ತು ಬಿಸಿಸಿಐಗೆ ಧನ್ಯವಾದ ಹೇಳಿದ್ದಾರೆ.
ಸದ್ಯ ಭಾರತ ತಂಡವು ಜಿಂಬಾಬ್ವೆಯಲ್ಲಿ 5 ಪಂದ್ಯಗಳ ಟಿ20 ಸರಣಿ ಆಡುತ್ತಿದೆ. ಇದಾದ ಬಳಿಕ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದೆ.
ಇದು ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಅವರ ಮೊದಲ ಪ್ರವಾಸವಾಗಿದೆ. ಈ ಪ್ರವಾಸದಲ್ಲಿ ಭಾರತ ತಂಡವು 3 ಟಿ20 ಮತ್ತು ಏಕದಿನ ಪಂದ್ಯಗಳ ಸರಣಿಯನ್ನಿ ಆಡಲಿದೆ. ಜುಲೈ 27 ರಿಂದ ಆರಂಭವಾಗುವ ಟಿ20 ಸರಣಿಯಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ.
ಮಾಜಿ ಚಾಂಪಿಯನ್ ಕೋಚ್ ರಾಹುಲ್ ದ್ರಾವಿಡ್ ಅವರ ಅವಧಿಯನ್ನು ಗಮನಿಸಿದರೆ, 2023ರ ಏಕದಿನ ವಿಶ್ವಕಪ್ ನಂತರವೂ ವಿಸ್ತರಿಸಲಾಗಿತ್ತು. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಜಯ್ ಶಾ ಅವರು ಟಿ 20 ವಿಶ್ವಕಪ್ 2024ರವರೆಗೆ ರಾಹುಲ್ ದ್ರಾವಿಡ್ ಅವರನ್ನು ತಂಡದೊಂದಿಗೆ ಇರುವಂತೆ ಕೇಳಿಕೊಂಡಿದ್ದರು.
ನಂತರ ದ್ರಾವಿಡ್ ಅವರ ಐಸಿಸಿ ಟ್ರೋಫಿ ಗೆಲ್ಲುವ ಕನಸು ನನಸಾಯಿತು. ಹೀಗಾಗಿ ಗೌತಮ್ ಗಂಭೀರ್ ಅವರು ಕೂಡ 3.5 ವರ್ಷಗಳ ಕಾಲ ಈ ಹೆಡ್ ಕೋಚ್ ಹುದ್ದೆಯಲ್ಲಿ ಇರಲಿದ್ದಾರೆ. ಅವರ ಅಧಿಕಾರಾವಧಿ 2027ರ ಅಂತ್ಯಕ್ಕೆ ಕೊನೆಗೊಳ್ಳಲಿದೆ.
ಗೌತಮ್ ಗಂಭೀರ್ ಅವರ ಸಂಬಳದ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ ಅವರ ಸಂಭಾವನೆ ರಾಹುಲ್ ದ್ರಾವಿಡ್ ಗಿಂತ ಹೆಚ್ಚಾಗಿದೆ ಎನ್ನಲಾಗಿದೆ. ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿದ್ದಾಗ ವಾರ್ಷಿಕ 12 ಕೋಟಿ ರೂ. ಗಳನ್ನು ಪಡೆಯುತ್ತಿದ್ದರು.
ಐಪಿಎಲ್ 2024ರಲ್ಲಿ ಗೌತಮ್ ಗಂಭೀರ್ ತಮ್ಮ ಹಳೆಯ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)ಗೆ ಅದ್ಭುತ ಪುನರಾಗಮನವನ್ನು ಮಾಡಿ ಮೆಂಟರ್ ಆಗಿದ್ದರು. ಶ್ರೇಯಸ್ ಅಯ್ಯರ್ ನಾಯಕನಾಗಿ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡು ಉತ್ತಮವಾಗಿ ಮುನ್ನೆಡೆಸಿದ್ದರು.
ಇದರ ಪರಿಣಾಮವಾಗಿ ಕೆಕೆಆರ್ ಐಪಿಎಲ್ 2024ರ ಚಾಂಪಿಯನ್ ಆಯಿತು. ಹೀಗಾಗಿ ಟೀಮ್ ಇಂಡಿಯಾ ಹೆಡ್ ಕೋಚ್ ರೇಸ್‌ನಲ್ಲಿ ಗಂಭೀರ್ ಮುಂಚೂಣಿಯಲ್ಲಿದ್ದರು.