ಕಳೆದ ಭಾನುವಾರ, ಜೂನ್ 11ರಂದು ಲಂಡನ್‌ನ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 209 ರನ್‌ಗಳಿಂದ ಮುಖಭಂಗ ಅನುಭವಿಸಿತು. ಆಸ್ಟ್ರೇಲಿಯಾ ನೀಡಿದ್ದ 444 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟುವ ಹಾದಿಯಲ್ಲಿ 234 ರನ್‌ಗಳಿಗೆ ಸರ್ವಪತನ ಕಂಡು ಸೋತಿತು.
ಈವರೆಗೆ ನಡೆದ ಎರಡೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯಗಳಲ್ಲಿ ಭಾರತ ತಂಡ ಆಡಿದೆ. ದುರದೃಷ್ಟವಶಾತ್, ಭಾರತ ಎರಡೂ ಸಂದರ್ಭಗಳಲ್ಲಿ ಸೋಲು ಕಂಡಿದೆ. ಹೀಗಾಗಿ, 2013ರಲ್ಲಿ ಕೊನೆಯದಾಗಿ ಗೆದ್ದಿದ್ದ ಐಸಿಸಿ ಪ್ರಶಸ್ತಿಯನ್ನು ದಶಕದ ನಂತರವೂ ವಶಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ.

ಮೊದಲ ಆವೃತ್ತಿಯಲ್ಲಿ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ನಡೆದ 2019-21ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡದ 8 ವಿಕೆಟ್‌ಗಳ ಸೋಲು ಕಂಡಿತ್ತು. ಕಿವೀಸ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 249 ರನ್‌ಗಳಿಗೆ ಆಲೌಟ್ ಆಗಿದ್ದರೂ, ಗೆಲುವು ಸಾಧಿಸಿತ್ತು.
ಇತ್ತೀಚೆಗೆ ಮುಕ್ತಾಯಗೊಂಡ 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗ ಸಂಪೂರ್ಣ ಕಳಪೆಯಾಗಿತ್ತು. ಇದಕ್ಕೂ ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಮೊದ ಹಿನ್ನಡೆಯಾಗಿತ್ತು.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್ ಗಳಿಸಿದರೆ, ಆದರೆ ಭಾರತದ ಬ್ಯಾಟರ್‌ಗಳು ಉತ್ತಮ ಬ್ಯಾಟಿಂಗ್ ಪಿಚ್‌ನಲ್ಲಿಯೂ 296 ರನ್‌ಗಳಿಗೆ ಆಲೌಟ್ ಆಯಿತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ 234 ರನ್ ದಾಖಲಿಸಿತು. ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ 209 ರನ್‌ಗಳ ಸೋಲು ಕಾಣುವಂತಾಯಿತು.
ಭಾರತ ತಂಡ ಮತ್ತೊಮ್ಮೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸೋತ ನಂತರ, ಭವಿಷ್ಯದ ಕಾರ್ಯಯೋಜನೆಯ ವೇಳಾಪಟ್ಟಿ ಸಿದ್ಧಗೊಂಡಿದೆ. ರೋಹಿತ್ ಶರ್ಮಾ ಪಡೆಗೆ ಜುಲೈನಿಂದಲೇ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರ ಆರಂಭವಾಗಲಿದೆ.
* ಜುಲೈ 1ರಿಂದ ಜುಲೈ 16ರವರೆಗೆ ಮತ್ತು ಜುಲೈ 20ರಿಂದ ಜುಲೈ 24ರವರೆಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಎರಡು ಟೆಸ್ಟ್ ಪಂದ್ಯಗಳೊಂದಿಗೆ ಭಾರತ ತಂಡದ ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರಕ್ಕೆ ಚಾಲನೆ ಸಿಗಲಿದೆ.
* ವೆಸ್ಟ್ ಪ್ರವಾಸದ ನಂತರ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿ ಡಿಸೆಂಬರ್ 2023ರಿಂದ ಜನವರಿ 2024 ರವರೆಗೆ ಎರಡು ಟೆಸ್ಟ್ ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಮಾಡಲಿದೆ.
* ಆ ಬಳಿಕ ಟೀಂ ಇಂಡಿಯಾ 2024ರ ಜನವರಿ-ಫೆಬ್ರವರಿಯಲ್ಲಿ ಐದು ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡಕ್ಕೆ ಆತಿಥ್ಯ ವಹಿಸಲಿದೆ. ಅನಂತರ 2024ರ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ತಂಡವು ಎರಡು ಟೆಸ್ಟ್ ಪಂದ್ಯಗಳಿಗಾಗಿ ಭಾರತದ ಪ್ರವಾಸ ಕೈಗೊಳ್ಳಲಿದೆ.
* 2024ರ ಅಕ್ಟೋಬರ್-ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತವರು ನೆಲದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
* ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ಚಕ್ರದಲ್ಲಿ ಐದು ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸವನ್ನು ಸಹ ಒಳಗೊಂಡಿದೆ.