
ಟಿ20 ವಿಶ್ವಕಪ್ 2022ರ ಗುಂಪು ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಸೂಪರ್ 12 ಹಂತದ ಪಂದ್ಯಗಳು ನಡೆಯುತ್ತಿವೆ. ಸೂಪರ್ 12 ಹಂತದ ಮೊದಲನೇ ಪಂದ್ಯದಲ್ಲೇ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ನ್ಯೂಜಿಲೆಂಡ್ ಆಘಾತ ನೀಡಿದೆ. ನಂತರದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಇಂಗ್ಲೆಂಡ್ ಪ್ರಯಾಸದ 5 ವಿಕೆಟ್ ಗೆಲುವು ಸಾಧಿಸಿತು.
ಟಿ20 ವಿಶ್ವಕಪ್ 2022ರ ಈವರೆಗಿನ ಪಂದ್ಯಗಳಲ್ಲಿ ಹೆಚ್ಚಿನ ರನ್ ಗಳಿಸಿದ್ದು ಯಾರು ಎನ್ನುವ ಕುತೂಹಲ ಇದ್ದೇ ಇರುತ್ತದೆ. ಶ್ರೀಲಂಕಾ ತಂಡದ ಬ್ಯಾಟರ್ ಕುಸಾಲ್ ಮೆಂಡಿಸ್ ಟಿ20 ವಿಶ್ವಕಪ್ 2022ರ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 4 ಇನ್ನಿಂಗ್ಸ್‌ಗಳಲ್ಲಿ 57 ಸರಾಸರಿ ಮತ್ತು 161.32 ಸ್ಟ್ರೈಕ್‌ರೇಟ್‌ನಲ್ಲಿ 171 ರನ್ ಗಳಿಸಿದ್ದಾರೆ. ನಾಲ್ಕು ಪಂದ್ಯಗಳಲ್ಲಿ, ಅವರು ಈಗಾಗಲೇ ಎರಡು ಅರ್ಧ ಶತಕಗಳನ್ನು ಗಳಿಸಿದ್ದಾರೆ.
ಮೂರು ಇನ್ನಿಂಗ್ಸ್‌ಗಳಲ್ಲಿ 45.33 ಸರಾಸರಿ ಮತ್ತು 172.15 ಸ್ಟ್ರೈಕ್ ರೇಟ್‌ನೊಂದಿಗೆ 136 ರನ್ ಗಳಿಸಿರುವ ಜಿಂಬಾಬ್ವೆಯ ಸಿಕಂದರ್ ರಜಾ ಎರಡನೇ ಸ್ಥಾನದಲ್ಲಿದ್ದಾರೆ. ನೆದರ್ಲೆಂಡ್ಸ್‌ನ ಎಂಪಿ ಒ'ಡೌಡ್ ಮೂರು ಇನ್ನಿಂಗ್ಸ್‌ಗಳಲ್ಲಿ 64.50 ಸರಾಸರಿ ಮತ್ತು 121 ರ ಉತ್ತಮ ಸ್ಟ್ರೈಕ್ ರೇಟ್‌ನೊಂದಿಗೆ 129 ರನ್ ಗಳಿಸಿದ್ದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಮೂರು ಪಂದ್ಯಗಳಲ್ಲಿ 121 ರನ್ ಗಳಿಸಿರುವ ಸ್ಕಾಟ್ಲೆಂಡ್‌ನ ಜಾರ್ಜ್ ಮುನ್ಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 60.50 ರ ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದರು, ಆದರೆ ಸ್ಕಾಟ್ಲೆಂಡ್ ತಂಡವು ಗ್ರೂಪ್ ಹಂತದಲ್ಲಿ ಪಂದ್ಯಾವಳಿಯಿಂದ ಹೊರಗುಳಿದಿದೆ.
ಇದುವರೆಗೂ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಕೂಡ ಕುಸಾಲ್ ಮೆಂಡಿಸ್ ಮೊದಲನೇ ಸ್ಥಾನದಲ್ಲಿದ್ದಾರೆ. 4 ಪಂದ್ಯಗಳಲ್ಲಿ 8 ಸಿಕ್ಸ್ ಬಾರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಜಿಂಬಾಬ್ವೆಯ ಸಿಕಂದರ್ ರಾಜಾ 3 ಪಂದ್ಯಗಳಲ್ಲಿ 8 ಸಿಕ್ಸರ್ ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ವಿಕೆಟ್ ಪಡೆದವರು
ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಳೆದ ವಿಶ್ವಕಪ್‌ನಲ್ಲಿ ಕೂಡ ಹಸರಂಗ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು, ಅದೇ ಪ್ರದರ್ಶನವನ್ನು ಈ ವಿಶ್ವಕಪ್‌ನಲ್ಲಿ ಮುಂದುವರೆಸಿದ್ದಾರೆ.
4 ಪಂದ್ಯಗಳಲ್ಲಿ 9.78 ಸರಾಸರಿಯಲ್ಲಿ 9 ವಿಕೆಟ್ ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮತ್ತೊಬ್ಬ ಸ್ಪಿನ್ನರ್ ಮಹೀಶ್ ತೀಕ್ಷಾಣ 7 ವಿಕೆಟ್ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ನೆದರ್ಲ್ಯಾಂಡ್ಸ್‌ನ ಬಾಸ್ ಡೀ ಲೀಡೆ 7 ವಿಕೆಟ್ ಪಡೆದಿದ್ದು ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನು ಈ ಬಾರಿ ಇಂಗ್ಲೆಂಡ್‌ನ ಸ್ಯಾಮ್ ಕರನ್ 5 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ, 3.4 ಓವರ್ ಗಳಲ್ಲಿ 10 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ, ಟಿ20 ವಿಶ್ವಕಪ್ 2022ರಲ್ಲಿ 5 ಗೊಂಚಲು ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ಖ್ಯಾತಿಗೆ ಪಾತ್ರರಾದರು.