ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಐತಿಹಾಸಿ ಗೆಲುವು ಸಾಧಿಸಿದೆ. ಶುಕ್ರವಾರ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 135 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಭಾರತ ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಭಾರತದ ಪರ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಶತಕಗಳನ್ನು ಬಾರಿಸಿ ಭಾರತ ಬೃಹತ್ ರನ್ ಕಲೆ ಹಾಕಲು ನೆರವಾದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿತು. ಸಂಜು ಸ್ಯಾಮ್ಸನ್ ಅವರು 56 ಎಸೆತಗಳಲ್ಲಿ 6 ಬೌಂಡರಿ ಮತ್ತು 9 ಸಿಕ್ಸರ್ ನೆರವಿನಿಂದ ಅಜೇಯ
109 ರನ್ ಗಳಿಸಿದರೆ, ತಿಲಕ್ ವರ್ಮಾ 47 ಎಸೆತಗಳಲ್ಲಿ 9 ಬೌಂಡರಿ ಹಾಗು 10 ಸಿಕ್ಸರ್ ಸಹಾಯದಿಂದ ಅಜೇಯ 120 ರನ್ ಕಲೆ ಹಾಕಿದರು. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ 18 ಎಸೆತಗಳಲ್ಲಿ 2 ಬೌಂಡರಿ 2 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 36 ರನ್ ಬಾರಿಸಿ ಔಟಾದರು. ನಂತರ ಒಂದಾದ ಸಂಜು ಮತ್ತು ತಿಲಕ್ ಜೋಡಿ ದಕ್ಷಿಣ ಆಫ್ರಿಕಾ ಬೌಲರ್‌ಗಳ ಬೆವರಿಳಿಸಿದರು. ದಕ್ಷಿಣ ಆಫ್ರಿಕಾ ಬೌಲರ್‌ಗಳ ಪೈಕಿ ಸಿಪಾಮ್ಲಾ 1 ವಿಕೆಟ್ ಪಡೆದರು.

ಟೀಮ್ ಇಂಡಿಯಾ ನೀಡಿದ 284 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 18.2 ಓವರ್‌ಗಳಲ್ಲಿ 148 ರನ್‌ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾವನ್ನು ತವರಿನಲ್ಲಿ ಕಟ್ಟಿ ಹಾಕಿದ ಟೀಮ್ ಇಂಡಿಯಾ ಬೌಲರ್‌ಗಳು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ದಕ್ಷಿಣ ಆಫ್ರಿಕಾ ಪರ ಟ್ರಿಸ್ಟಾನ್ ಸ್ಟಬ್ಸ್ 29 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 43 ರನ್ ಗಳಿಸಿದರೆ, ಮಾರ್ಕೊ ಜಾನ್ಸೆನ್ 12 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ನೊಂದಿಗೆ ಅಜೇಯ 29 ರನ್ ಹೊಡೆದು ಗರಿಷ್ಠ ಸ್ಕೋರರ್‌ಗಳಾದರು. ಇನ್ನುಳಿದ ಯಾವುದೇ ಹರಿಣಗಳ ಪಡೆಯ ಬ್ಯಾಟರ್ ತಂಡದ ಪರ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ.
ಭಾರತದ ಸಂಘಟಿತ ಬೌಲಿಂಗ್ ಪ್ರದರ್ಶನ ತೋರಿದ ಬೌಲರ್‌ಗಳಾದ ಅರ್ಷ್‌ದೀಪ್ ಸಿಂಗ್ 3 ಕಬಳಿಸಿದರೆ, ವರುಣ್ ಚಕ್ರವರ್ತಿ ಮತ್ತು ಅಕ್ಸರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ರವಿ ಬಿಷ್ಣೋಯ್, ಹಾರ್ದಿಕ್ ಪಾಂಡ್ಯ ಮತ್ತು ರಮಣದೀಪ್ ಸಿಂಗ್ ಕೂಡ ತಲಾ ಒಂದೊಂದು ವಿಕೆಟ್ ಉರುಳಿಸಿದರು.