ಟೀಮ್ ಇಂಡಿಯಾ ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ನದೆಹಲಿಯಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಭಾರತ ಮೊದಲ ದಿನದಾಟದ ಮುಕ್ತಾಯಕ್ಕೆ ಉತ್ತಮ ಸ್ಥಿತಿಯಲ್ಲಿದೆ. ಈ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್‌ಗಳ ಪಂದ್ಯಗಳನ್ನು ಆಡಲಿದೆ. ಈ ವೇಳೆ ತಂಡಕ್ಕೆ ಭಾರತದ ಸ್ಟಾರ್ ಆಟಗಾರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತೆ ತಂಡಕ್ಕೆ ಮರಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಕಣಕ್ಕೆ ಇಳಿಯುತ್ತಿಲ್ಲ. ರೋಹಿತ್, ಶುಭಮನ್ ಗಿಲ್ ನಾಯಕತ್ವದಲ್ಲಿ ಅಖಾಡ ಪ್ರವೇಶಿಸಲಿದ್ದಾರೆ. ರೋಹಿತ್ ಈ ಪ್ರವಾಸದಲ್ಲಿ ಒಬ್ಬ ಆಟಗಾರನಾಗಿ ತಂಡ ಸೇರಲಿದ್ದಾರೆ. ಈ ಪ್ರವಾಸಕ್ಕಾಗಿ ರೋಹಿತ್ ಶರ್ಮಾ ಸಮರಾಭ್ಯಾಸ ಆರಂಭಿಸಿದ್ದಾರೆ. ಈ ಪ್ರವಾಸದ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿದೆ. ರೋಹಿತ್ ಶರ್ಮಾ ಒತ್ತಡವಿಲ್ಲದೆ, ಆಸೀಸ್ ಪ್ರವಾಸದಲ್ಲಿ ಹೇಗೆ ಆಡಲಿದ್ದಾರೆ ಎಂಬ ಪ್ರಶ್ನೆಗಳು ಎದ್ದಿವೆ.

ರೋಹಿತ್ ಶರ್ಮಾ ಈ ಪ್ರವಾಸಕ್ಕಾಗಿ ಅಬ್ಬರದ ತಯಾರಿ ನಡೆಸಿದ್ದಾರೆ. ಇವರು ಮುಂಬೈ ಶಿವಾಜಿ ಪಾರ್ಕ್‌ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಅಭ್ಯಾಸ ನಡೆಸಿದರು. ಆಲ್ ಹಾರ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಹಲವು ಸ್ಥಳಿಯ ಆಟಗಾರರು ಇದ್ದರು. ರೋಹಿತ್ ಶರ್ಮಾ ಅವರು ಟೀಮ್ ಇಂಡಿಯಾದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರ ಮೇಲ್ವಿಚಾರಣೆಯಲ್ಲಿ ಅಭ್ಯಾಸ ನಡೆಸಿದ್ದಾರೆ. ರೋಹಿತ್ ಶರ್ಮಾ ಈ ವೇಳೆ ಸಾಕಷ್ಟು ಫಿಟ್ ಆಗಿದ್ದು ಕಾಣಿಸಿಕೊಂಡಿದ್ದು, ತಮ್ಮ ನೈಜ್ಯ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಆಡಿದ್ದರು. ಆ ಬಳಿಕ ಇವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದಕ್ಕೂ ಮೊದಲು ಇವರು ಟಿ20 ವಿಶ್ವಕಪ್ ಗೆದ್ದ ಬಳಿಕ ಚುಟುಕು ಫಾರ್ಮೆಟ್‌ಗೂ ವಿದಾಯ ಹೇಳಿದ್ದರು. ಹೀಗಾಗಿ ರೋಹಿತ್ ಈಗ ಏಳು ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಲು ಮುಂಬೈನಲ್ಲಿ ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಈ ವೇಳೆ ಮುಗಿಲೆತ್ತರದ ಸಿಕ್ಸರ್ ಬಾರಿಸಿದರು. ಈ ವೇಳೆ ಇವರ ಕಾರಿಗೆ ಪೆಟ್ಟು ಬಿದ್ದಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ರೋಹಿತ್ ಶರ್ಮಾ ಟೀಮ್ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರು. ಇವರು ಎಲ್ಲ ದೇಶಗಳ ವಿರುದ್ಧ ಅಬ್ಬರಿಸುವ ಕ್ಷಮತೆಯನ್ನು ಹೊಂದಿದ್ದಾರೆ. ಅಲ್ಲದೆ ಇವರಿಗೆ ಆಸ್ಟ್ರೇಲಿಯಾ ವಿರುದ್ಧ ಆಡುವುದು ಎಂದರೆ ಅಚ್ಚು ಮೆಚ್ಚು. ಆಸ್ಟ್ರೇಲಿಯಾ ವಿರುದ್ಧ ಹಿಟ್ ಮ್ಯಾನ್ ಒಟ್ಟು 30 ಏಕದಿನ ಪಂದ್ಯಗಳಲ್ಲಿ ಬ್ಯಾಟ್ ಮಾಡಿದ್ದು, ಈ ವೇಳೆ 53.12 ರ ಸರಾಸರಿಯಲ್ಲಿ 1328 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 5 ಶತಕ ಹಾಗೂ 4 ಅರ್ಧಶತಕಗಳು ಸೇರಿವೆ. ಒಟ್ಟಾರೆ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ 57.31 ರ ಸರಾಸರಿಯಲ್ಲಿ 2407 ರನ್ ಕಲೆ ಹಾಕಿದ್ದು, 8 ಶತಕ, 9 ಅರ್ಧಶತಕ ಸಿಡಿಸಿದ್ದಾರೆ.