SRH ವಿರುದ್ಧ 55 ರನ್‌ಗಳಿಂದ ಸೋತರೂ RCB ಮೊದಲ ಕ್ವಾಲಿಫೈಯರ್ ಪ್ರವೇಶಿಸಿದ್ದು ಹೇಗೆ?
ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಗೆಲುವಿನೊಂದಿಗೆ ಲೀಗ್ ಹಂತವನ್ನು ಮುಗಿಸುವ ಆಸೆ ಕಮರಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ 55 ರನ್‌ಗಳಿಂದ ಸೋತರೂ, ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಅಲ್ಲದೆ ಮೊದಲ ಕ್ವಾಲಿಫೈಯರ್ ಆಡಲು ಅರ್ಹತೆ ಪಡೆದಿದೆ.
ಆರ್‌ಸಿಬಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ 2 ಅಂಕಗಳನ್ನು ಕಲೆ ಹಾಕಿ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 20 ಅಂಕಗಳನ್ನು ಕಲೆ ಹಾಕುವ ಆಸೆ ನುಚ್ಚುನೂರಾಗಿದೆ. ಆದರೆ ಆರ್‌ಸಿಬಿ ಲೀಗ್ ಉದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ ಫಲವಾಗಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡು ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದೆ.

ಆರ್‌ಸಿಬಿ ಮಹತ್ವದ ಪಂದ್ಯದಲ್ಲಿ ಟಾಸ್ ಸೋತಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ನಾಯಕನ ನಿರ್ಧಾರವನ್ನು ಎಸ್‌ಆರ್‌ಎಚ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ಸಮರ್ಥಿಸಿಕೊಂಡರು. ಉತ್ತಮ ಜೊತೆಯಾಟದ ಕಾಣಿಕೆ ನೀಡಿದ ಆಟಗಾರರು ಅಬ್ಬರಿಸಿದರು. ಅಭಿಷೇಕ್ ಶರ್ಮಾ 56, ಟ್ರಾವಿಸ್ ಹೆಡ್ 26, ಇಶಾನ್ ಕಿಶನ್ 79, ಹೆನ್ರಿಕ್ ಕ್ಲಾಸೆನ್ 51 ರನ್‌ಗಳ ಭರ್ಜರಿ ಆಟದ ಪರಿಣಾಮ ಸನ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 255 ರನ್ ಕಲೆ ಹಾಕಿತು.
ಭರ್ಜರಿ ಆರಂಭ
256 ರನ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ಆರಂಭದಲ್ಲಿ ಅಬ್ಬರದ ಆಟಕ್ಕೆ ಮಣೆ ಹಾಕಿತು. ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ವೆಂಕಟೇಶ್ ಅಯ್ಯರ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡರು. ಇವರು 19 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 44 ರನ್ ಬಾರಿಸಿದರು. ಅಲ್ಲದೆ ಮೊದಲ ವಿಕೆಟ್ ವಿರಾಟ್ ಕೊಹ್ಲಿ ಅವರೊಂದಿಗೆ 4.3 ಓವರ್‌ಗಳಲ್ಲಿ 60 ರನ್ ಜೊತೆಯಾಟದ ಕಾಣಿಕೆ ನೀಡಿ, ಬೃಹತ್ ಮೊತ್ತವನ್ನು ಹಿಂಬಾಲಿಸುವ ಸೂಚನೆ ನೀಡಿದರು.

ಆದರೆ ಚೇಸಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದ ವಿರಾಟ್ ಕೊಹ್ಲಿ, ಯುವ ಬೌಲರ್ ಸಕೀಬ್ ಹುಸೇನ್ ಅವರು ಎಸೆದ ಸ್ಲೋವರ್ ಎಸೆತವನ್ನು ತಪ್ಪಾಗಿ ಗ್ರಹಿಸಿ ಕವರ್‌ನಲ್ಲಿ ಕರ್ನಾಟಕದ ಆರ್.ಸ್ಮರಣ್‌ಗೆ ಕ್ಯಾಚ್ ನೀಡಿದರು. ಇವರು ಔಟ್ ಆದರೂ ದೊಡ್ಡ ಮೊತ್ತವನ್ನು ಬೆನ್ನಟ್ಟಿ ಗೆಲುವು ದಾಖಲಿಸುತ್ತೇವೆ ಎಂಬ ಧಾಟಿಯಲ್ಲೇ ಬ್ಯಾಟ್ ಮಾಡಿದ ದೇವದತ್ ಪಡಿಕ್ಕಲ್ ಆಟ 21 ರನ್‌ಗಳಿಗೆ ಕೊನೆಯಾಯಿತು.
ಇಲ್ಲಿಂದ ಆರ್‌ಸಿಬಿ ಗೆಲುವಿನ ಆಸೆಯನ್ನು ಕೊಂಚ ದೂರ ಸರಿಸಿ ತಮ್ಮ ಟಾರ್ಗೆಟ್ 166 ಎಂದು ಸೆಟ್ ಮಾಡಿಕೊಂಡ ಹಾಗೆ ಕಾಣಿಸಿತು. ಮಿಡ್ಲ್ ಓವರ್‌ಗಳಲ್ಲಿ ನಾಯಕ ರಜತ್ ಪಾಟಿದಾರ್ ಹಾಗೂ ಕೃನಾಲ್ ಪಾಂಡ್ಯ ಯಾವುದೇ ಒತ್ತಡಕ್ಕೆ ಒಳಗಾಗದೇ ಒಂದೊಂದು ರನ್ ತೆಗೆದುಕೊಳ್ಳುತ್ತಾ ಸಾಗಿದರು. ಪರಿಣಾಮ ಫಸ್ಟ್ ಟಾರ್ಗೆಟ್ 166 ರನ್ ದಾಟಲು ನೆರವಾದರು. ಈ ಗುರಿಯನ್ನು ದಾಟುತ್ತಿದ್ದಂತೆ ರಜತ್ ಪಾಟಿದಾರ್ 56 ರನ್ ಬಾರಿಸಿ ಔಟ್ ಆದರು. ಕೃನಾಲ್ ಪಾಂಡ್ಯ ಅಜೇಯ 41, ಟೀಮ್ ಡೇವಿಡ್ ಅಜೇಯ 15 ರನ್ ಬಾರಿಸಿದರು. ಆರ್‌ಸಿಬಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 200 ರನ್ ಸೇರಿಸಿ ಸೋಲು ಕಂಡಿತು.
ಸೋಲು ಕಂಡರೂ ಅಗ್ರಸ್ಥಾನ ಕಾಯ್ದುಕೊಂಡ ಆರ್‌ಸಿಬಿ
ಈ ಪಂದ್ಯದಲ್ಲಿ ಎಸ್‌ಆರ್‌ಎಚ್ 255 ರನ್‌ಗಳ ಸವಾಲಿನ ಗುರಿಯನ್ನು ಕಲೆ ಹಾಕಿತು. ಅಂಕ ಪಟ್ಟಿಯಲ್ಲಿ ಹೈದರಾಬಾದ್ ತಂಡ ಅಗ್ರ ಸ್ಥಾನಕ್ಕೆ ಬಡ್ತಿ ಪಡೆಯಲು ಆರ್‌ಸಿಬಿ ತಂಡವನ್ನು 165 ರನ್‌ಗಳ ಒಳಗೆ ಕಟ್ಟಿ ಹಾಕಬೇಕಿತ್ತು. ಆದರೆ ಈ ಅವಕಾಶವನ್ನು ಕೈ ಚೆಲ್ಲಿದ ಹೈದರಾಬಾದ್ 55 ರನ್ ಗಳಿಂದ ಗೆಲುವು ದಾಖಲಿಸಿ, ಮೂರನೇ ಸ್ಥಾನ ಭದ್ರ ಪಡಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications