ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಸಂಜೀವ್ ಗೋಯೆಂಕಾ ಮಾಲೀಕತ್ವದ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಫ್ರಾಂಚೈಸಿ ರಿಷಬ್ ಪಂತ್ ಅವರನ್ನು ತಂಡದ ನಾಯಕ ಎಂದು ಘೋಷಿಸಿದೆ. ಇದೀಗ ಪಂತ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ಎಲ್‌ಎಸ್‌ಜಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಎಲ್‌ಎಸ್‌ಜಿ ಮಾಲೀಕರಾದ ಸಂಜೀವ್ ಗೋಯೆಂಕಾ ಸ್ವತಃ ರಿಷಬ್ ಪಂತ್ ಹೆಸರನ್ನು ತಂಡದ ನಾಯಕನನ್ನಾಗಿ ಘೋಷಿಸಿದರು.
ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಲಕ್ನೋ ನಾಯಕ ಕೆಎಲ್ ರಾಹುಲ್ ಅವರನ್ನು ಬಿಡುಗಡೆಗೊಳಿಸಿತ್ತು. ನಂತರ ಮೆಗಾ ಹರಾಜಿನಲ್ಲಿ ಸಂಜೀವ್ ಗೋಯೆಂಕಾ 27 ಕೋಟಿ ರೂ.ಗೆ ರಿಷಬ್ ಪಂತ್ ಅವರನ್ನು ಬಿಡ್ ಮಾಡಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಪಂತ್ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಇದೀಗ ಗೋಯೆಂಕಾ ಅವರಿಗೆ ತಂಡದ ಕಮಾಂಡ್ ಕೂಡ ಹಸ್ತಾಂತರಿಸಿದ್ದಾರೆ.

ಈ ವೇಳೆ ಸಂದರ್ಶನವೊಂದರಲ್ಲಿ ಮಾತಾನಡಿದ ರಿಷಬ್ ಪಂತ್ ನಾಯಕತ್ವದ ತಂತ್ರಗಳನ್ನು ಎಲ್ಲಿಂದ ಕಲಿತಿದ್ದೇನೆ ಎಂದು ಹೇಳಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಪ್ರಸ್ತುತ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಂದ ಕಲಿತುಕೊಂಡಿರುವ ಹಲವು ವಿಚಾರಗಳ ಬಗ್ಗೆ ಅವರು ತಿಳಿಸಿದ್ದಾರೆ.
ಪ್ರಕ್ರಿಯೆಯನ್ನು ಅನುಸರಿಸಿದರೆ ಫಲಿತಾಂಶಗಳು ತಾನಾಗಿಯೇ ಬರುತ್ತವೆ ಎಂದು ಮಹಿ ಭಾಯ್ ಹೇಳಿದ್ದರು. ಅವರ ಮಾತುಗಳು ಬಹಳ ಫೇಮಸ್. ನಾನು ಯಾವಾಗಲೂ ಅವರ ಈ ಮಾತನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತೇನೆ. ನನ್ನ ಕೆಲಸದ ಮೇಲೆ ಮಾತ್ರ ಗಮನಹರಿಸುತ್ತೇನೆ ಎಂದು ಎಂಎಸ್ ಧೋನಿ ಅವರಿಂದ ತಾವು ಕಲಿತ್ತಿರುವ ನಾಯಕತ್ವದ ಗುಣಗಳನ್ನು ರಿಷಬ್ ಪಂತ್ ಹೇಳಿದ್ದಾರೆ.
ನನ್ನ ಎಲ್ಲಾ ನಾಯಕರಿಂದ ನಾನು ಸಾಕಷ್ಟು ಕಲಿತಿದ್ದೇನೆ. ರೋಹಿತ್ ಶರ್ಮಾ ಅವರಿಂದ ನೀವು ಆಟಗಾರನನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ಕಲಿಯುತ್ತೀರಿ. ಇದು ಈ ರೀತಿಯದ್ದು. ಅವರ ನಾಯಕತ್ವದಿಂದ ನಾನು ಕಲಿತದ್ದನ್ನು ನಾಯಕನಾಗಿ ಮಾಡಲು ಬಯಸುತ್ತೇನೆ ಎಂದು ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ರಿಷಬ್ ಪಂತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐಪಿಎಲ್ 2024ರಲ್ಲಿ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕತ್ವ ವಹಿಸಿದ್ದರು. ಇದರೊಂದಿಗೆ ಭಾರತ ಕ್ರಿಕೆಟ್ ತಂಡದ ನಾಯಕತ್ವವನ್ನೂ ವಹಿಸಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ನಾಯಕನ್ನಾಗಿ ಮುನ್ನಡೆಸಿದ್ದರು . ಭಾರತದ ಭವಿಷ್ಯದ ನಾಯಕನಾಗಿಯೂ ಅವರನ್ನು ನೋಡಲಾಗುತ್ತಿದೆ. ಆದರೆ ಅವರ ಫಿಟ್ನೆಸ್ ಮೇಲೆ ಹಲವು ಪ್ರಶ್ನೆಗಳಿವೆ.