ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ ನ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದೆ. ಗೆಲ್ಲುವ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಸೋತಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 160 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ 19 ಓವರ್‌ಗಳಲ್ಲಿ 102 ರನ್‌ಗಳಿಗೆ ಆಲೌಟಾಯಿತು. ಈ ಪಂದ್ಯವನ್ನು ನ್ಯೂಜಿಲೆಂಡ್ 58 ರನ್‌ಗಳಿಂದ ಗೆದ್ದುಕೊಂಡಿತು. ಈ ಸೋಲಿನ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಸೆಮಿಫೈನಲ್ ಸ್ಪರ್ಧೆ ರೋಚಕವಾಗಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಲಿದೆ.

ನ್ಯೂಜಿಲೆಂಡ್ ವಿರುದ್ಧದ ಸೋಲಿನ ನಂತರ ಹರ್ಮನ್‌ಪ್ರೀತ್ ಪಡೆ ಎ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ. ಎ ಗುಂಪಿನಲ್ಲಿ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದೆ. ಆ ಬಳಿಕ ಪಾಕಿಸ್ತಾನ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಲಾ 2 ಅಂಕ ಹೊಂದಿವೆ. ಶ್ರೀಲಂಕಾ ಮತ್ತು ಭಾರತ ತಂಡಗಳು ತಲಾ ಒಂದೊಂದು ಸೋಲು ಕಂಡಿವೆ. ಕ್ರಮವಾಗಿ ಎರಡು ತಂಡಗಳು ನಾಲ್ಕು ಹಾಗು ಐದನೇ ಸ್ಥಾನದಲ್ಲಿವೆ.
ಟಿ20 ವಿಶ್ವಕಪ್‌ನ ಪ್ರತಿ ಗುಂಪಿನಿಂದ ಆಗ್ರ 2 ತಂಡಗಳು ಮಾತ್ರ ಸೆಮಿಫೈನಲ್ ಕಡೆಗೆ ಮುನ್ನಡೆಯಬಹುದು. ಭಾರತಕ್ಕೂ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವಿದೆ. ಆದರೆ ಟೂರ್ನಿಯ ಕೊನೆಯ ನಾಲ್ಕರಲ್ಲಿ ಸ್ಥಾನ ಪಡೆಯುವುದು ಅವರಿಗೆ ಕಷ್ಟದ ಕೆಲಸವಾಗಿದೆ.
ಭಾರತ ಸೆಮಿಫೈನಲ್ ತಲುಪಬೇಕಾದರೆ ಗುಂಪು ಹಂತದ ಕೊನೆಯಲ್ಲಿ ಗರಿಷ್ಠ ಆರು ಅಂಕಗಳನ್ನು ಹೊಂದಿರಬೇಕು. ಭಾರತಕ್ಕೆ ಗುಂಪು ಹಂತದಲ್ಲಿ ಇನ್ನೂ ಮೂರು ಪಂದ್ಯಗಳನ್ನು ಬಾಕಿ ಉಳಿದಿವೆ. ಹೀಗಾಗಿ ಭಾರತ ತನ್ನ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದೆ
ಭಾರತ ತಂಡವು ಮುಂದಿನ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 6 ರಂದು ಆಡಲಿದೆ. ಇದಾದ ನಂತರ ಶ್ರೀಲಂಕಾ ವಿರುದ್ಧ ಅಕ್ಟೋಬರ್ 9 ರಂದು ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 13 ರಂದು ಕೊನೆಯ ಗುಂಪು ಹಂತದ ಪಂದ್ಯವನ್ನು ಆಡಲಿದೆ. ಒಂದು ವೇಳೆ ಟೀಮ್ ಇಂಡಿಯಾ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದರೆ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದೆ. ಆದರೆ ಈ ಎಲ್ಲಾ ಪಂದ್ಯಗಳನ್ನು ಭಾರತ ದೊಡ್ಡ ಅಂತರದಿಂದ ಗೆಲ್ಲಬೇಕು.
ನ್ಯೂಜಿಲೆಂಡ್ ಸೋಲಿನ ನಂತರ ಭಾರತದ ಪ್ರಸ್ತುತ ನಿವ್ವಳ ರನ್ ರೇಟ್ -2.900. ಇದರರ್ಥ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯಗಳನ್ನು ಹೆಚ್ಚಿನ ಅಂತರದಿಂದ ಗೆಲ್ಲಬೇಕಾಗಿದೆ. ಮೂರು ಪಂದ್ಯಗಳನ್ನು ಗೆದ್ದು, ಕಡಿಮೆ ನೆಟ್ ರನ್ ರೇಟ್ ಹೊಂದಿದ್ದರರೆ, ಭಾರತ ಹೊರಗುಳಿಯಬಹುದು. ಅದಕ್ಕಾಗಿ ಉತ್ತಮ ರನ್‌ರೇಟ್‌ನಲ್ಲಿ ಭಾರತ ಗೆಲ್ಲುವ ನಿರೀಕ್ಷೆಯಲ್ಲಿದೆ.