ಮುಂಬರುವ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಸ್ಟಾರ್ ಆಟಗಾರರಾದ ಭಾರತದ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಬಾಬರ್ ಅಜಂ ತಮ್ಮ ತಂಡಗಳಿಗೆ ಪ್ರಮುಖ ಬ್ಯಾಟರ್‌ಗಳಾಗಿದ್ದಾರೆ.
ಆಗಸ್ಟ್ 30ರಿಂದ ಸೆಪ್ಟೆಂಬರ್ 17ರವರೆಗೆ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಏಕದಿನ ಸ್ವರೂಪದ ಪಂದ್ಯಾಳಿಯನ್ನು ಆಡಲಾಗುತ್ತದೆ.
ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಪೂರ್ವಸಿದ್ಧತಾ ಪಂದ್ಯಾವಳಿಯಾಗಿ ಏಷ್ಯಾ ಕಪ್ ಅನ್ನು ಏಷ್ಯಾದ ಅಗ್ರ ತಂಡಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.

ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಂ ಇಬ್ಬರೂ ಅದ್ಭುತ ಏಕದಿನ ದಾಖಲೆಗಳನ್ನು ಹೊಂದಿದ್ದಾರೆ ಮತ್ತು 2023 ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ದೊಡ್ಡ ಪ್ರಭಾವ ಬೀರಲು ಎದುರು ನೋಡುತ್ತಿದ್ದಾರೆ.
ವಿರಾಟ್ ಕೊಹ್ಲಿ ಬಗ್ಗೆ ಹೇಳುವುದಾದರೆ, 275 ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, 57.32ರ ಸರಾಸರಿಯಲ್ಲಿ 12,898 ರನ್ ಗಳಿಸಿದ್ದಾರೆ. ಇದೇ ವೇಳೆ 46 ಶತಕಗಳು ಮತ್ತು 65 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಮತ್ತೊಂದೆಡೆ, ಪಾಕಿಸ್ತಾನದ ನಾಯಕ ಬಾಬರ್ ಅಜಂ 102 ಏಕದಿನ ಪಂದ್ಯಗಳನ್ನು ಆಡಿದ್ದು, 58.43ರ ಸರಾಸರಿಯಲ್ಲಿ 5,142 ರನ್ ಗಳಿಸಿದ್ದಾರೆ. ಇದೇ ವೇಳೆ 18 ಶತಕಗಳು ಮತ್ತು 27 ಅರ್ಧಶತಕಗಳನ್ನು ಸಿಡಿಸಿದ್ದಾರೆ.

2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಶ್ರೀಲಂಕಾ ಒಂಬತ್ತು ಪಂದ್ಯಗಳನ್ನು ಮತ್ತು ಪಾಕಿಸ್ತಾನ ನಾಲ್ಕು ಪಂದ್ಯಗಳನ್ನು ಆಯೋಜಿಸುತ್ತದೆ. ಫೈನಲ್ ಸೇರಿದಂತೆ ಆರು ಪಂದ್ಯಗಳು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿವೆ. ಇದೇ ವೇಳೆ ಈವರೆಗೆ ಶ್ರೀಲಂಕಾದಲ್ಲಿ ಬಾಬರ್ ಅಜಂ ಮತ್ತು ವಿರಾಟ್ ಕೊಹ್ಲಿಯ ಏಕದಿನ ಅಂಕಿಅಂಶಗಳ ದಾಖಲೆ ಇಲ್ಲಿದೆ.
ವಿರಾಟ್ ಕೊಹ್ಲಿ ಶ್ರೀಲಂಕಾದಲ್ಲಿ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಪ್ರಭಾವಶಾಲಿ ದಾಖಲೆಯನ್ನು ಹೊಂದಿದ್ದಾರೆ. ಆದರೆ ಇದು ಅವರ ವೃತ್ತಿಜೀವನದ ಅಂಕಿಅಂಶಗಳಿಗಿಂತ ಕಡಿಮೆಯಾಗಿದೆ. ದ್ವೀಪ ರಾಷ್ಟ್ರದಲ್ಲಿ 23 ಏಕದಿನ ಪಂದ್ಯಗಳನ್ನು ಆಡಿದ್ದು, ನಾಲ್ಕು ಶತಕಗಳೊಂದಿಗೆ 47.31ರ ಸರಾಸರಿಯಲ್ಲಿ 899 ರನ್‌ಗಳನ್ನು ಗಳಿಸಿದ್ದಾರೆ.
ಶ್ರೀಲಂಕಾದಲ್ಲಿ ಅವರ 20 ಪಂದ್ಯಗಳು ಆತಿಥೇಯ ರಾಷ್ಟ್ರದ ವಿರುದ್ಧವಾಗಿವೆ. ಇದರಲ್ಲಿ ಅವರು 53.87ರ ಸರಾಸರಿಯಲ್ಲಿ 862 ರನ್ ಗಳಿಸಿದ್ದಾರೆ. ಅವರ ಎಲ್ಲಾ ನಾಲ್ಕು ಶತಕಗಳು ಆತಿಥೇಯ ಶ್ರೀಲಂಕಾ ವಿರುದ್ಧ ಬಂದಿವೆ.
ವಿರಾಟ್ ಕೊಹ್ಲಿ 2012ರ ಜುಲೈನಲ್ಲಿ 113 ಎಸೆತಗಳಲ್ಲಿ 106 ರನ್, ಅದೇ ವರ್ಷ 119 ಎಸೆತಗಳಲ್ಲಿ ಅಜೇಯ 128 ರನ್ ಗಳಿಸಿದರು. ಇನ್ನು 2017ರಲ್ಲಿ 96 ಎಸೆತಗಳಲ್ಲಿ 131 ರನ್, ಅದೇ ವರ್ಷ 116 ಎಸೆತಗಳಲ್ಲಿ ಅಜೇಯ 110 ರನ್ ಬಾರಿಸಿದ ಶತಕದ ಉದಾಹರಣೆಗಳಾಗಿವೆ.

ವಿರಾಟ್ ಕೊಹ್ಲಿಗೆ ವಿರುದ್ಧವಾಗಿ ಬಾಬರ್ ಅಜಂ ಶ್ರೀಲಂಕಾದಲ್ಲಿ ಕೇವಲ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ನಾಲ್ಕು ಪಂದ್ಯಗಳಲ್ಲಿ ಅವರು 22.50ರ ಸರಾಸರಿಯಲ್ಲಿ 90 ರನ್ ಗಳಿಸಿದ್ದಾರೆ.
ಜುಲೈ 2015ರಲ್ಲಿ ದಂಬುಲ್ಲಾದಲ್ಲಿ ಆಡಿದ ಶ್ರೀಲಂಕಾ ವಿರುದ್ಧದ ಅವರ ಮೊದಲ ಪಂದ್ಯದಲ್ಲಿ ಬಾಬರ್ ಅಜಂ 30 ಎಸೆತಗಳಲ್ಲಿ 25 ರನ್ ಗಳಿಸಿದರು. ಎರಡನೇ ಪಂದ್ಯದಲ್ಲಿ 19 ಎಸೆತಗಳಲ್ಲಿ 12 ರನ್ ಗಳಿಸಿದರು.
ಪಾಕಿಸ್ತಾನ ನಾಯಕ ಬಾಬರ್ ಅಜಂ ಶ್ರೀಲಂಕಾದಲ್ಲಿ ತಮ್ಮ ಮೂರನೇ ಏಕದಿನ ಪಂದ್ಯ ಆಡಿದ್ದು ಸದ್ಯ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧ ಸರಣಿಯಲ್ಲಿ. ಮೊದಲ ಏಕದಿನ ಪಂದ್ಯದಲ್ಲಿ ಮೂರು ಎಸೆತಗಳಲ್ಲಿ ಡಕ್‌ಗೆ ಔಟಾದರು. ಅದೇ ಸ್ಥಳದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಬಾಬರ್ ಅಜಂ ಉತ್ತಮ ಆಟವಾಡಿ 66 ಎಸೆತಗಳಲ್ಲಿ 53 ರನ್ ಗಳಿಸಿದರು.
ಶ್ರೀಲಂಕಾದಲ್ಲಿ ಹೆಚ್ಚಿನ ಏಕದಿನ ಪಂದ್ಯಗಳನ್ನು ಆಡದಿರುವ ಬಾಬರ್ ಅಜಂ ಏಷ್ಯಾ ಕಪ್ ಪಂದ್ಯಾವಳಿ ವೇಳೆ ತಮ್ಮ ತಂಡಕ್ಕೆ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದಾರೆ.