ಈ ಬಾರಿಯ ಐಪಿಎಲ್‌ನಲ್ಲಿ ಅದೆಷ್ಟೋ ಆಟಗಾರರು ಅಭಿಮಾನಿಗಳ ಚಿತ್ತ ಕದ್ದಿದ್ದಾರೆ. ಈ ಸಾಲಿನಲ್ಲಿ ಎದ್ದು ಕಾಣುವ ಆಟಗಾರ ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ. ಇವರು ತಮ್ಮ 14ನೇ ವರ್ಷದಲ್ಲಿ ಐಪಿಎಲ್‌ನಲ್ಲಿ ಶತಕ ಬಾರಿಸಿ ಇತಿಹಾಸ ನಿರ್ಮಿಸಿದರು. ಈ ಮೂಲಕ ಕ್ರಿಕೆಟ್ ಲೋಕದಲ್ಲಿ ಸಂಚಲನವನ್ನು ಮೂಡಿಸಿದರು. ಹಾಗಿದ್ರೆ ಯುವ ಆಟಗಾರ ಐಪಿಎಲ್‌ನಲ್ಲಿ ಗಳಿಸಿದ್ದು ಎಷ್ಟು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ರಾಜಸ್ಥಾನ ರಾಯಲ್ಸ್ ಈ ಬಾರಿಯ ಐಪಿಎಲ್‌ನಲ್ಲಿ ನಿರಾಶಾದಾಯಕ ಪ್ರದರ್ಶನವನ್ನು ನೀಡಿದೆ. ಆದರೆ ರಾಯಲ್ಸ್ ತಂಡದ ಭರವಸೆಯ ಆಟಗಾರನನ್ನು ಹುಡುಕಿಕೊಂಡಿದೆ. ಈ ಮೂಲಕ ಯುವ ಆಟಗಾರರ ಮೇಲೆ ತಮ್ಮ ಕಣ್ಣು ಇದ್ದೇ ಇರುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ವೈಭವ್ ಸೂರ್ಯವಂಶಿ ಕಳೆದ ವರ್ಷದ ರಣಜಿ ಟ್ರೋಫಿಯಲ್ಲಿ ಪದಾರ್ಪಣೆ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಇವರಲ್ಲಿನ ಕ್ಷಮತೆಯನ್ನು ಗುರುತಿಸಿದ್ದ ರಾಜಸ್ಥಾನ ರಾಯಲ್ಸ್ ತಂಡ ಇವರಿಗೆ ಭಾರೀ ಹಣವನ್ನು ನೀಡಿ ಹರಾಜಿನಲ್ಲಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತು.

ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ 1.1 ಕೋಟಿ ರೂ.ನೀಡಿ ವೈಭವ್ ಸೂರ್ಯವಂಶಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಇವರು ಈಗಾಗಲೇ ಭಾರತದ ಪರ ಅಂಡರ್ 19 ಪಂದ್ಯಗಳಲ್ಲಿ ಮಿಂಚಿದ್ದರು. ಇವರಲ್ಲಿನ ಪ್ರತಿಭೆಯನ್ನು ಗುರುತಿಸಿದ್ದ ರಾಜಸ್ಥಾನ ರಾಯಲ್ಸ್ ಇವರಿಗೆ ತಂಡದಲ್ಲಿ ಸ್ಥಾನ ನೀಡಿತು. ವೈಭವ್ ಸಹ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಬಾರಿಸಿದ ಪ್ರತಿ ರನ್‌ಗೆ ಪಡೆದ ಸಂಭಾವನೆ ಎಷ್ಟು ಎಂಬ ಬಗ್ಗೆ ವರದಿ ಇಲ್ಲಿದೆ.
ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದರು. ಈ ಮೂಲಕ ಕ್ರಿಕೆಟ್ ವಲಯದಲ್ಲಿ ಸಂಚಲವನ್ನು ಮೂಡಿಸಿದ್ದರು. ಇದಾದ ಬಳಿಕವೂ ವೈಭವ್ ತಮ್ಮ ಸ್ಥಿರ ಬ್ಯಾಟಿಂಗ್‌ನಿಂದಲೇ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇವರು ಆಡಿದ 7 ಪಂದ್ಯಗಳಲ್ಲಿ 36ರ ಸರಾಸರಿಯಲ್ಲಿ 252 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 206.55 ಆಗಿದೆ. 18ನೇ ಆವೃತ್ತಿಯಲ್ಲಿ ವೈಭವ್ ಸುರ್ಯವಂಶಿ 18 ಬೌಂಡರಿ, 24 ಸಿಕ್ಸರ್ ಸಿಡಿಸಿದ್ದಾರೆ.
ಐಪಿಎಲ್ ಒಂದು ಪಂದ್ಯವನ್ನು ಆಡಿದ ಆಟಗಾರನಿಗೆ ಐಪಿಎಲ್ ನಿಯಮಗಳ ಪ್ರಕಾರ 7.5 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. ಪಂದ್ಯದ ಶುಲ್ಕದಿಂದ ವೈಭವ್ 52.5 ಲಕ್ಷ ಜೇಬಿಗೆ ಇಳಿಸಿಕೊಂಡಿದ್ದಾರೆ. ಇದಲ್ಲದೆ ಪಂದ್ಯ ಶ್ರೇಷ್ಠ, ಬೆಸ್ಟ್ ಸ್ಟ್ರೈಕರ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಅದಕ್ಕಾಗಿ ಅವರಿಗೆ ತಲಾ ಒಂದು ಲಕ್ಷ ರೂಪಾಯಿ ಪಡೆದಿದ್ದಾರೆ. ಒಟ್ಟಾರೆ ಐಪಿಎಲ್‌ನಿಂದ ವೈಭವ್ 1,64,50,000 ರೂಪಾಯಿ ಪಡೆದಿದ್ದಾರೆ. ವೈಭವ್ ಪ್ರತಿ ರನ್‌ಗೆ ಸುಮಾರು 43,650 ರೂಪಾಯಿಗಳನ್ನು ಪಡೆದಿದ್ದಾರೆ.