ವಿರಾಟ್ ಕೊಹ್ಲಿ ಅವರ ಜಾಣ್ಮೆಯ ಬ್ಯಾಟಿಂಗ್ ಮತ್ತು ರೋಹಿತ್ ಶರ್ಮಾ ಅವರ ಸ್ಫೂರ್ತಿದಾಯಕ ನಾಯಕತ್ವದಿಂದ ಐಸಿಸಿ ಪ್ರಶಸ್ತಿಗಾಗಿ ಭಾರತ ಕ್ರಿಕೆಟ್ ತಂಡದ 11 ವರ್ಷಗಳ ಕಾಯುವಿಕೆ ಕೊನೆಗೊಂಡಿತು. 2007ರ ನಂತರ ಟಿ20 ವಿಶ್ವಕಪ್ ಮತ್ತು 2011ರ ನಂತರ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಿತು.
ಜೂನ್ 29ರ ಶನಿವಾರದಂದು ಸ್ಟಾರ್ ಸ್ಟಡ್ ಟೀಮ್ ಇಂಡಿಯಾ ತನ್ನ ಎರಡನೇ ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಲು ರೋಚಕ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳಿಂದ ಸೋಲಿಸಿತು.

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ರೋಹಿತ್ ಶರ್ಮಾ ನಂತರ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 176 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 8 ವಿಕೆಟ್‌ಗೆ 169 ರನ್‌ಗಳಿಗೆ 8ಕ್ಕೆ ಸೀಮಿತವಾಯಿತು.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2024ರ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ 11.25 ಮಿಲಿಯನ್ ಯುಎಸ್ ಡಾಲರ್‌ನ ದಾಖಲೆಯ ಬಹುಮಾನ ಮೊತ್ತವನ್ನು ಘೋಷಿಸಿತ್ತು.
ಟಿ20 ವಿಶ್ವಕಪ್ ವಿಜೇತ ಭಾರತಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?
2024ರ ಟಿ20 ವಿಶ್ವಕಪ್ ಚಾಂಪಿಯನ್ ಭಾರತ ತಂಡವು, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಂದ 2.45 ಮಿಲಿಯನ್ ಯುಎಸ್ ಡಾಲರ್ (ಅಂದಾಜು 20.42 ಕೋಟಿ ರೂಪಾಯಿ) ಮೊತ್ತವನ್ನು ಜೇಬಿಗಿಳಿಸಿದೆ.

2024ರ ಟಿ20 ವಿಶ್ವಕಪ್ ರನ್ನರ್-ಅಪ್ ದಕ್ಷಿಣ ಆಫ್ರಿಕಾಗೆ ಸಿಕ್ಕ ಬಹುಮಾನ ಮೊತ್ತ
ಭಾರತ ವಿರುದ್ಧದ ಫೈನಲ್ ಹಣಾಹಣಿಯಲ್ಲಿ ಕಡಿಮೆ ಅಂತರದಿಂದ ಸೋತ ದಕ್ಷಿಣ ಆಫ್ರಿಕಾ, 1.28 ಮಿಲಿಯನ್ ಯುಎಸ್ ಡಾಲರ್ (ಅಂದಾಜು 10.67 ಕೋಟಿ ರೂಪಾಯಿ) ಮೊತ್ತವನ್ನು ಪಡೆದುಕೊಂಡಿತು.
ಸೆಮಿಫೈನಲ್‌ನಲ್ಲಿ ಸೋತ ಇಂಗ್ಲೆಂಡ್, ಅಫ್ಘಾನಿಸ್ತಾನಕ್ಕೆ ಎಷ್ಟು ಬಹುಮಾನ ಮೊತ್ತ?
ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಕ್ರಮವಾಗಿ ಸೆಮಿಫೈನಲ್‌ನಲ್ಲಿ ಸೋತ ನಂತರ, 2024ರ ಟಿ20 ವಿಶ್ವಕಪ್ ಪಂದ್ಯಾವಳಿಯಿಂದ ಹೊರಬಿದ್ದ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳೆರಡು ತಲಾ 787,500 ಯುಎಸ್ ಡಾಲರ್ (ಅಂದಾಜು 6.56 ಕೋಟಿ ರೂಪಾಯಿ) ಪಡೆದುಕೊಂಡವು.
ಸೂಪರ್ 8ರಲ್ಲಿ ಸೋತ ತಂಡಗಳು - 382,500 ಯುಎಸ್ ಡಾಲರ್ - 3,19,50,750 ರೂಪಾಯಿ
9ರಿಂದ 12ನೇ ಸ್ಥಾನ - 247,500 ಯುಎಸ್ ಡಾಲರ್ - 2,06,90,250 ರೂಪಾಯಿ
13ರಿಂದ 20ನೇ ಸ್ಥಾನ - 225,000 ಯುಎಸ್ ಡಾಲರ್ - 1,87,65,000 ರೂಪಾಯಿ
ಹೆನ್ರಿಚ್ ಕ್ಲಾಸೆನ್ 27 ಎಸೆತಗಳಲ್ಲಿ 52 ರನ್ ಗಳಿಸಿ ಭಾರತೀಯ ಸ್ಪಿನ್ನರ್‌ಗಳ ವಿರುದ್ಧ ಅಬ್ಬರಿಸಿದರು. ಈ ವೇಳೆ ರೋಹಿತ್ ಶರ್ಮಾ ನಾಯಕತ್ವದ ತಂಡ ಮತ್ತೊಂದು ವಿಶ್ವಕಪ್ ಫೈನಲ್‌ನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಗುತ್ತದೆ ಎಂದು ತೋರುತ್ತಿತ್ತು. ಆದರೆ ವೇಗದ ಬೌಲರ್‌ಗಳು ತಂಡವನ್ನು ಆಟಕ್ಕೆ ಮರಳಿ ತಂದರು.
ಕಳೆದ ಆರು ತಿಂಗಳಿನಿಂದ ತಮ್ಮದೇ ಅಭಿಮಾನಿಗಳಿಂದ ಹೆಚ್ಚು ಅಪಮಾನಕ್ಕೊಳಗಾಗಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಅಂತಿಮವಾಗಿ ಫೈನಲ್ ಪಂದ್ಯದ ಹೀರೋ ಎನಿಸಿದರು.
2013ರ ಚಾಂಪಿಯನ್ಸ್ ಟ್ರೋಫಿ ನಂತರ, ಭಾರತದ ಮೊದಲ ಐಸಿಸಿ ಟ್ರೋಫಿ ಮತ್ತು ಐಪಿಎಲ್ ನಂತರದ ಯುಗದಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಕಿರೀಟವನ್ನು ಖಚಿತಪಡಿಸಿಕೊಳ್ಳಲು ಅಂತಿಮ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ 16 ರನ್‌ಗಳನ್ನು ರಕ್ಷಿಸಿದರು.
ಭಾರತ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಲ್ಲಿ ಸಮಾಧಾನ ಮತ್ತು ಸಂಭ್ರಮದ ಭಾವನೆ ಸ್ಪಷ್ಟವಾಗಿ ಕಾಣುತ್ತಿತ್ತು. ಅಂತಿಮ ಫಲಿತಾಂಶವು ಈ ಇಬ್ಬರು ದಿಗ್ಗಜರು ಸೇರಿದಂತೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ ಪರಿಪೂರ್ಣ ವಿದಾಯ ಕೂಡ ಆಗಿತ್ತು.
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 76 ರನ್ ಮತ್ತು ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 47 ರನ್‌ಗಳ ಅವರ ಜಂಟಿ ಪ್ರಯತ್ನದಿಂದಾಗಿ ಭಾರತವು ಟಿ20 ವಿಶ್ವಕಪ್ ಫೈನಲ್‌ನಲ್ಲಿ ಈವರೆಗಿನ ಅತ್ಯಧಿಕ ಮೊತ್ತವನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿತು.