ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಟೀಮ್ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್, ಕಿವೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ. ಅಭ್ಯಾಸದ ವೇಳೆ ಇವರು ಗಾಯಕ್ಕೆ ತುತ್ತಾಗಿದ್ದರಿಂದ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ. ಇವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದಾರೆ.
ರಿಷಭ್ ಪಂತ್ ಅಭ್ಯಾಸ ಮಾಡುವಾಗ ಬೆನ್ನಿನ ಮೇಲ್ಭಾಗದಲ್ಲಿ ಗಾಯ ಕಾಣಿಸಿಕೊಂಡಿತು. ಥ್ರೋಡೌನ್ ತಜ್ಞರು ಎಸೆದ ಚೆಂಡು ಅವರಿಗೆ ಬಡಿಯಿತು. ಬಳಿಕ ಪಂತ್ ಅವರಿಗೆ ಚಿಕಿತ್ಸೆ ನೀಡಲಾಯಿತು. ಆದರೆ ಫಲಿಸಲಿಲ್ಲ. ಅವರನ್ನು ಮೈದಾನದಿಂದ ಹೊರಗಡೆಗೆ ಕರೆದುಕೊಂಡು ಹೋಗಲಾಯಿತು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಪಂತ್, ಬಲಭಾಗದಲ್ಲಿ ಸೆಳೆತದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಇವರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ.

ರಿಷಭ್ ಪಂತ್ ಅವರಿಗೆ ಆದ ಗಾಯದ ಬಗ್ಗೆ ಎಂಆರ್ಐ ಸ್ಕ್ಯಾನ್ ನಡೆಸಲಾಯಿತು. ಅಲ್ಲದೆ ವೈದ್ಯರನ್ನು ಆನ್‌ಲೈನ್‌ನಲ್ಲಿ ಸಂಪರ್ಕಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇವರು ಕೆಲವು ದಿನಗಳ ವಿಶ್ರಾಂತಿಯ ಬಳಿಕ ಬಿಸಿಸಿಐ ಸೆಂಟ್ರಲ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ವರದಿ ಮಾಡಿಕೊಳ್ಳಲಿದ್ದಾರೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಈಗ ಬದಲಿ ಆಟಗಾರನ ಹುಡುಕಾಟದಲ್ಲಿದೆ.
ರಿಷಭ್ ಪಂತ್ ಗಾಯಕ್ಕೆ ತುತ್ತಾಗಿರುವುದು ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಮುನ್ನ ದೊಡ್ಡ ಭಾರತ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ. 24 ವರ್ಷದ ರಿಷಭ್ ಪಂತ್ 2024ರಲ್ಲಿ ಕೊನೆಯ ಬಾರಿಗೆ ಭಾರತದ ಪರ ಏಕದಿನ ಕ್ರಿಕೆಟ್ ಆಡಿದ್ದರು. ಇವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಸ್ಥಾನ ಪಡೆದಿದ್ದರು. ಆದರೆ ಇವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಲಭಿಸಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ವೇಳೆ ಇವರಿಗೆ ಅವಕಾಶ ಸಿಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈ ಸರಣಿಯಲ್ಲೂ ಅವರಿಗೆ ನಿರಾಸೆ ಕಾದಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ವೇಳೆ ಶ್ರೇಯಸ್ ಅಯ್ಯರ್ ಬದಲಿಗೆ ರುತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ನೀಡಲಾಯಿತು. ಈ ವೇಳೆ ಪಂತ್ ಬೆಂಚ್ ಕಾಯಬೇಕಾಯಿತು. ಪಂತ್ ಸದ್ಯ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದಾರೆ. ಪಂತ್ ಏಕದಿನ ಹಾಗೂ ಟಿ20 ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಹೆಣಗಾಟ ನಡೆಸಿದ್ದಾರೆ. ಇವರು ಭಾರತದ ಪರ 31 ಏಕದಿನ ಪಂದ್ಯಗಳನ್ನು ಆಡಿದ್ದು 871 ರನ್ ಕಲೆ ಹಾಕಿದ್ದಾರೆ.