
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿದೆ. ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ಎರಡು ತಂಡಗಳು ಕೂಡ ತಮ್ಮ ಕೊನೆಯ ಸರಣಿಯನ್ನು ವಿದೇಶದಲ್ಲಿ ಗೆದ್ದು ಹುಮ್ಮಸ್ಸಿನಿಂದ ಈ ಸರಣಿಗೆ ಎದುರು ನೋಡುತ್ತಿದೆ. ಆದರೆ ಈ ಸರಣಿಯಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಒಂದು ಪಂದ್ಯವನ್ನು ಕೂಡ ಗೆಲ್ಲಲಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಇಂಗ್ಲೆಂಡ ಕ್ರಿಕೆಟ್ ತಂಡ ಇತ್ತೀಚೆಗೆ ಶ್ರೀಲಂಕಾ ಪ್ರವಾಸವನ್ನು ಮುಗಿಸಿ ಭಾರತಕ್ಕೆ ಬಂದಿಳಿದಿದೆ. ಆ ಪ್ರವಾಸದಲ್ಲಿ ಇಂಗ್ಲೆಂಡ್ ಶ್ರೀಲಂಕಾಗೆ 2-0 ಅಂತರದಿಂದ ಸೋಲುಣಿಸಿತ್ತು. ಆದರೆ ಜೋ ರೂಟ್ ಬಳಗಕ್ಕೆ ಭಾರತದಲ್ಲಿ ನಾಲ್ಕು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆಲ್ಲುವುದು ಕೂಡ ಕಠಿಣವಾಗಿರಲಿದೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್‌ನ ಗೇಮ್‌ಪ್ಲಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಗೌತಮ್ ಗಂಭೀರ್ "ಇಂಗ್ಲಂಡ್ ಕ್ರಿಕೆಟ್ ತಂಡ ಉತ್ತಮ ಸ್ಪಿನ್ ಬೌಲಿಂಗ್ ವಿಭಾಗವನ್ನು ಹೊಂದಿದ್ದರೂ ಭಾರತದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆಲ್ಲಲಿದೆ ಎಂದು ನನಗೆ ಅನಿಸುತ್ತಿಲ್ಲ ಎಂದಿದ್ದಾರೆ.
ಈ ಸರಣಿ 3-0, ಅಥವಾ 3-1ರಿಂದ ಸರಣಿಯನ್ನು ಗೆದ್ದುಕೊಳ್ಳಬಹುದು. ಮೊಟೆರಾದಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಮಾತ್ರ ಇಂಗ್ಲೆಂಡ್‌ಗೆ ಗೆಲ್ಲುವ ಅವಕಾಶ 50-50 ದೊರೆಯಲಿದೆ ಎನಿಸುತ್ತದೆ ಎಂದಿದ್ದಾರೆ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್.
"ಜೋ ರೂಟ್ ಅವರಿಗೆ ಇದು ಸಂಪೂರ್ಣ ವಿಭಿನ್ನವಾದ ಸವಾಲಾಗಲಿದೆ. ಅವರು ಶ್ರೀಲಂಕಾದಲ್ಲಿ ಅದ್ಭುತವಾಗಿ ಆಡಿದ್ದರು. ಆದರೆ ಯಾವುದೇ ರೀತಿಯ ಪಿಚ್‌ನಲ್ಲೂ ಬೂಮ್ರಾರಂತಾ ಬ್ಯಾಟ್ಸ್‌ಮನ್‌ನನ್ನು ಎದುರಿಸುವುದು ಸವಾಲಾಗಲಿದೆ. ಮತ್ತೊಂದೆಡೆ ಆಸ್ಟ್ರೇಲಿಯಾದಲ್ಲಿ ನೀಡಿದ ಶ್ರೇಷ್ಠ ಪ್ರದರ್ಶನದ ನಂತರ ಅಶ್ವಿನ್ ಆತ್ಮವಿಶ್ವಾಸ ಆಗಸಕ್ಕೇರಿದೆ. ಹಾಗಾಗಿ ಇದು ಖಂಡಿತಾ ಸಂಪೂರ್ಣ ವಿಶೇಷ ಆಟವಾಗಿಲಿದೆ" ಎಂದು ಗಂಭೀರ್ ಹೇಳಿದ್ದಾರೆ