ಟೀಮ್ ಇಂಡಿಯಾಗೆ ಆಯ್ಕೆಯಾದರೂ ನಾನು ಖುಷಿ ಪಡುವುದಿಲ್ಲ, ಅವಕಾಶ ಬೇಡ ಎಂದ ರಿಯಾನ್ ಪರಾಗ್!

ಇಂಡಿಯನ್ ಪ್ರೀಮಿಯರ್ ಲೀಗ್, ಇದೊಂದು ಕೇವಲ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಅಲ್ಲದೇ ಯುವ ಕ್ರಿಕೆಟಿಗರ ಭವಿಷ್ಯವನ್ನು ರೂಪಿಸುವುದರಲ್ಲಿ ದೊಡ್ಡ ಪಾತ್ರವನ್ನು ವಹಿಸುವಂತಹ ಟೂರ್ನಿಯಾಗಿದೆ. ಹೌದು, ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವ ಯುವ ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾಗೆ ಆಯ್ಕೆಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಇದೀಗ ಸ್ಟಾರ್ ಆಟಗಾರರಾಗಿ ಮಿಂಚುತ್ತಿರುವ ಸಾಕಷ್ಟು ಉದಾಹರಣೆಗಳು ಇವೆ.
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೂಡ ಹಲವು ಯುವ ಕ್ರಿಕೆಟಿಗರು ಮಿಂಚಿ ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟವಾದ ಭಾರತ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಷ್ಟು ಮಾತ್ರವಲ್ಲದೇ ಕಳಪೆ ಫಾರ್ಮ್ ಕಾರಣದಿಂದ ತಂಡದಿಂದ ಹೊರಬಿದ್ದ ಹಲವು ಅನುಭವಿ ಕ್ರಿಕೆಟಿಗರಿಗೂ ಕೂಡ ಉತ್ತಮ ಪ್ರದರ್ಶನ ನೀಡಿ ಮತ್ತೆ ತಂಡ ಸೇರಲು ಈ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಒಂದು ಅತ್ಯದ್ಭುತ ವೇದಿಕೆಯಾಗಿದೆ.
ಇನ್ನು ಭಾರತ ತಂಡವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಬೇಕು ಎಂಬ ಆಕಾಂಕ್ಷೆಯನ್ನು ಪ್ರತಿಯೊಬ್ಬ ಕ್ರಿಕೆಟಿಗನೂ ಕೂಡಾ ಹೊಂದಿರುತ್ತಾನೆ. ಭಾರತ ತಂಡವನ್ನು ಪ್ರತಿನಿಧಿಸುವ ಕರೆ ಬಂದರೆ ಸಾಕು ಎಂದು ಹಾತೊರೆಯುವ ಹಲವಾರು ಯುವ ಕ್ರಿಕೆಟಿಗರಿದ್ದಾರೆ. ಆದರೆ ಐಪಿಎಲ್ ಟೂರ್ನಿಯಲ್ಲಿ ಕೆಲವೊಂದಿಷ್ಟು ಪಂದ್ಯಗಳಲ್ಲಿ ಮಿಂಚಿ ಹೆಸರುವಾಸಿಯಾಗಿರುವ ಯುವ ಕ್ರಿಕೆಟಿಗ ರಿಯಾನ್ ಪರಾಗ್ ಮಾತ್ರ ಈಗಲೇ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಅವಕಾಶ ತನಗೆ ಬೇಡ ಎಂಬ ಹೇಳಿಕೆಯನ್ನು ನೀಡಿ ಅಚ್ಚರಿ ಮೂಡಿಸಿದ್ದಾರೆ. ರಿಯಾನ್ ಪರಾಗ್ ಈ ಕುರಿತಾಗಿ ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಟೀಮ್ ಇಂಡಿಯಾ ಅವಕಾಶ ಬೇಡ ಎಂದ ರಿಯಾನ್ ಪರಾಗ್
'ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಂಡಕ್ಕೆ ಗೆಲುವು ತಂದುಕೊಡುವ ಕೆಲಸವನ್ನು ನಾನು ಕೆಲವೊಂದಿಷ್ಟು ಬಾರಿ ಮಾಡಿದ್ದೇನೆ. ಆದರೆ ಈಗಲೇ ನನಗೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಅವಕಾಶ ಬೇಡ, ಏಕೆಂದರೆ ನಾನು ಇನ್ನೂ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಲು ಬೇಕಾದ ಸಾಮರ್ಥ್ಯ ಪಡೆಯಬೇಕಿದೆ. ಯಾವಾಗ ನಾನು 6ರಿಂದ 7 ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದುತ್ತೇನೋ ಆಗ ಮಾತ್ರ ನಾನು ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ಅರ್ಹ. ಈಗಲೂ ನನಗೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಅವಕಾಶ ಒದಗಿ ಬಂದರೆ ಅದು ನನಗೆ ಖುಷಿ ನೀಡುವುದಿಲ್ಲ' ಎಂದು ರಿಯಾನ್ ಪರಾಗ್ ಹೇಳಿಕೆ ನೀಡಿದ್ದಾರೆ.

ಧೋನಿ ರೀತಿ ಹೆಸರು ಮಾಡಬೇಕೆಂದ ಪರಾಗ್
ಇನ್ನೂ ಮುಂದುವರೆದು ಮಾತನಾಡಿದ ರಿಯಾನ್ ಪರಾಗ್ ತನ್ನ ಬ್ಯಾಟಿಂಗ್ ಕ್ರಮಾಂಕದ ಕುರಿತು ಸಮಾಧಾನವಿದೆ ಎಂದಿದ್ದಾರೆ. 6-7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಇಂಗಿತವನ್ನು ವ್ಯಕ್ತ ಪಡಿಸಿರುವ ರಿಯಾನ್ ಪರಾಗ್ ಫಿನಿಶರ್ ಎಂಬ ಹೆಸರು ಕೇಳಿದ ಕೂಡಲೇ ಕೇವಲ ಎಂಎಸ್ ಧೋನಿ ಅವರ ಹೆಸರು ಮಾತ್ರ ನೆನಪಿಗೆ ಬರುತ್ತದೆ, ತಾನೂ ಸಹ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ ಹೆಚ್ಚು ಅನುಭವ ಪಡೆದುಕೊಳ್ಳಬೇಕು ಎಂದಿದ್ದಾರೆ.

ರಿಯಾನ್ ಪರಾಗ್ ಐಪಿಎಲ್ ಅಂಕಿ ಅಂಶ
2019ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಡುತ್ತಿರುವ ರಿಯಾನ್ ಪರಾಗ್ ಇಲ್ಲಿಯವರೆಗೂ ಒಟ್ಟು 47 ಪಂದ್ಯಗಳನ್ನಾಡಿದ್ದು 37 ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದು 522 ರನ್ ಕಲೆಹಾಕಿದ್ದಾರೆ ಹಾಗೂ 19 ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದು 4 ವಿಕೆಟ್ ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications