ಆಯ್ಕೆಯಾಗದಿದ್ದರೆ ಚಿಂತೆ ಪಡುವುದಿಲ್ಲ: ರೋಹಿತ್ ಶರ್ಮಾ
ಮುಂಬೈ, ಮೇ 29: ಐಪಿಎಲ್‌ನಲ್ಲಿ ನೀರಸ ಪ್ರದರ್ಶನ ನೀಡಿರುವ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ, ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲವಂತೆ.
ತಮ್ಮ ವೃತ್ತಿ ಬದುಕಿನ ಅರ್ಧ ಭಾಗ ಮುಕ್ತಾಯವಾಗಿದೆ. ಹೀಗಾಗಿ ಟೆಸ್ಟ್ ಕ್ರಿಕೆಟ್‌ನ ಆಟ ಆರಂಭಿಸುವ-ನಿಲ್ಲಿಸುವ ಬಗ್ಗೆ ಯೋಚನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದಿರುವ ರೋಹಿತ್, ತಮ್ಮ ಉಳಿದಿರುವ ವೃತ್ತಿಬದುಕನ್ನು ಎಂಜಾಯ್ ಮಾಡುವುದನ್ನಷ್ಟೇ ಬಯಸಿರುವುದಾಗಿ ಹೇಳಿಕೊಂಡಿದ್ದಾರೆ.
'ಆಟಗಾರನಾಗಿ ನಿಮಗೆ ಸಿಗುವುದು ಸೀಮಿತ ಅವಧಿ. ನಾನು ಅದರಲ್ಲಿ ಬಹುತೇಕ ಅರ್ಧ ಭಾಗ ಮುಗಿಸಿದ್ದೇನೆ. ನನ್ನನ್ನು ಆಯ್ಕೆ ಮಾಡುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಉಳಿದ ಅರ್ಧ ಅವಧಿಯನ್ನು ಯೋಚಿಸುತ್ತಾ ಕಳೆಯುವುದರಲ್ಲಿ ಅರ್ಥವಿಲ್ಲ.
ಯಾವ ಸನ್ನಿವೇಶ ನನಗೆ ದೊರೆತರೂ ಅದನ್ನು ನೆನಪಿನಲ್ಲಿ ಉಳಿಯುವಂತೆ ಮಾಡಬೇಕು ಎಂಬ ಸಿದ್ಧಾಂತದೊಂದಿಗೆ ನಾನು ಮುಂದುವರಿಯುತ್ತೇನೆ ಎಂದು ಅವರು ಟೆಸ್ಟ್ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಎರಡು ದ್ವಿಶತಕಗಳೊಂದಿಗೆ ಉತ್ತಮ ದಾಖಲೆ ಮಾಡಿರುವ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ತೋರಿಸಿದ್ದಾರೆ. 25 ಪಂದ್ಯಗಳಲ್ಲಿ 39.97ರ ಸರಾಸರಿಯಲ್ಲಿ ಅವರು ಗಳಿಸಿರುವುದು 1479 ರನ್ ಮಾತ್ರ.
2018ರ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅಸ್ಥಿರ ಪ್ರದರ್ಶನ ನೀಡಿದ್ದ ರೋಹಿತ್ ಅವರನ್ನು ಜೂನ್ 14ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಆಫ್ಘಾನಿಸ್ತಾನದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದೆ.
ಐಪಿಎಲ್‌ನಲ್ಲಿನ ಕಳಪೆ ಪ್ರದರ್ಶನ ಮತ್ತು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯದೆ ಇರುವ ಬಗ್ಗೆ ಅವರು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಎಂಜಾಯ್ ಮಾಡುವುದಕ್ಕಷ್ಟೇ ಗಮನ
'ನನ್ನನ್ನು ಆಯ್ಕೆ ಮಾಡುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಚಿಂತೆ ಮಾಡುವ ಹಂತದಲ್ಲಿ ನಾನಿಲ್ಲ. ನನ್ನ ಆಟವನ್ನು ಎಂಜಾಯ್ ಮಾಡಬೇಕಾಗಿದೆ. ನನ್ನ ವೃತ್ತಿ ಬದುಕಿನ ಆರಂಭದ ಐದಾರು ವರ್ಷ ನನ್ನನ್ನು ಆಯ್ಕೆ ಮಾಡುತ್ತಾರೆಯೇ? ನಾನು ಆಡುತ್ತೇನೆಯೇ ಎಂಬ ಬಗ್ಗೆ ಯೋಚಿಸಬೇಕಿತ್ತು.
ಈಗ ನನ್ನ ಗಮನ ಆಟವನ್ನು ಎಂಜಾಯ್ ಮಾಡುವುದರ ಮೇಲಷ್ಟೇ ಇದೆ. ಈ ಎಲ್ಲಾ ವಿಚಾರಗಳು ನಮ್ಮ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿರುತ್ತದೆ. ಅದರ ಬದಲು ನೀವು ಏನು ಮಾಡುತ್ತೀರೋ ಅದರಲ್ಲಿ ಮತ್ತು ನಿಮ್ಮಿಂದ ಅತ್ಯುತ್ತಮವಾದುದ್ದನ್ನು ನೀಡುವುದರಲ್ಲಿ ನೀವು ಖುಷಿ ಪಡಬೇಕು.

ಕೈತಪ್ಪಿದ್ದ ಅವಕಾಶ
20 ವರ್ಷದವನಿದ್ದಾಗ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದೆ. 26 ವರ್ಷದವನಿದ್ದಾಗ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದೆ. 2010ರಲ್ಲಿಯೇ ಪಾದಾರ್ಪಣೆ ಮಾಡುವ ಅವಕಾಶವಿತ್ತು. ಆದರೆ ಅದು ಕೈತಪ್ಪಿತು (ಪಂದ್ಯದ ದಿನ ಬೆಳಿಗ್ಗೆ ಅಭ್ಯಾಸ ನಡೆಸುವಾಗ ಉಂಟಾದ ಗಾಯದ ಕಾರಣ).
ಬಳಿಕ ನನಗೆ ಅರ್ಥವಾಗಿದ್ದೇನೆಂದರೆ, ನೀನು ಹೆಚ್ಚು ಬಯಸಿದ್ದಷ್ಟೂ, ನಿಮ್ಮ ಧೋರಣೆ ಬದಲಾಗುತ್ತದೆ. ಎಲ್ಲದಕ್ಕೂ ಸಮಯವಿರುತ್ತದೆ ಎಂಬುದನ್ನು ನಾನು ಅರ್ಥೈಸಿಕೊಂಡಿದ್ದೇನೆ.

ತಂಡದಲ್ಲಿ ಜಾಗವೇ ಇರಲಿಲ್ಲ
ಟೆಸ್ಟ್‌ನಲ್ಲಿ ಆಡಲು ಅದರದ್ದೇ ಆದ ಸಮಯ ಮತ್ತು ಸ್ಥಳಾವಕಾಶದ ಅಗತ್ಯವಿರುತ್ತದೆ. ಆಗ ಹಿರಿಯರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ - ಇವರೆಲ್ಲರೂ ಆಡುತ್ತಿದ್ದರು. ಹೀಗಾಗಿ ನಾವು ಕಾಯಬೇಕಾಗಿತ್ತು.
ಆಗ ಅದರ ಬಗ್ಗೆ ಚಿಂತೆ ಮಾಡುವುದರಲ್ಲಿ ಯಾವ ಪ್ರಯೋಜನವೂ ಇಲ್ಲ ಎಂಬುದು ತಿಳಿದಿತ್ತು. ಆಯ್ಕೆದಾರರು ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಯೋಚನೆ ಮಾಡುವುದೂ ಅರ್ಥಹೀನ.

ಅಚ್ಚರಿಯೇನೂ ಆಗಿಲ್ಲ
ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಿಂದ ಕೊಕ್ ನೀಡಿರುವುದಕ್ಕೆ ಅಚ್ಚರಿಯಾಗಿದೆಯೇ? ಇಲ್ಲ. ಮೊದಲೇ ಹೇಳಿದಂತೆ ನಾನು ನನ್ನ ಆಟವನ್ನು ಎಂಜಾಯ್ ಮಾಡುವುದರತ್ತ ಮಾತ್ರ ಗಮನ ಹರಿಸುತ್ತಿದ್ದೇನೆ. ಯಾವುದರ ಬಗ್ಗೆಯೂ ಚಿಂತೆ ಮಾಡಲು ಸಮಯವಿಲ್ಲ. ಈ ಹಿಂದೆ ಚಿಂತೆ ಮಾಡಲು ಸಾಕಷ್ಟು ಸಮಯವಿತ್ತು. ಮುಂದಿನ ದಿನಗಳಲ್ಲಿ ಮಹತ್ವದ ಟೂರ್ನಿಗಳು ಬರಲಿವೆ. ಅವುಗಳತ್ತ ಲಕ್ಷ್ಯವಹಿಸಬೇಕಾಗಿದೆ.

ನಿರಾಶಾದಾಯಕ ಐಪಿಎಲ್
ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ರೋಹಿತ್ ಪಾಲಿಗೆ ಈ ಆವೃತ್ತಿ ನಿರಾಸೆ ಮೂಡಿಸಿದೆ. ಪ್ಲೇಆಫ್ ಪ್ರವೇಶಿಸುವಲ್ಲಿ ಮುಂಬೈ ತಂಡ ವಿಫಲವಾಗಿತ್ತು.
ಇದು ತೀವ್ರ ನಿರಾಶದಾಯಕ ಆವೃತ್ತಿ ಎನ್ನುವುದರಲ್ಲಿ ಅನುಮಾನವಿಲ್ಲ. ಈ ತಂಡ ಹಿಂದೆಂದಿಗಿಂತಲೂ ಅತ್ಯುತ್ತಮವಾಗಿದೆ ಎಂದು ಅನೇಕ ಬಾರಿ ಹೇಳಿದ್ದೇನೆ. ಅರ್ಹತೆ ಪಡೆದ ಉಳಿದ ಹೆಚ್ಚಿನ ತಂಡಗಳಿಗಿಂತ ನಮ್ಮದು ಉತ್ತಮ ತಂಡವಾಗಿತ್ತು. ಆದರೆ ಇಲ್ಲಿ ನಮ್ಮ ಸೋಲಿಗೆ ನಮ್ಮನ್ನೇ ದೂಷಿಸಿಕೊಳ್ಳಬೇಕು. ನಾವು ಅನೇಕ ತಪ್ಪುಗಳನ್ನು ಮಾಡಿದೆವು ಎಂದರು.

ವೈಯಕ್ತಿಕವಾಗಿಯೂ ನಿರಾಸೆ
ವೈಯಕ್ತಿಕವಾಗಿ ನನಗೆ ಇದು ಉತ್ತಮ ಆವೃತ್ತಿಯಾಗಲಿಲ್ಲ. ನನಗೆ ನಾನು ಸಿದ್ಧಪಡಿಸಿಕೊಂಡಿರುವ ಗುಣಮಟ್ಟಕ್ಕೆ ಅನುಗುಣವಾಗಿ ಆಟವನ್ನು ಸಾಕಷ್ಟು ನಿರೀಕ್ಷಿಸಿದ್ದೆ. ಅದು ಕೊನೆಯ ಹಂತದಲ್ಲಿ ದೊರಕಿತು. ಕಣಕ್ಕೆ ಹೋಗಿ ನಾನೇನು ಮಾಡಲು ಸಾಧ್ಯವೋ ಅಷ್ಟು ಸಮಯವನ್ನು ನನಗೆ ಕೊಟ್ಟಿದ್ದೆ. ಕೆಲವು ಒಳ್ಳೆಯ ಇನ್ನಿಂಗ್ಸ್‌ಗಳನ್ನು ಆಡಿದ್ದೆ. ಕೊನೆಯಲ್ಲಿ ಅಗತ್ಯವಿದ್ದಾಗ ನನ್ನ ಆಟ ಸಾಕಾಗಲಿಲ್ಲ. ಇದು ತುಂಬಾ ನಿರಾಸೆ ಮೂಡಿಸಿದೆ.

ತಪ್ಪು ಹೊಡೆತಗಳು ಕೈಕೊಟ್ಟವು
ಫಲಿತಾಂಶ ನಿಮ್ಮ ಪರವಾಗಿ ಆಗದೆ ಇದ್ದಾಗ ಹೊಡೆತದ ಆಯ್ಕೆ (ಶಾಟ್ ಸೆಲೆಕ್ಷನ್) ಕುರಿತು ನಾವು ಸಾಮಾನ್ಯವಾಗಿ ಮಾತನಾಡುತ್ತೇವೆ. ಆದರೆ, ನಾನು ಪಂದ್ಯದ ಮೊದಲ ಓವರ್‌ನಲ್ಲಿ ಆಡಿದ ಎಸೆತಗಳು ಕ್ರೀಡಾಂಗಣದಿಂದ ಹೊರಕ್ಕೆ ಹೋಗಿ ಬಿದ್ದಾಗ ತಂಡ ಬಯಸುವ ಕ್ಷಣ ದೊರಕುತ್ತದೆ.
ಅದನ್ನು ಸಾಧಿಸಲು ನಿಮ್ಮ ಬೆನ್ನಿಗೆ ನೀವು ನಿಂತುಕೊಳ್ಳಬೇಕು. ಇಲ್ಲಿ ನಾನೂ ನನಗೆ ಬೆಂಬಲವಾಗಿ ನಿಂತುಕೊಂಡಿದ್ದೆ. ಆದರೆ, ಫಲಕೊಡಲಿಲ್ಲ. ಅದು ಫಲ ನೀಡಿದರೆ ನೀವು ಪಂದ್ಯಗಳನ್ನು ಗೆಲ್ಲುತ್ತೀರಿ. ಸಾಧ್ಯವಾದಾಗ ನೀವು ಸೋಲುತ್ತೀರಿ. ನಾನು ಅನೇಕ ಬಾರಿ ಆ ಸನ್ನಿವೇಶ ಎದುರಿಸಿದ್ದೇನೆ.

ನಾನು ವೈಟ್ ಬಾಲ್ ತಜ್ಞ ಅಲ್ಲ
ಚಿಕ್ಕಂದಿನಿಂದಲೂ ನನಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಬೇಕೆಂಬ ಕನಸಿತ್ತು. ಆ ಕನಸು ಮುಗಿಯಲು ಸಾಧ್ಯವಿಲ್ಲ. ನನ್ನ ಆಟವನ್ನು ಅಥವಾ ಆಟದ ಕುರಿತ ನನ್ನ ಆಲೋಚನೆಯನ್ನು ಯಾರಿಗೂ ಕಿತ್ತುಕೊಳ್ಳಲು ಸಾಧ್ಯವಿಲ್ಲ.
ಆಯ್ಕೆದಾರರು ಅವರ ನಿಯಂತ್ರಣದಲ್ಲಿ ಉತ್ತಮವಾದುದ್ದನ್ನು ಮಾಡುತ್ತಾರೆ, ಆಟಗಾರರು ಅವರ ನಿಯಂತ್ರಣದಲ್ಲಿ ಸಾಧ್ಯವಾದುದ್ದನ್ನು ಮಾಡುತ್ತಾರೆ. ಗಮನ ಕೇಂದ್ರೀಕರಿಸಿರುವುದು ಇಲ್ಲಿ ಮುಖ್ಯ. ನಾನು ಕ್ರಿಕೆಟ್ ಆಡಲು ಆರಂಭಿಸಿದಾಗ ವೈಟ್ ಬಾಲ್ ಕ್ರಿಕೆಟ್ ಇರಲೇ ಇಲ್ಲ. ಶಾಲೆಯಲ್ಲಿ, ವಯೋಮಾನದ ಆಧಾರದ ತಂಡಗಳಲ್ಲಿ ಆಡಿದ್ದು ಕೆಂಪು ಚೆಂಡಿನಲ್ಲಿಯೇ. ಬಿಳಿ ಚೆಂಡು ಬಂದಿದ್ದು ಬಳಿಕ. ಬಾಲ್ಯದಲ್ಲಿ ನೋಡಿದ್ದು ಕೆಂಪು ಚೆಂಡು ಮಾತ್ರವೇ.

ಕಾಡಿದ ಸ್ಥಿರತೆಯ ಕೊರತೆ
ಮುಂಬೈ ಇಂಡಿಯನ್ಸ್ ತಂಡದ ಆಟದಲ್ಲಿ ಇಡೀ ಆವೃತ್ತಿಯುದ್ದಕ್ಕೂ ಸ್ಥಿರತೆಯಿರಲಿಲ್ಲ. ಮುಂದಿನ ಸೀಸನ್‌ನಲ್ಲಿ ತಂಡದ ಪ್ರಾಬಲ್ಯ ಹೊರಬೀಳಲಿದೆ.
ತಂಡವಾಗಿ ನಮ್ಮ ಆಟದಲ್ಲಿ ಸ್ವಲ್ಪ ಅಸ್ಥಿರತೆ ಇತ್ತು ಎನಿಸುತ್ತದೆ. ಅಗತ್ಯವಾದಾಗ ನನ್ನನ್ನೂ ಒಳಗೊಂಡಂತೆ ನಾವು ಇನ್ನಷ್ಟು ಶ್ರಮವಹಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇದರಿಂದ ನಿರಾಶೆಯಾಗಿದೆ. ಇವೆಲ್ಲವೂ ಆಗುತ್ತದೆ. ಇವುಗಳಿಂದ ಸಾಕಷ್ಟು ಕಲಿತುಕೊಳ್ಳಬಹುದು. ಮುಂದೆ ಇಂತಹ ಸನ್ನಿವೇಶದಲ್ಲಿ ಬಿದ್ದಾಗ ಎದ್ದು ಬರುವ ಹೋರಾಟ ನಡೆಸುವುದು ಸಾಧ್ಯವಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications