
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಶ್ರೇಷ್ಠ ಮಾನವೀಯ ವ್ಯಕ್ತಿತ್ವ ಹೊಂದಿದವರು ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಪಂದ್ಯವನ್ನು ಅರ್ಥ ಮಾಡಿಕೊಳ್ಳುವ ಹಾಗೂ ಬೌಲರ್‌ಗಳಿಗೆ ಅಗತ್ಯವಾಗಿರುವುದನ್ನು ನೀಡುವ ಗುಣ ಅವರಲ್ಲಿದೆ ಎಂದು ತಾಹಿರ್ ಹೇಳಿದ್ದಾರೆ.
ಇಮ್ರಾನ್ ತಾಹೀರ್ ಕಳೆದ ಮೂರು ಆವೃತ್ತಿಗಳಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಕಣಕ್ಕಿಳಿದಿದ್ದಾರೆ. ಮುಂದೆಯೂ ಸಿಎಸ್‌ಕೆ ತಮಡದ ಪರವಾಗಿ ಧೋನಿ ನಾಯಕತ್ವದಲ್ಲಿ ಮುಂದುವರಿಯುವ ಇಚ್ಛೆಯನ್ನು ತಾಹೀರ್ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
"ಧೋನಿಯ ಜೊತೆಗೆ ಆಡುವುದು ಯಾವಗಲೂ ಸಂತೋಷವನ್ನು ನೀಡುತ್ತದೆ. ಕಳೆದ ಮೂರು ವರ್ಷಗಳಿಂದ ನಾನು ಆತನೊಂದಿಗೆ ಆಡುತ್ತಿದ್ದೇನೆ. ನನಗೆ ಆತನೋರ್ವ ಶ್ರೇಷ್ಠ ವ್ಯಕ್ತಿ. ಶ್ರೇಷ್ಠವಾದ ಮಾನವೀಯತೆಯನ್ನು ಹೊಂದಿರುವ ವ್ಯಕ್ತಿತ್ವ ಹೊಂದಿದವರು ಎಂದು " ಎಂದು ಇಮ್ರಾನ್ ತಾಹೀರ್ ಧೋನಿಯನ್ನ ಬಣ್ಣಿಸಿದ್ದಾರೆ.
"ಎಂಎಸ್ ಧೋನಿ ಎಲ್ಲರನ್ನೂ ಅರ್ಥ ಮಾಡಿಕೊಳ್ಳುತ್ತಾರೆ ಹಾಗೂ ಎಲ್ಲರಿಗೂ ಗೌರವವನ್ನು ನೀಡುತ್ತಾರೆ. ನಾವು ಆತನನ್ನು ಇಷ್ಟ ಪಡುತ್ತೇವೆ. ಆತ ಸಾಕಷ್ಟು ಜ್ಞಾನವನ್ನು ಹೊಂದಿರುವ ವ್ಯಕ್ತಿ ಹಾಗೂ ವಿಶ್ವದ ಅತ್ಯುತ್ತಮ ವ್ಯಕ್ತಿಯಾಗಿದ್ದಾರೆ. ನೀವು ಆತನ ಬಳಿ ಏನನ್ನೂ ಹೇಳಿಕೊಳ್ಳಬೇಕಾಗಿಲ್ಲ. ನಮಗಾಗಿ ಯಾವ ರೀತಿ ಫೀಲ್ಡಿಂಗ್ ರೂಪಿಸಬೇಕೆಂದು ಆತನಿಗೆ ತಿಳಿದಿದೆ. ನಾವು ಕೇವಲ ಬಂದು ಬೌಲಿಂಗ್ ಮಾಡಬೇಕಷ್ಟೇ" ಎಂದು ತಾಹೀರ್ ಧೋನಿಯ ಬಗೆಗೆ ಮಾತನಾಡುತ್ತಾ ಹೇಳಿದ್ದಾರೆ.
"ಧೋನಿಯ ಜೊತೆಯಲ್ಲಿರುವುದು ಸಂತೋಷದ ಸಂಗತಿ. ಆತನೊಂದಿಗೆ ಇರುವವರು ಸಾಕಷ್ಟು ಕಲಿತುಕೊಳ್ಳಬಹುದು. ನೀವೋರ್ವ ಕ್ರಿಕೆಟರ್ ಆಗಿ ಅದನ್ನು ಬಯಸುತ್ತೀರಿ. ಆತನನ್ನು ಯಾವಾಗಲೂ ನನ್ನ ತಂಡದಲ್ಲಿರಲು ಬಯಸುತ್ತೇನೆ. ನಾನು ಹೀಗೆಯೇ ಮುಂದುವರಿಯುತ್ತಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆಗಿರಲು ಬಯಸುತ್ತೇನೆ" ಎಂದು ತಾಹೀರ್ ಪ್ರತಿಕ್ರಿಯಿಸಿದ್ದಾರೆ.