ಭಾರತ ಕೋಚ್ ಸ್ಥಾನಕ್ಕೆ ಮೊದಲ ಆಯ್ಕೆ ದ್ರಾವಿಡ್ ಅಲ್ಲ; ಅನುಮಾನ ಮೂಡಿಸಿದ ದಿಗ್ಗಜನ ಹೇಳಿಕೆ!

ಕಳೆದೊಂದು ತಿಂಗಳಿನಿಂದ ಸಾಕಷ್ಟು ದೊಡ್ಡ ಮಟ್ಟದ ಸುದ್ದಿಗೆ ಕಾರಣವಾಗಿದ್ದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ನವೆಂಬರ್ 17ರಂದು ನಡೆದ ಫೈನಲ್ ಪಂದ್ಯದ ಮೂಲಕ ತೆರೆಬಿದ್ದಿದೆ. ಈ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಿದವು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ 8 ವಿಕೆಟ್‍ಗಳ ಜಯ ಸಾಧಿಸುವುದರ ಮೂಲಕ ಚೊಚ್ಚಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೋತು ರನ್ನರ್ ಅಪ್ ಆಗಿ ಟೂರ್ನಿಯಿಂದ ಹೊರ ಬಂದ ನ್ಯೂಜಿಲೆಂಡ್ ಇದೀಗ ಭಾರತ ಪ್ರವಾಸವನ್ನು ಕೈಗೊಂಡಿದ್ದು ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಗಳಲ್ಲಿ ಸೆಣಸಾಡುತ್ತಿದೆ. ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಎಡವಿದ ಟೀಮ್ ಇಂಡಿಯಾ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದು ನ್ಯೂಜಿಲೆಂಡ್ ವಿರುದ್ಧ ಕಾದಾಟ ನಡೆಸುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಈ ಸರಣಿಯಲ್ಲಿ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಪದಾರ್ಪಣೆ ಮಾಡಿದ್ದು ಜೈಪುರದಲ್ಲಿ ನಡೆದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಗೆಲುವು ಸಾಧಿಸಿದೆ.
ಹೀಗೆ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗಿ ಮುನ್ನಡೆಸಿದ ಮೊದಲನೇ ಪಂದ್ಯದಲ್ಲಿಯೇ ಭಾರತ ತಂಡ ಗೆಲುವು ಸಾಧಿಸಿರುವುದು ರಾಹುಲ್ ದ್ರಾವಿಡ್ ಅಭಿಮಾನಿಗಳು ಹಾಗೂ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ. ಇದರ ನಡುವೆಯೇ ಇದೀಗ ಮಾಜಿ ಕ್ರಿಕೆಟಿಗ ಹಾಗೂ ಪ್ರಸ್ತುತ ಐಪಿಎಲ್ ಫ್ರಾಂಚೈಸಿಗಳಲ್ಲಿ ಒಂದಾದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ಆಗಿರುವ ರಿಕಿ ಪಾಂಟಿಂಗ್ ಟೀಮ್ ಇಂಡಿಯಾ ಕೋಚ್ ಆಯ್ಕೆಯ ವಿಷಯದ ಕುರಿತಾಗಿ ನೀಡಿರುವ ಹೇಳಿಕೆ ಅನುಮಾನ ಮೂಡಿಸಿದೆ. ಅಷ್ಟಕ್ಕೂ ರಿಕಿ ಪಾಂಟಿಂಗ್ ಟೀಮ್ ಇಂಡಿಯಾ ಕೋಚ್ ಆಯ್ಕೆಯ ಕುರಿತಾಗಿ ಮಾತನಾಡಿದ್ದೇನು ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಓದಿ..

ಐಪಿಎಲ್ ವೇಳೆಯಲ್ಲಿಯೇ ಭಾರತದ ಹೆಡ್ ಕೋಚ್ ಸ್ಥಾನದ ಆಫರ್ ಬಂದಿತ್ತು ಎಂದ ರಿಕಿ ಪಾಂಟಿಂಗ್
ಟೀಮ್ ಇಂಡಿಯಾ ಹೆಡ್ ಕೋಚ್ ಆಯ್ಕೆಯ ಕುರಿತಾಗಿ ಮಾತನಾಡಿರುವ ರಿಕಿ ಪಾಂಟಿಂಗ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆಯಲ್ಲಿಯೇ ತನಗೆ ಟೀಮ್ ಇಂಡಿಯಾ ಹೆಡ್ ಕೋಚ್ ಆಗುವಂತೆ ಆಫರ್ ಬಂದಿತ್ತು ಎಂದು ಹೇಳಿಕೆ ನೀಡಿದ್ದಾರೆ. ಹೌದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ಆಗಿ ರಿಕಿ ಪಾಂಟಿಂಗ್ ಕಾರ್ಯನಿರ್ವಹಿಸುತ್ತಿದ್ದರು, ಆ ಸಂದರ್ಭದಲ್ಲಿ ಟೀಮ್ ಇಂಡಿಯಾ ಹೆಡ್ ಕೋಚ್ ಆಗುವ ಆಫರ್ ಬಂದಿತ್ತು ಆದರೆ ಕೆಲಸದ ಒತ್ತಡದ ನಡುವೆ ಸಾಕಷ್ಟು ತಿಂಗಳುಗಳ ಕಾಲ ಟೀಮ್ ಇಂಡಿಯಾ ಹೆಡ್ ಕೋಚ್ ಆಗಿ ಇರುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣದಿಂದಾಗಿ ರಿಕಿ ಪಾಂಟಿಂಗ್ ಈ ಆಫರ್ ತಿರಸ್ಕರಿಸಿದ್ದರಂತೆ.

ಅನುಮಾನ ಹುಟ್ಟುಹಾಕಿದ ರಿಕಿ ಪಾಂಟಿಂಗ್ ಹೇಳಿಕೆ
ಟೀಮ್ ಇಂಡಿಯಾ ಹೆಡ್ ಕೋಚ್ ಆಗುವ ಆಫರ್ ಐಪಿಎಲ್ ವೇಳೆಯಲ್ಲಿ ನನಗೆ ಬಂದಿತ್ತು ಎಂಬ ಹೇಳಿಕೆ ನೀಡುವುದರ ಮೂಲಕ ರಿಕಿ ಪಾಂಟಿಂಗ್ ಗೊಂದಲವನ್ನು ಹುಟ್ಟುಹಾಕಿದ್ದಾರೆ. ಬಿಸಿಸಿಐ ಇತ್ತೀಚೆಗಷ್ಟೇ ರಾಹುಲ್ ದ್ರಾವಿಡ್ ಅವರನ್ನು ಯಾವುದೇ ಪೈಪೋಟಿಗಳಿಲ್ಲದೆ ಟೀಮ್ ಇಂಡಿಯಾ ಕೋಚ್ ಎಂದು ಆಯ್ಕೆ ಮಾಡಿತ್ತು. ಆದರೆ ಇದೀಗ ಐಪಿಎಲ್ ವೇಳೆಯಲ್ಲಿಯೇ ಟೀಮ್ ಇಂಡಿಯಾ ಕೋಚ್ ಆಗುವ ಆಫರ್ ಬಂದಿತ್ತು ಎಂಬ ರಿಕಿ ಪಾಂಟಿಂಗ್ ಅವರ ಹೇಳಿಕೆ ರಾಹುಲ್ ದ್ರಾವಿಡ್ ಅವರಿಗೂ ಮುಂಚೆಯೇ ರಿಕಿ ಪಾಂಟಿಂಗ್ ಅವರಿಗೆ ಟೀಮ್ ಇಂಡಿಯಾ ಹೆಡ್ ಕೋಚ್ ಆಗುವ ಆಫರ್ ಹೋಗಿತ್ತಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ದ್ರಾವಿಡ್ ತರಬೇತಿಯ ಚೊಚ್ಚಲ ಪಂದ್ಯದಲ್ಲಿಯೇ ಗೆದ್ದ ಟೀಮ್ ಇಂಡಿಯಾ
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡದ ವಿರುದ್ಧ ಸೋಲುವ ಮೂಲಕ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿತ್ತು. ಆದರೆ ಇದೀಗ ರಾಹುಲ್ ದ್ರಾವಿಡ್ ತರಬೇತಿಯ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಸೋಲಿಸುವುದರ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಈ ಮೂಲಕ ಪ್ರಸ್ತುತ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದ ಮುನ್ನಡೆಯನ್ನು ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications