ಬುಮ್ರಾ ಬೌಲಿಂಗ್‌ನಲ್ಲಿ ರನ್ ಗಳಿಸುವ ತಂತ್ರ ಬಿಚ್ಚಿಟ್ಟ ಬ್ರಿಯಾನ್ ಲಾರಾ

ಬೆಂಗಳೂರು, ಮೇ 24: ಸದ್ಯ ವಿಶ್ವದ ನಂ.1 ಬೌಲರ್ ಜಸ್‌ಪ್ರೀತ್ ಬುಮ್ರಾ ಎದುರು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವೆಸ್ಟ್ ಇಂಡೀಸ್‌ನ ದಂತಕತೆ ಬ್ರಿಯಾನ್ ಚಾರ್ಲ್ಸ್ ಲಾರಾ ಬ್ಯಾಟ್ ಮಾಡಿದರೆ ಹೇಗಿರುತ್ತದೆ? ಅಂದಹಾಗೆ ಬುಮ್ರಾ ಅವರನ್ನು ಎದುರಿಸುವಂತಾದರೆ ಅವರ ವಿರುದ್ಧ ತಮ್ಮದೇ ಆದ ಅಸ್ತ್ರ ಬಳಕೆ ಮಾಡುವುದಾಗಿ ಲಾರಾ ಹೇಳಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಲಾರಾ, ತಮ್ಮ ವೃತ್ತಿ ಬದುಕಿನ ದಿನಗಳಲ್ಲಿ ವಿಶ್ವ ಶ್ರೇಷ್ಠ ಬೌಲರ್‌ಗಳಾದ ಅಲಾನ್ ಡೊನಾಲ್ಡ್, ಗ್ಲೆನ್ ಮೆಗ್ರಾತ್ ಹಾಗೂ ವಸೀಮ್ ಅಕ್ರಮ್ ಅವರನ್ನು ಬೆಂಡೆತ್ತಿದವರು. ಉತ್ತಮ ಪಿಚ್‌ಗಳು ಲಭ್ಯವಾದಲ್ಲಿ ಎದುರಾಳಿ ತಂಡ ಯಾವುದೇ ಇರಲಿ ಅವರ ಸ್ಪಿನ್ ಮತ್ತು ವೇಗದ ಬೌಲಿಂಗ್ ಎರಡನ್ನೂ ಧೂಳಿ ಪಟ ಮಾಡುತ್ತಿದ್ದ ಬ್ಯಾಟ್ಸ್‌ಮನ್ ಲಾರಾ.
ಲಾರಾ ಏನಾದರು ಸದ್ಯ ಈಗಿನ ಶ್ರೇಷ್ಠ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರನ್ನು ಎದುರಿಸಿದ್ದರೆ, ಅವರ ವಿರುದ್ಧ ಆಕ್ರಮಣಕಾರಿ ಆಟವಾಡುವ ಬದಲು ಹೆಚ್ಚು ಹೆಚ್ಚು ಬಾರಿ ಸ್ಟ್ರೈಕ್ ಬದಲಾಯಿಸುವ ಮೂಲಕ ಅವರ ಲೈನ್ ಮತ್ತು ಲೆನ್ತ್ ಹಾಳುಮಾಡುವ ಪ್ರಯತ್ನ ನಡೆಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಬುಮ್ರಾ ಅವರ ಆತ್ಮವಿಶ್ವಾಸ ಹೆಚ್ಚುವ ಲೈನ್ ಮತ್ತು ಲೆನ್ತ್ ಕಂಡುಕೊಳ್ಳಲು ಅವಕಾಶವನ್ನೇ ನೀಡಬಾರದು ಎಂದು ಲಾರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
"ಮೊದಲಿಗೆ ಬುಮ್ರಾ ಅವರನ್ನು ಎದುರಿಸುವಂತಾದರೆ, ಆದಷ್ಟು ಬೇಗ ನಾನ್ ಸ್ಟ್ರೈಕ್‌ನಲ್ಲಿ ಇರಲು ಇಷ್ಟ ಪಡುತ್ತೇನೆ. ವಿಭಿನ್ನ ಬೈಲಿಂಗ್ ಶೈಲಿ ಹೊಂದಿರುವ ಉತ್ತಮ ಬೌಲರ್ ಅವರು. ಬ್ಯಾಟ್ಸ್‌ಮನ್‌ಗಳು ಅವರ ಬೌಲಿಂಗ್ ಎದುರಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ನಾನಂತೂ ಪದೇ ಪದೇ ಸ್ಟ್ರೈಕ್ ಬದಲಾಯಿಸುವ ಮೂಲಕ ಅವರು ಲೈನ್ ಮತ್ತು ಲೆನ್ತ್ ಕಂಡುಕೊಳ್ಳದಂತೆ ಮಾಡುತ್ತೇನೆ. ಏಕೆಂದರೆ ಟಿ20 ಕ್ರಿಕೆಟ್‌ಗೆ ಹೋಲಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ 1 ರನ್ ತೆಗೆದುಕೊಳ್ಳಲು ಹೆಚ್ಚು ಅವಕಾಶಗಳಿರುತ್ತವೆ. ಹಿಂದೆಲ್ಲಾ ಸುನಿಲ್ ನರೇನ್ ಮತ್ತು ಮುತ್ತಯ್ಯ ಮುರಳೀ ಧರನ್ ಅವರ ಬೌಲಿಂಗ್ ಎದುರಿಸುವುದು ಬಹಳಾ ಕಷ್ಟವಾಗಿತ್ತು. ಇದೀಗ ಬುಮ್ರಾ ಕೂಡ ಅದೇ ಪ್ರಭಾವವನ್ನು ಹೊಂದಿದ್ದಾರೆ. ಹೀಗಾಗಿ ಅವರ ಬೌಲಿಂಗ್‌ನಲ್ಲಿ ಸಾಧ್ಯವಾದಷ್ಟು ಹೆಚ್ಚು ಸಿಂಗಲ್ಸ್ ತೆಗೆದುಕೊಳ್ಳುವಂತೆ ಬ್ಯಾಟ್ಸ್‌ಮನ್‌ಗಳಿಗೆ ಸಲಹೆ ನೀಡುತ್ತೇನೆ. ಅವರು ಭಾರತದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು,'' ಎಂದು ಲಾರಾ ವಿವರಿಸಿದ್ದಾರೆ.
ಆಕ್ರಮಣಕಾರಿ ಆಟದ ಮಾತೇ ಇಲ್ಲ
ಇದೇ ವೇಳೆ ಬುಮ್ರಾ ಬೌಲಿಂಗ್‌ನಲ್ಲಿ ಆಕ್ರಮಣಕಾರಿ ಆಟವಾಡುವ ಮಾತೇ ಇಲ್ಲ ಎಂದು ಲಾರಾ ಹೇಳಿದ್ದಾರೆ. "ಒಬ್ಬ ಶ್ರೇಷ್ಠ ಬೌಲರ್ ಎದುರು ಪ್ರತಿ ದಾಳಿ ನಡೆಸುವುದು ಒಳ್ಳೆಯ ಆಲೋಚನೆ ಖಂಡಿತಾ ಅಲ್ಲ. ಎಲ್ಲೋ ಕೆಲವೊಂದು ದಿನಗಳಲ್ಲಿ ಅವರ ಬೌಲಿಂಗ್ ಕೊಂಚ ಲಯ ತಪ್ಪಬಹುದು. ಆದರೆ, ಬಹುತೇಕ ದಿನಗಳಲ್ಲಿ ಅವರ ಬೌಲಿಂಗ್ ಅತ್ಯುತ್ತಮವಾಗಿರುತ್ತದೆ. ಹೀಗಾಗಿ ಇಂತಹ ಬೌಲರ್ ಎದುರು ಗೌರವಯುತವಾಗಿ ಬ್ಯಾಟಿಂಗ್ ನಡೆಸುವುದನ್ನು ಎದುರು ನೋಡುತ್ತೇನೆ,'' ಎಂದಿದ್ದಾರೆ.
ವಿರಾಟ್ ಮನುಷ್ಯನೇ ಅಲ್ಲ
ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಎದುರು ಆಡಿದ ಅಪಾರ ಅನುಭವ ಹೊಂದಿರುವ ಲಾರಾ, ಸದ್ಯ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಆಟ ಕಂಡು ಆತ ಮನುಷ್ಯನೇ ಅಲ್ಲ ಎಂದಿದ್ದಾರೆ. "ಆತ ಒಂದು ಯಂತ್ರದಂತೆ. 80-90ರ ದಶಕದಲ್ಲಿ ನಾವು ಕಂಡಿದ್ದ ಕ್ರಿಕೆಟ್ ಆಟವನ್ನು ಆತ ಸಂಪೂರ್ಣ ಬದಲಾಯಿಸಿದ್ದಾನೆ. ಫಿಟ್ನೆಸ್ ಮುಖ್ಯವಾಗಿತ್ತು ನಿಜ. ಆದರೆ, ಅಂದೆಲ್ಲಾ ಈಗಿರುಬಷ್ಟು ಮಹತ್ವವನ್ನು ಫಿಟ್ನೆಸ್ ಕಡೆಗೆ ನೀಡಲಾಗುತ್ತಿರಲಿಲ್ಲ. ಈಗೆಲ್ಲಾ ಹೆಚ್ಚು ಹೆಚ್ಚು ಕ್ರಿಕೆಟ್‌ಗಳನ್ನು ಆಡಲಾಗುತ್ತಿದ್ದು, ಫಿಟ್ನೆಸ್ ಕಾಯ್ದುಕೊಳ್ಳುವುದು ಬಹುಮುಖ್ಯ ಸಂಗತಿ. ವಿರಾಟ್ ಕೂಡ ಜಿಮ್‌ನಲ್ಲಿ ಬೆವರಿಳಿಸಿ ತಮ್ಮ ಫಿಟ್ನೆಸ್ ಎಲ್ಲರಿಗೂ ಮಾದರಿಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಅವರೊಬ್ಬ ರನ್ ಮಷೀನ್ ಎಂಬುದರಲ್ಲಿ ಬೇರೆ ಮಾತಿಲ್ಲ,'' ಎಂದು ಲಾರಾ ಅಭಿಪ್ರಾಯ ಪಟ್ಟಿದ್ದಾರೆ.
ತೆಂಡೂಲ್ಕರ್ ಶ್ರೇಷ್ಠ ಬ್ಯಾಟ್ಸ್‌ಮನ್
ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಇಬ್ಬರಲ್ಲಿ ಯಾರು ಶ್ರೇಷ್ಠ ಬ್ಯಾಟ್ಸ್ ಎಂಬ ಪ್ರಶ್ನೆಗೆ ಉತ್ತರಿಸಿರುವ ಲಾರಾ, "ವಿರಾಟ್ ತಮಗೆ ತಂಡದ ಪರ ರನ್‌ಗಳಿಸುವಲ್ಲಿ ಸ್ಥಿರತೆ ಮೆರೆದಿದ್ದಾರೆ. ಆದರೆ, ನನ್ನ ಪಾಲಿಗೆ ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್. ಸಚಿನ್ ತಮಗೆ ಸಿಕ್ಕ ಅವಕಾಶದಲ್ಲಿ ಒಂದು ಪರಂಪರೆಯನ್ನೇ ಸೃಷ್ಠಿಸಿದ್ದಾರೆ. ಹೀಗಾಗಿ ಇವರಿಬ್ಬರನ್ನು ಹೋಲಿಕೆ ಮಾಡುವುದು ಕಷ್ಟ. ಆದರೂ ಕೊಹ್ಲಿ ಒಬ್ಬ ಅಪರೂಪದ ಪ್ರತಿಭಾನ್ವಿತ ಆಟಗಾರ. ಯುವ ಕ್ರಿಕೆಟರ್‌ಗಳಿಗೆ ಆತ ಅದ್ಭುತ ಸ್ಫೂರ್ತಿ,'' ಎಂದು ಲಾರಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಕೊಹ್ಲಿ ಅಂಡ್ ಕಂಪನಿ ಫೇವರಿಟ್ಸ್
ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ 12ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಮೇ 30ರಂದು ಆರಂಭವಾಗಲಿದ್ದು, ಅಲ್ಲಿನ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳ ಕುರಿತಾಗಿ ಮಾತನಾಡಿರುವ ಲಾರಾ, ಆಲ್‌ರೌಂಡ್ ಆಟವಾಡುವ ಸಾಮರ್ಥ್ಯ ಹೊಂದಿರುವ ಟೀಮ್ ಇಂಡಿಯಾ ಫೇವರಿಟ್ಸ್ ಪಟ್ಟ ಪಡೆದಿದೆ ಎಂದಿದ್ದಾರೆ. "ಹವಾಮಾನ ಸ್ಥಿತಿಯ ಮೇಲೆ ಎಲ್ಲವೂ ನಿಂತಿದೆ. ಪಿಚ್ ಕೊಂಚ ಮಂದಗತಿಯದ್ದಾಗಿದ್ದರೆ ಸ್ಪಿನ್ನರ್‌ಗಳಿಗೆ ನೆರವಾಗಲಿದೆ. ಆದರೆ ಇಂಗ್ಲೆಂಡ್‌ನಲ್ಲಿ ಹವಾಮಾನವನ್ನು ಊಹಿಸುವುದು ಸಾಧ್ಯವಿಲ್ಲ. ಸ್ವಲ್ಪ ಮಳೆಯಾದರೂ ಪಿಚ್ ಮೇಲೆ ಹಸಿರು ಹಾಸನ್ನು ಕಾಣಬಹುದು. ಭಾರತ ತಂಡದಲ್ಲಿ ಇಂತಹ ಯಾವುದೇ ಸ್ಥಿತಿಗೆ ಹೊಂದಿಕೊಳ್ಳುವಂತಹ ಬೌಲರ್‌ಗಳಿದ್ದಾರೆ. ಆದ್ದರಿಂದಲೇ ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್ಸ್ ಎನಿಸಿದೆ,'' ಎಂದು ಟೀಮ್ ಇಂಡಿಯಾ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications