
ನವದೆಹಲಿ, ಮೇ 15: ಟಿ20 ವಿಶ್ವಕಪ್ ಅನ್ನು 2022ಕ್ಕೆ ಮುಂದೂಡುವ ಬಗ್ಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಡಳಿಯ ಸದಸ್ಯರು ಮೇ 28ಕ್ಕೆ ಚರ್ಚಿಸಲಿದ್ದಾರೆ. ವಿಶ್ವ ಕ್ರಿಕೆಟ್‌ನ ಆಡಳಿತ ಮಂಡಳಿಯ ಸದಸ್ಯರೊಬ್ಬರು ಶುಕ್ರವಾರ (ಮೇ 15) ಪಿಟಿಐಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಇದೇ ವರ್ಷ ಟಿ20 ವಿಶ್ವಕಪ್ ಟೂರ್ನಿ ನಡೆಯುವುದರಲ್ಲಿತ್ತು. ಅಕ್ಟೋಬರ್-ನವೆಂಬರ್‌ನಲ್ಲಿ ಪ್ರತಿಷ್ಠಿತ ಟೂರ್ನಿ ನಡೆಯಲಿತ್ತು. ಆದರೆ ಕೊರೊನಾವೈರಸ್‌ನಿಂದಾಗಿ ಈ ವರ್ಷ ಟೂರ್ನಿ ನಡೆಯೋದೇ ಕಷ್ಟವೆನಿಸಿಸಿದೆ. ಹೀಗಾಗಿ ವಿಶ್ವಕಪ್ ಅನ್ನು 22ಕ್ಕೆ ಮುಂದೂಡಬೇಕೋ ಇಲ್ಲವೋ ಎಂದು ಐಸಿಸಿ ಮಂಡಳಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದರಲ್ಲಿದೆ.
ಈಗಿನ ವೇಳಾಪಟ್ಟಿಯಂತೆ 2020ರ ಟಿ20 ವಿಶ್ವಕಪ್ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಲಿದೆ. ಆದರೆ ಟೂರ್ನಿ ಮುಂದೂಡುವುದಾದರೆ ಆ ಬಗ್ಗೆ ಮೇ 28ಕ್ಕೆ ಮಂಡಳಿ ಅಂತಿಮ ನಿರ್ಧಾರ ಪ್ರಕಟಿಸಲಿದೆ. ಟಿ20 ವಿಶ್ವಕಪ್ ಮುಂದೂಡುವುದಷ್ಟೇ ಅಲ್ಲ, ಆಟದ ವೇಳೆ ಚೆಂಡಿಗೆ ಎಂಜಲು, ಬೆವರು ತಾಗಿಸುವ ಬಗ್ಗೆಯೂ ಪ್ರಮುಖ ನಿರ್ಧಾರ ಕೈಗೊಳ್ಳಲಿದೆ.
'ಐಸಿಸಿ ಇವೆಂಟ್ ಕಮಿಟಿಯಿಂದ ನಾವು 3 ಆಯ್ಕೆಗಳನ್ನು ನಿರೀಕ್ಷಿಸುತ್ತಿದ್ದೇವೆ. ಮೊದಲನೆಯದು, ಈಗಿನ ವೇಳಾಪಟ್ಟಿಯಂತೆ 14 ದಿನಗಳ ಕ್ವಾರಂಟೈನ್ ಅನ್ನು ಗಮನದಲ್ಲಿಟ್ಟು ವೀಕ್ಷರಿಗೆ ಅನುಮತಿ ನೀಡಿ ಟೂರ್ನಿ ನಡೆಸೋದು. ಎರಡನೆಯದು, ಪಂದ್ಯಾಟವನ್ನು ಖಾಲಿ ಮೈದಾನದಲ್ಲಿ ನಡೆಸೋದು. ಮೂರನೆಯದೆಂದರೆ, ಈ ಬಾರಿಯ ಟಿ20 ವಿಶ್ವಕಪ್ ಅನ್ನು 2020ಕ್ಕೆ ಮುಂದೂಡೋದು,' ಎಂದು ಬೋರ್ಡ್ ಮೆಂಬರ್ ಒಬ್ಬರು ಟಿ20 ವಿಶ್ವಕಪ್ ಬೆಳವಣಿಗೆ ಬಗ್ಗೆ ಮಾಹಿತಿ ಒದಗಿಸಿದ್ದಾರೆ.