ಭಾರತ ತಂಡ 2025 ರ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗಿದೆ. ದುಬೈ ತಲುಪಿದ ಕೂಡಲೇ ಟೀಮ್ ಇಂಡಿಯಾ ಅಭ್ಯಾಸ ಆರಂಭಿಸಿದೆ. ಟೀಮ್ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ನೇತೃತ್ವದಲ್ಲಿ ಅಭ್ಯಾಸ ನಡೆಸುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಕೆಟ್ಟ ಸುದ್ದಿ ಹೊರಬಿದ್ದಿದೆ. ಅಭ್ಯಾಸದ ಸಮಯದಲ್ಲಿ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಗಾಯಗೊಂಡಿದ್ದಾರೆ.
ರಿಷಭ್ ಪಂತ್ ಅಭ್ಯಾಸದ ಸಮಯದಲ್ಲಿ ಗಾಯಗೊಂಡಿದ್ದು, ಮೊಣಕಾಲಿಗೆ ಗಾಯವಾಗಿದೆ. ಅಪಘಾತದ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡು ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಸ್ಥಳದಲ್ಲಿ ಪಂತ್ ಅವರಿಗೆ ಮತ್ತೊಮ್ಮೆ ಗಾಯವಾಗಿದೆ.

ರಿಷಭ್ ಪಂತ್ ಗಾಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಒಂದು ವೇಳೆ ರಿಷಭ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದರೆ ಭಾರತ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ಪಂತ್ ಭಾರತ ತಂಡದಲ್ಲಿ ಪರಿಣಿತ ವಿಕೆಟ್ ಕೀಪರ್ ಆಗಿ ಸೇರ್ಪಡೆಗೊಂಡ ಏಕೈಕ ವಿಕೆಟ್ ಕೀಪರ್. ಅವರು ಹೊರಗುಳಿದರೆ, ಬದಲಿ ವಿಕೆಟ್‌ಕೀಪರ್ ಯಾರು? ಎಂಬುದು ಪ್ರಶ್ನೆ ಆಗಿದೆ.
15 ಸದಸ್ಯರ ಭಾರತ ತಂಡದಲ್ಲಿ ಕೆಎಲ್ ರಾಹುಲ್ ಜೊತೆಗೆ ಪಂತ್ ಅವರನ್ನು ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಕೆಎಲ್ ರಾಹುಲ್ ವಿಕೆಟ್ ಕೀಪರ್-ಬ್ಯಾಟರ್ ಆಗಿ ಆಡುವ ಹನ್ನೊಂದರ ಬಳಗದಲ್ಲಿ ಆಡಲಿದ್ದಾರೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಇದೀಗ ರಿಷಭ್ ಪಂತ್ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಬಾಗಿಲು ತೆರೆಯಬಹುದು ಎನ್ನಲಾಗುತ್ತಿದೆ.
ಸಂಜು ಭಾರತದ ಟಿ20 ತಂಡದ ಭಾಗವಾಗಿದ್ದಾರೆ. ಅವರು ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ವಿಕೆಟ್‌ಕೀಪಿಂಗ್‌ನಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸಂಜು ಬೆರಳಿನ ಶಸ್ತ್ರ ಚಿಕಿತ್ಸೆಗೊಳಗಾಗಿದ್ದಾರೆ. ಹೀಗಾಗಿ ಸಂಜು ಆಡುವುದು ಅನುಮಾನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಧ್ರುವ್ ಜುರೆಲ್ ಟೀಮ್ ಇಂಡಿಯಾ ಸೇರಬಹುದು.
ಧ್ರುವ್ ಜುರೆಲ್ ಟೀಮ್ ಇಂಡಿಯಾ ಪರ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಕಳೆದ ವರ್ಷ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಮಿಂಚಿದ್ದರು. ಒಂದು ವೇಳೆ ರಿಷಬ್ ಪಂತ್ ಗಾಯದ ಪರಿಣಾಮ ಹೊರಗುಳಿದರೆ, ಧ್ರುವ್ ಜುರೆಲ್ ಟೀಮ್ ಇಂಡಿಯಾ ಸೇರುವ ಸಾಧ್ಯತೆಯಿದೆ.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ ಮತ್ತು ವರುಣ್ ಚಕ್ರವರ್ತಿ.