ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ದಿನಗಳು ಕಡಿಮೆಯಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚುತ್ತಿದೆ. ಫೆಬ್ರವರಿ 19 ರಿಂದ ಪಾಕಿಸ್ತಾನ ಆತಿಥ್ಯ ವಹಿಸಲಿರುವ ಈ ಹೈಬ್ರಿಡ್ ಮಾದರಿ ಟೂರ್ನಿಯಲ್ಲಿ ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಈ ಟೂರ್ನಿಗಾಗಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಈಗಾಗಲೇ ತಮ್ಮ ತಂಡಗಳನ್ನು ಪ್ರಕಟಿಸಿವೆ. ಇದೀಗ ಬಾಂಗ್ಲಾದೇಶ ಕೂಡ ತನ್ನ ತಂಡವನ್ನು ಪ್ರಕಟಿಸಿದ್ದು, ಈ ತಂಡದಲ್ಲಿ ಮಾಜಿ ನಾಯಕ ಶಕೀಬ್ ಅಲ್ ಹಸನ್‌ಗೆ ಸ್ಥಾನ ಸಿಕ್ಕಿಲ್ಲ.
ಬಾಂಗ್ಲಾದೇಶದ ಸ್ಟಾರ್ ಅನುಭವಿ ಆಲ್‌ರೌಂಡರ್ ಹಾಗೂ ಮಾಜಿ ನಾಯಕ ಶಕೀಬ್ ಅಲ್ ಹಸನ್ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅವರ ಬೌಲಿಂಗ್ ಕ್ರಮದ ಎರಡನೇ ಪರೀಕ್ಷೆಯಲ್ಲಿ ವಿಫಲವಾದ ನಂತರ ಅವರು ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.

ಕಳೆದ ತಿಂಗಳು ಚೆನ್ನೈನ ಶ್ರೀ ರಾಮಚಂದ್ರ ಕ್ರೀಡಾ ವಿಜ್ಞಾನ ಕೇಂದ್ರದಲ್ಲಿ ಶಕೀಬ್ ಅಲ್ ಹಸನ್ ಬೌಲಿಂಗ್ ಅನ್ನು ಮರು ಮೌಲ್ಯಮಾಪನ ಮಾಡಲಾಯಿತು. ಆದರೆ ಫಲಿತಾಂಶಗಳು ಅವರ ಪರವಾಗಿ ಬರಲಿಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸರ್ರೆ ಪರ ಆಡುವಾಗ ಶಕೀಬ್ ಅಲ್ ಹಸನ್ ಅವರ ಬೌಲಿಂಗ್ ಆಕ್ಷನ್ ಬಗ್ಗೆ ಮೊದಲು ವರದಿಯಾಗಿತ್ತು. ಆನ್-ಫೀಲ್ಡ್ ಅಂಪೈರ್‌ಗಳಾದ ಸ್ಟೀವ್ ಒ'ಶೌಗ್ನೆಸ್ಸಿ ಮತ್ತು ಡೇವಿಡ್ ಮಿಲ್ಸ್ ಅವರು ವರದಿ ಮಾಡಿದ್ದರು.
ಯುಕೆಯಲ್ಲಿನ ಐಸಿಸಿ-ಮಾನ್ಯತೆ ಪಡೆದ ಪರೀಕ್ಷಾ ಕೇಂದ್ರವಾದ ಲೌಬರೋ ವಿಶ್ವವಿದ್ಯಾಲಯದಲ್ಲಿ ಶಕೀಬ್ ವೈಯಕ್ತಿಕ ಬೌಲಿಂಗ್ ಮೌಲ್ಯಮಾಪನ ಪರೀಕ್ಷೆಯನ್ನು ನೀಡಿದ್ದರು. ಆದರೆ, ಅವರು ಪರೀಕ್ಷೆಯಲ್ಲಿ ವಿಫಲರಾದರು. ಅದರ ವರದಿಯು ಡಿಸೆಂಬರ್ 15, 2024 ರಂದು ಬಂದಿತು. ಹೀಗಾಗಿ ಶಕೀಬ್ ಯಾವುದೇ ಸ್ವರೂಪದಲ್ಲಿ ಬೌಲಿಂಗ್ ಮಾಡುವುದನ್ನು ಈಗಾಗಲೇ ನಿರ್ಬಂಧಿಸಿದೆ. ಆದಾಗ್ಯೂ, ಅವರು ಇನ್ನೂ ಕ್ರಿಕೆಟ್ ಆಡಬಹುದು, ಆದರೆ ಬ್ಯಾಟರ್ ಆಗಿ ಮಾತ್ರ.
ಬಾಂಗ್ಲಾದೇಶ ತನ್ನ ಚಾಂಪಿಯನ್ಸ್ ಟ್ರೋಫಿಯ ಅಭಿಯಾನವನ್ನು ಫೆಬ್ರವರಿ 20 ರಂದು ದುಬೈನಲ್ಲಿ ಭಾರತದ ವಿರುದ್ಧ ಪ್ರಾರಂಭಿಸಲಿದೆ. ಶಕೀಬ್ ಸದ್ಯಕ್ಕೆ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಬ್ಯಾಟರ್ ಆಗಿ ಆಡುವುದನ್ನು ಮುಂದುವರಿಸಬಹುದು ಎಂದು ಬಿಸಿಬಿ ಹೇಳಿದೆ. ಶಕೀಬ್ ಪ್ರಸ್ತುತ ತನ್ನ ಕುಟುಂಬದೊಂದಿಗೆ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅವರು ಈಗಾಗಲೇ ಟೆಸ್ಟ್ ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಚಾಂಪಿಯನ್ ಟ್ರೋಫಿಯ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿರುವ ಶಕೀಬ್ ಏಕದಿನ ಮಾದರಿ ಕ್ರಿಕೆಟ್‌ಗೂ ವಿದಾಯ ಹೇಳುವ ಸಾಧ್ಯತೆಯಿದೆ.
ನಜ್ಮುಲ್ ಹುಸೇನ್ ಶಾಂಟೊ (ನಾಯಕ), ಸೌಮ್ಯ ಸರ್ಕಾರ್, ತಂಜೀದ್ ಹಸನ್, ತೌಹೀದ್ ಹೃದಯೊಯ್, ಮುಶ್ಫಿಕರ್ ರಹೀಮ್, ಎಂಡಿ ಮಹಮ್ಮದುಲ್ಲಾ, ಝೆಕರ್ ಅಲಿ ಅನಿಕ್, ಮೆಹದಿ ಹಸನ್ ಮಿರಾಜ್, ರಿಶಾದ್ ಹುಸೇನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್, ತಸ್ಕಿನ್ ಅಹ್ಮದ್, ತಂಜೀದ್ ಹಸ್ಸಾನ್, ತಸ್ಕಿನ್ ಅಹ್ಮದ್ ನಹಿದ್ ರಾಣಾ.