ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಈ ಮೆಗಾ ಟೂರ್ನಿಗೆ ಸುಮಾರು ಒಂದೂವರೆ ತಿಂಗಳು ಬಾಕಿ ಉಳಿದಿದ್ದು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾ ಪ್ರಕಟಿಸುವುದಕ್ಕೆ ಮಾರ್ಗಸೂಚಿಯನ್ನು ಸಿದ್ಧಪಡಿಸುವಲ್ಲಿ ನಿರತವಾಗಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ತಂಡದ ಚಿತ್ರಣ ಸ್ಪಷ್ಟವಾಗಲಿದೆ. ಆದರೆ ಮೆಗಾ ಟೂರ್ನಿಗೆ ಟೀಮ್ ಇಂಡಿಯಾ ತಂಡ ಹೇಗಿರಬಹುದು ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪರ ಕೆಲ ಆಟಗಾರರು ಆಡುವುದು ಖಚಿತವಾಗಿದೆ. ಆದರೆ ಕೆಲವು ಆಟಗಾರರ ನಡುವೆ ಸ್ಥಾನಕ್ಕಾಗಿ ಕಠಿಣ ಪೈಪೋಟಿ ಏರ್ಪಟಿದೆ. ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಆಡುವುದು ಖಚಿತವಾಗಿದೆ. ಇದರ ನಡುವೆ ಸುಮಾರು ಒಂದೂವರೆ ವರ್ಷಗಳಿಂದ ತಂಡದಿಂದ ಹೊರಗುಳಿದಿರುವ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ವಾಪಸಾದರೆ ಈ ಪಟ್ಟಿಯಲ್ಲಿ ಅವರ ಹೆಸರು ಖಂಡಿತಾ ಇರಲಿದೆ.

ಏಕದಿನ ವಿಶ್ವಕಪ್ 2023ರ ಟೂರ್ನಿಯ ಭಾರತ ತಂಡವು ಶ್ರೀಲಂಕಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಆಡಿ ಸೋಲು ಕಂಡಿತ್ತು. ಈ ಸರಣಿಯಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಮುಂತಾದ ಸ್ಟಾರ್ ಆಟಗಾರರು ವಿಶ್ವಕಪ್ 2023 ರ ವೇಳೆ ಗಾಯಗೊಂಡಿದ್ದರು. ಇದೀಗ ಈ ಸ್ಟಾರ್ ಆಟಗಾರರು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದನ್ನು ಕಾಣಬಹುದು. ಇದಲ್ಲದೇ ಏಕದಿನ ತಂಡದಲ್ಲಿ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡ ಅವಕಾಶ ಪಡೆಯುವ ನಿರೀಕ್ಷೆಯಿದೆ. ಟಿ20 ಮತ್ತು ಟೆಸ್ಟ್‌ನಲ್ಲಿ ಜೈಸ್ವಾಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಗೌತಮ್ ಗಂಭೀರ್ ಟೀಮ್ ಇಂಡಿಯಾ ನೂತನ ಹೆಡ್‌ಕೋಚ್ ಆದ ನಂತರ ಪ್ರತಿ ಸರಣಿಯಲ್ಲಿಯೂ ಅಚ್ಚರಿಯ ತಂಡಗಳ ಆಯ್ಕೆ ನಡೆಯುತ್ತಿವೆ. ಇದೀಗ ಚಾಂಪಿಯನ್ಸ್ ಟ್ರೋಫಿಗೂ ಇದೇ ರೀತಿ ನಡೆಯುವ ಸಾಧ್ಯತೆಯಿದೆ. ಒಂದು ವೇಳೆ ನಡೆದರೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕದ ಮೇಲೆ ಶತಕ ಬಾರಿಸುತ್ತಿರುವ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್, ಅದ್ಭುತ ಪ್ರದರ್ಶನ ನೀಡುತ್ತಿರು ಕರುಣ್ ನಾಯರ್‌ಗೆ ತಂಡದಲ್ಲಿ ಆಡಲು ಅವಕಾಶ ನೀಡುತ್ತಾರಾ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿದೆ. ಇದಲ್ಲದೆ, ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ವೇಗಿ ಪ್ರಸಿದ್ಧ್ ಕೃಷ್ಣ ಮೇಲೆ ಗೌತಮ್ ಗಂಭೀರ್ ಕೃಪೆ ತೋರುವ ಸಾಧ್ಯತೆಯಿದೆ.
ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯವೂ ಮಾರ್ಚ್ 9 ರಂದು ನಡೆಯಲಿದೆ. ವರದಿಗಳ ಪ್ರಕಾರ, ಜನವರಿ 12 ರೊಳಗೆ ಎಲ್ಲಾ ಎಂಟು ತಂಡಗಳನ್ನು ಪ್ರಕಟಿಸಲಾಗುವುದು. ಫೆಬ್ರವರಿ 13 ರವರೆಗೆ ತಂಡಗಳಲ್ಲಿ ಬದಲಾವಣೆಗಳನ್ನು ಮಾಡಲು ಐಸಿಸಿ ಅವಕಾಶ ನೀಡಿದೆ. ಭಾರತ ತಂಡ ಫೆಬ್ರವರಿ 22 ರಿಂದ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್‌ಕೀಪರ್), ಕೆಎಲ್ ರಾಹುಲ್ (ವಿಕೆಟ್‌ಕೀಪರ್), ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.