Champions Trophy 2025:ಯಾವ ಯಾವ ತಂಡಗಳು ಚಾಂಪಿಯನ್ಸ್ ಟ್ರೋಫಿ ಗೆದ್ದಿವೆ? ಭಾರತ ಎಷ್ಟು ಬಾರಿ ಗೆದ್ದಿದೆ?
ಚಾಂಪಿಯನ್ಸ್ ಟ್ರೋಫಿ ಹವಾ ಬುಧವಾರದಿಂದ ವಿಶ್ವದಲ್ಲೇ ಆವರಿಸಿಕೊಳ್ಳಲಿದೆ. ಈ ಮೆಗಾ ಟೂರ್ನಿ 8 ವರ್ಷದ ಬಳಿಕ ನಡೆಯುತ್ತಿದ್ದು ಎಲ್ಲರ ಚಿತ್ತ ಸೆಳೆದಿದೆ. ಇನ್ನು ಈ ಟೂರ್ನಿ ಈಗಾಗಲೇ 8 ಆವೃತ್ತಿಗಳನ್ನು ಕಂಡಿದ್ದು, 9ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಈ ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳ ಪಟ್ಟಿಯನ್ನು ನೋಡಿದಾಗ, ಈ ಪಟ್ಟಿಯಲ್ಲಿ ಭಾರತ, ಆಸ್ಟ್ರೇಲಿಯಾ ತಂಡಗಳು ಸ್ಥಾನ ಪಡೆದಿವೆ. ಈ ಬಾರಿಯೂ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದೆ.
ಏಷ್ಯನ್ ಕಂಡೀಷನ್‌ನಲ್ಲಿ ಐಸಿಸಿ ಮೆಗಾ ಟೂರ್ನಿ ನಡೆಯುತ್ತಿದ್ದು ಕುತೂಹಲ ಮನೆ ಮಾಡಿದೆ. ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು 1998ರಲ್ಲಿ ಆಡಲಾಯಿತು. ಅಂದಿನಿಂದ ಈ ವರೆಗೆ, ಸಾಕಷ್ಟು ರೋಚಕತೆ ಹುಟ್ಟಿಸಿರುವ ಟೂರ್ನಿ ಮತ್ತೊಂದು ಮೆಗಾ ಆಡಿಷನ್‌ಗೆ ಸಿದ್ಧವಾಗಿದೆ. ಈ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ತಂಡಗಳ ಬಗ್ಗೆ ವರದಿ ಇಲ್ಲಿದೆ.

ದಕ್ಷಿಣ ಆಫ್ರಿಕಾ ಚೊಚ್ಚಲ ಚಾಂಪಿಯನ್
1998ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಟ್ರೋಫಿಯನ್ನು ಬಾಂಗ್ಲಾದೇಶದಲ್ಲಿ ಆಡಲಾಯಿತು. ಈ ವೇಳೆ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಿದ್ದವು. ಫೈನಲ್ ಪಂದ್ಯದ ಒತ್ತಡವನ್ನು ಮೆಟ್ಟಿನಿಂತು ದಕ್ಷಿಣ ಆಫ್ರಿಕಾ 4 ವಿಕೆಟ್ ಜಯ ಸಾಧಿಸಿತ್ತು.
ನ್ಯೂಜಿಲೆಂಡ್ ಮುಡಿಗೆ ಟ್ರೋಫಿ
2000ರಲ್ಲಿ ಕೀನ್ಯಾದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 11 ತಂಡಗಳು ಭಾಗವಹಿಸಿದ್ದವು. ಆಗ ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಿದವು. ಈ ವೇಳೆ ಚೊಚ್ಚಲ ಪ್ರಶಸ್ತಿ ಎತ್ತುವ ಭಾರತದ ಕನಸು ನನಸಾಗಲಿಲ್ಲ. ಕಿವೀಸ್ ಇತಿಹಾಸ ನಿರ್ಮಿಸಿತು.
ಜಂಟಿ ಚಾಂಪಿಯನ್ಸ್
2002ರಲ್ಲಿ ಈ ಮೆಗಾ ಟೂರ್ನಿಯನ್ನು ದ್ವೀಪರಾಷ್ಟ್ರ ಆಯೋಜಿಸಿತ್ತು. ಈ ವೇಳೆ ಭಾರತ ಹಾಗೂ ಶ್ರೀಲಂಕಾ ತಂಡಗಳು ಟ್ರೋಫಿಗಾಗಿ ಕಾದಾಟವನ್ನು ನಡೆಸಿದವು. ಈ ವೇಳೆ ಶ್ರೀಲಂಕಾ ಮೊದಲು ಬ್ಯಾಟ್ ಮಾಡಿತ್ತು. ಟೀಮ್ ಇಂಡಿಯಾ ಗುರಿಯನ್ನು ಬೆನ್ನಟಿದಾಗ ಬಿಟ್ಟು ಬಿಡದೆ ಮಳೆ ಸುರಿದಿದ್ದರಿಂದ ಉಭಯ ತಂಡಗಳನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.
ಮಾಜಿ ವಿಶ್ವ ಚಾಂಪಿಯನ್ನರ ಮುಡಿಗೆ ಕಿರೀಟ
ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದ ವೆಸ್ಟ್ ಇಂಡೀಸ್, 2004ರ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಫೈನಲ್ ಪಂದ್ಯದಲ್ಲಿ ವಿಂಡೀಸ್ 2 ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಅಬ್ಬರಿಸಿತ್ತು.
ಆಸೀಸ್‌ಗೆ ಡಬಲ್ ಧಮಾಕಾ
ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಹೊಂದಿರುವ ಆಸ್ಟ್ರೇಲಿಯಾ, 2009ರಲ್ಲಿ ಮೊದಲ ಬಾರಿಗೆ ಈ ಟ್ರೋಫಿಗೆ ಮುತ್ತಿಟ್ಟಿತು. ಈ ವೇಳೆ ಆಸೀಸ್ ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು. 2009ರಲ್ಲಿ ಕಾಂಗರೂ ಪಡೆ 6 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಧೋನಿ ನಾಯಕತ್ವದಲ್ಲಿ ಕಮಾಲ್
2013ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿತ್ತು. ಈ ವೇಳೆ ಭಾರತ 5 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ, ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಮೂಲಕ ಧೋನಿ ಐಸಿಸಿ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.
ಪಾಕ್ ಆರ್ಭಟ
2017ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ಆರ್ಭಟ ನಡೆಸಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ ಅಮೋಘ ಪ್ರದರ್ಶನ ನೀಡಿ ಟೀಮ್ ಇಂಡಿಯಾಕ್ಕೆ ಸೋಲಿನ ರುಚಿ ತೋರಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications