ಜೂನ್ 19 ಬುಧವಾರ, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2024ರ ಐಸಿಸಿ ಚಾಂಪಿಯನ್ ಶಿಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಹಿಳೆ ತಂಡದ ವಿರುದ್ಧದ ಭಾರತದ ವನಿತೆಯರ ತಂಡ ಗೆದ್ದು ಬೀಗಿದೆ.
ಚಿಕ್ಕದಾದ ಬೌಂಡರಿ ಮೈದಾನದಲ್ಲಿ ಎರಡೂ ಇನ್ನಿಂಗ್ಸ್‌ಗಳಿಂದ ಬರೋಬ್ಬರಿ 646 ರನ್‌ಗಳು ಹರಿದು ಬಂದಿರುವುದು ವಿಶೇಷವಾಗಿದೆ. ಕೊನೆಯ ಎಸೆತದವರೆಗೂ ಹೋರಾಡಿದ ದಕ್ಷಿಣ ಆಫ್ರಿಕಾ ತಂಡವು ಟೀಮ್ ಇಂಡಿಯಾ ಎದುರು 4 ರನ್‌ಗಳಿಂದ ಸೋಲು ಕಂಡಿದೆ.

ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿರುವಾಗಲೇ 2-0 ಅಂತರದಿಂದ ಹರ್ಮನ್ಪ್ರೀತ್ ಕೌರ್ ಪಡೆ ಗೆದ್ದು ಸಂಭ್ರಮಾಚರಣೆ ಮಾಡಿದೆ. ಇದಕ್ಕೂ ಮುನ್ನ ಭಾನುವಾರ ಇದೇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 143 ರನ್‌ಗಳಿಗೆ ದಕ್ಷಿಣಾ ಆಫ್ರಿಕಾ ತಂಡವನ್ನು ಬಗ್ಗು ಬಡಿದಿತ್ತು.
ಇಂದಿನ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕಿ ಲೌರಾ ವೊಲ್ವಾರ್ಡ್ಟ್ ಅವರು, ಟೀಮ್ ಇಂಡಿಯಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ಹರಿಣ ಪಡೆಯ ಬೌಲಿಂಗ್ ದಾಳಿಯನ್ನು ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಹಾಗೂ ನಾಯಕಿ ಹರ್ಮನ್ಪ್ರೀತ್ ಕೌರ್ ಸಮರ್ಥವಾಗಿ ಎದುರಿಸಿದರು.
ಉತ್ತಮ ಜೊತೆಯಾಟವಾಡಿದ ಮಂಧಾನ (136) ಮತ್ತು ಕೌರ್ (103 ಅಜೇಯ) ನೆರವಿನಿಂದ ಕೇವಲ 3 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ 325 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.
ಟೀಮ್ ಇಂಡಿಯಾ ನೀಡಿದ 325 ರನ್‌ಗಳ ದೊಡ್ಡ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆಟಗಾರ್ತಿಯರೂ ಸಹ ಪ್ರಬಲ ಬ್ಯಾಟಿಂಗ್ ಪ್ರದರ್ಶಿಸಿದರು. ಹರಿಣಗಳ ಪಡೆ ಪರವಾಗಿ ಆರಂಭಿಕರಾಗಿ ಕಣಕ್ಕೀಳಿದ ನಾಯಕಿ ವೂಲ್ವಾರ್ಡ್ ಅವರಿಗೆ ಉಳಿದ ಬ್ಯಾಟರ್‌ಗಳು ಸಾಥ್ ನೀಡಲಿಲ್ಲ.
ತಜ್ಮಿನ್ ಬ್ರಿಟ್ಸ್ (5), ಅನ್ನೆಕೆ ಬಾಷ್ (18) ಔಟ್ ಆದರೆ, ಸುನೆ ಲೂಸ್ (12) ಬೇಗನೇ ವಿಕೆಟ್ ಕಳೆದುಕೊಂಡರು. ಪ್ರಮುಖ ಮೂರು ವಿಕೆಟ್ ಬಿದ್ದ ಬಳಿಕ ಕ್ರೀಸ್‌ಗೆ ಬಂದ ಮರಿಝನ್ನೆ ಕಪ್ಪ್ ಮತ್ತು ವೂಲ್ವಾರ್ಡ್ ಉತ್ತಮ ಜೊತೆಯಾಟವಾಡಿದರು.
ಈ ಜೋಡಿ 170 ಬಾಲ್ಗಳಲ್ಲಿ 184 ರನ್ಗಳನ್ನು ಹೊಡೆದು ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಈ ವೇಳೆ ಕಪ್ಪ್ 114 ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಮಧ್ಯೆ ಕೊನೆಯ 5 ಓವರ್‌ಗಳಲ್ಲಿ ಹರಿಣಗಳಿಗೆ ಗೆಲ್ಲಲು 54 ರನ್‌ಗಳ ಅವಶ್ಯಕತೆ ಇತ್ತು.
ಈ ವೇಳೆ ಅವಕಾಶ ಸಿಕ್ಕಾಗ ಬೌಂಡರಿ ಬಾರಿಸುತ್ತಿದ ನಾಯಕಿ ವೂಲ್ವಾರ್ಡ್ ಅವರು ಅಂತಿಮ ಓವರ್‌ನಲ್ಲಿ 11 ರನ್‌ಗಳಿಗೆ ಇಳಿಸಿದರು. ಆದರೆ, ಈ ಓವರ್‌ನಲ್ಲಿ ಪೂಜಾ ವಸ್ತ್ರಕರ್ 2 ವಿಕೆಟ್‌ಗಳನ್ನುಉರುಳಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಶಾಕ್ ನೀಡಿದರು.
ಇತ್ತ ಲ್ವಾರ್ಡ್ 135 ಬಾರಿಸಿ ಅಜೇಯರಾಗಿ ಉಳಿದರೂ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು. ಈ ಮೂಲಕ ದಕ್ಷಿಣ ಆಫ್ರಿಕಾ ಆಟಗಾರ್ತಿಯರು ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 321 ರನ್ ಕಲೆಹಾಕಲಷ್ಟೇ ಶಕ್ತವಾದರು.