ಇಂದೋರ್‌ನ ಹೋಳ್ಕರ್ ಸ್ಟೇಡಿಯಂ ಪಿಚ್‌ಗೆ ನೀಡಿದ್ದ ರೇಟಿಂಗ್ ಬದಲಾವಣೆ ಮಾಡಿದ ಐಸಿಸಿ

ಬಿಸಿಸಿಐ ಮಾಡಿದ ಮನವಿಯನ್ನು ಪರಿಗಣಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದ ಪಿಚ್ ರೇಟಿಂಗ್ ಅನ್ನು ಕಳಪೆಯಿಂದ "ಸರಾಸರಿಗಿಂತ ಕಡಿಮೆ" ಪಿಚ್ ಎಂದು ಬದಲಾವಣೆ ಮಾಡಿದೆ. ಅಮಹದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ಅನ್ನು ಕೂಡ ಸಾಧಾರಣ ಎಂದು ಹೇಳಿದೆ.
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ನಡೆದಿತ್ತು. ಬ್ಯಾಟಿಂಗ್ ಮಾಡಲು ಕಷ್ಟಕರವಾಗಿದ್ದ ಪಿಚ್‌ನಲ್ಲಿ ಬೌಲರ್ ಗಳು ಅಬ್ಬರಿಸಿದ್ದರು. ಮೂರೇ ದಿನಕ್ಕೆ ಈ ಟೆಸ್ಟ್ ಪಂದ್ಯ ಮುಕ್ತಾಯವಾಗಿತ್ತು. ಆಸ್ಟ್ರೇಲಿಯಾ ಈ ಪಂದ್ಯದಲ್ಲಿ 9 ವಿಕೆಟ್‌ಗಳ ಜಯ ಸಾಧಿಸಿ ಸರಣಿಯಲ್ಲಿ ವಾಪಸಾತಿ ಮಾಡಿತ್ತು. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು.
ಪಂದ್ಯದ ಬಳಿಕ ಇಂದೋರ್ ಪಿಚ್ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಬ್ಯಾಟಿಂಗ್ ಮಾಡಲು ಇದು ಸಾಕಷ್ಟು ಕಠಿಣವಾಗಿತ್ತು, ಸ್ಪಿನ್ನರ್ ಗಳಿಗೆ ಅನುಕೂಲವಾಗುವಂತೆ ಪಿಚ್ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗಿತ್ತು. ನಂತರ ಪಿಚ್ ಪರಿಶೀಲನೆ ನಡೆಸಿದ್ದ ಐಸಿಸಿ 'ಕಳಪೆ' ರೇಟಿಂಗ್ ನೀಡಿತ್ತು.

ಮೇಲ್ಮನವಿ ಸಲ್ಲಿಸಿದ್ದ ಬಿಸಿಸಿಐ
ಐಸಿಸಿ ನೀಡಿದ್ದ ರೇಟಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಬಿಸಿಸಿಐ ಮತ್ತೆ ಮನವಿ ಸಲ್ಲಿಸಿತ್ತು. ಐಸಿಸಿ ಮೇಲ್ಮನವಿ ಸಮಿತಿಯು ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರ ಹಿಂದಿನ ನಿರ್ಧಾರವನ್ನು ಪರಿಶೀಲಿಸಿತು ಮತ್ತು 'ಕಳಪೆ' ರೇಟಿಂಗ್ ಅನ್ನು ಸಮರ್ಥಿಸಲು ಸಾಕಷ್ಟು ವಿಪರೀತ ವೇರಿಯಬಲ್ ಬೌನ್ಸ್ ಇಲ್ಲ ಎಂದು ಕಂಡುಕೊಂಡಿದೆ.
ಐಸಿಸಿ ಜನರಲ್ ಮ್ಯಾನೇಜರ್ ಕ್ರಿಕೆಟ್, ಮತ್ತು ಐಸಿಸಿ ಪುರುಷರ ಕ್ರಿಕೆಟ್ ಸಮಿತಿ ಸದಸ್ಯ ರೋಜರ್ ಹಾರ್ಪರ್ ಅವರನ್ನು ಒಳಗೊಂಡ ಐಸಿಸಿ ಮೇಲ್ಮನವಿ ಸಮಿತಿಯಿಂದ ಟೆಸ್ಟ್‌ನ ತುಣುಕನ್ನು ಪರಿಶೀಲಿಸಲಾಗಿದೆ. ಪಿಚ್ ಮಾನಿಟರಿಂಗ್ ಪ್ರಕ್ರಿಯೆಯ ಅನುಬಂಧ ಎಗೆ ಅನುಗುಣವಾಗಿ ಮಾರ್ಗಸೂಚಿಗಳನ್ನು ಮ್ಯಾಚ್ ರೆಫರಿ ಅನುಸರಿಸಿದ್ದರೂ, 'ಕಳಪೆ' ರೇಟಿಂಗ್ ಅನ್ನು ಸಮರ್ಥಿಸಲು ಸಾಕಷ್ಟು ವಿಪರೀತ ವೇರಿಯಬಲ್ ಬೌನ್ಸ್ ಇಲ್ಲ ಎಂದು ಇಬ್ಬರೂ ಅಭಿಪ್ರಾಯಪಟ್ಟಿದ್ದಾರೆ, ಎಂದು ವರದಿಯಾಗಿದೆ.
ಈ ಮೂಲಕ ಕಳಪೆ ರೇಟಿಂಗ್‌ನಿಂದ ಸರಾಸರಿಗಿಂತ ಕಡಿಮೆ ಗುಣಮಟ್ಟದ ಪಿಚ್ ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಆರಂಭದಲ್ಲಿ ಮೂರು ಡಿಮೆರಿಟ್ ಪಾಯಿಂಟ್ ಪಡೆದಿದ್ದ ಪಿಚ್ ಈಗ ಕೇವಲ ಒಂದು ಡಿಮೆರಿಟ್ ಪಾಯಿಂಟ್ ಪಡೆಯಲಿದೆ. ಹೋಲ್ಕರ್ ಸ್ಟೇಡಿಯಂ ಪಿಚ್ ಸ್ಪಿನ್ನರ್‌ಗಳಿಗೆ ಸಾಕಷ್ಟು ಸಹಾಯವನ್ನು ನೀಡಿತು, ಮೊದಲ ದಿನದಲ್ಲಿ 14 ವಿಕೆಟ್‌ಗಳು ಬಿದ್ದವು, ಪಂದ್ಯದಲ್ಲಿ ಬಿದ್ದ 31 ವಿಕೆಟ್‌ಗಳಲ್ಲಿ 26 ವಿಕೆಟ್‌ಗಳನ್ನು ಸ್ಪಿನ್ನರ್‌ಗಳು ಪಡೆದುಕೊಂಡರು.

ಅಹಮದಾಬಾದ್ ಪಿಚ್ ಸಾಧಾರಣ ಎಂದ ಐಸಿಸಿ
ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ಅನ್ನು ಸಾಧಾರಣ ಎಂದು ರೇಟಿಂಗ್ ನೀಡಿದೆ. ನಾಲ್ಕನೇ ಟೆಸ್ಟ್ ನೀರಸವಾಗಿ ಡ್ರಾನಲ್ಲಿ ಅಂತ್ಯವಾಯಿತು. ಈ ಮೂಲಕ ಭಾರತ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.
ಅಹಮದಾಬಾದ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಪರವಾಗಿ ಉಸ್ಮಾನ್ ಖವಾಜಾ ಮತ್ತು ಕ್ಯಾಮೆರಾನ್ ಗ್ರೀನ್ ಶತಕ ಬಾರಿಸಿದರೆ. ಭಾರತ ತಂಡದ ಪರವಾಗಿ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಶತಕ ಬಾರಿಸಿದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ನಡೆದ ವಾಂಖೆಡೆ ಸ್ಟೇಡಿಯಂಗೆ "ಅತ್ಯುತ್ತಮ" ಪಿಚ್ ಎಂದು ರೇಟಿಂಗ್ ನೀಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications