ಭಾರತ ಹಾಗೂ ಶ್ರೀಲಂಕಾದಲ್ಲಿ ಫೆಬ್ರವರಿ 7ರಿಂದ ಟಿ20 ವಿಶ್ವಕಪ್ ನಡೆಯಲಿದೆ. ಈ ವಿಶ್ವಕಪ್‌ಗಾಗಿ ಹಲವು ತಂಡಗಳು ಈಗಾಗಲೇ ಭರ್ಜರಿ ತಯಾರಿ ನಡೆಸಿವೆ. ಆದರೆ ಬಾಂಗ್ಲಾದೇಶ ಟಿ20 ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ. ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ನಡುವೆ ಕೊನೆಯ ಹಂತದ ಮಾತುಕತೆ ನಡೆದಿದೆ. ಈ ವೇಳೆ ಬಾಂಗ್ಲಾದೇಶ ತನ್ನ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸದ ಕಾರಣ, ಟಿ20 ವಿಶ್ವಕಪ್‌ನಲ್ಲಿ ಈ ತಂಡ ಆಡುವ ಬಗ್ಗೆ ಅನುಮಾನಗಳು ಎದ್ದಿವೆ.
ಬುಧವಾರ ದಿನ ಪೂರ್ತಿ ಬಿಸಿಬಿ ಹಾಗೂ ಐಸಿಸಿ ನಡುವಣ ಸಭೆ ನಡೆಯಿತು. ಆದರೆ ಈ ವೇಳೆ ಐಸಿಸಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಸೂಚನೆಯನ್ನು ನೀಡಿದೆ. ಬಾಂಗ್ಲಾದೇಶ ಭಾರತಕ್ಕೆ ತನ್ನ ತಂಡವನ್ನು ಕಳುಹಿಸಲು ನಿರಾಕರಿಸಿದರೆ, ಐಸಿಸಿ ಈ ತಂಡವನ್ನು ಹೊರ ಹಾಕಲಾಗುವುದು ಎಂದು ಸೂಚಿಸಿದೆ.

ಬಾಂಗ್ಲಾದೇಶ ಟಿ20 ವಿಶ್ವಕಪ್‌ನಲ್ಲಿ ಆಡುತ್ತದೋ ಅಲ್ಲವೋ ಎನ್ನುವ ಬಗ್ಗೆ ಯಾವುದೇ ಸಮಯದಲ್ಲಿ ಅಧಿಕೃತ ಘೋಷಣೆ ಹೊರಬರುವ ಸಾಧ್ಯತೆ ಇದೆ. ಟಿ20 ವಿಶ್ವಕಪ್‌ನಲ್ಲಿ ಆಡುವ ಬಹುತೇಕ ಎಲ್ಲಾ ತಂಡಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಬಾಂಗ್ಲಾದೇಶ ಭಾರತಕ್ಕೆ ಪ್ರಯಾಣ ಬೆಳೆಸಬೇಕೋ ಬೇಡವೋ ಎಂಬ ಬಗ್ಗೆ ಮತದಾನ ನಡೆಯಿತು. ಈ ಮತದಾನದಲ್ಲಿ ಬಾಂಗ್ಲಾದೇಶ ಸೋತಿದೆ. ಭಾರತಕ್ಕೆ ಬಾಂಗ್ಲಾ ಪ್ರವಾಸವನ್ನು ಬೆಳೆಸದೆ ಇದ್ದಲ್ಲಿ ತಂಡ, ಟಿ20 ವಿಶ್ವಕಪ್‌ನಿಂದ ಹೊರ ನಡೆಯಬೇಕಾಗುತ್ತದೆ.
ಮತದಾನದಲ್ಲಿ ಹಿನ್ನಡೆ
ಒಂದು ವೇಳೆ ಬಾಂಗ್ಲಾದೇಶ ಭಾರತಕ್ಕೆ ಪ್ರವಾಸ ಬೆಳೆಸಲು ನಿರಾಕರಿಸಿದರೆ, ಈ ಸ್ಥಾನವನ್ನು ತುಂಬಲು ಮತ್ತೊಂದು ತಂಡವನ್ನು ಪಂದ್ಯಾವಳಿಗೆ ಸೇರಿಸಬೇಕಾಗುತ್ತದೆ. ಯಾವ ತಂಡವನ್ನು ಸೇರಿಸಬೇಕು ಎಂಬ ಬಗ್ಗೆ ಐಸಿಸಿ ಸಭೆಯಲ್ಲಿ ಚರ್ಚೆಗಳು ಸಹ ನಡೆದಿದೆ. ಬಾಂಗ್ಲಾ ಬದಲಿಗೆ ಸ್ಕಾಟ್ಲೆಂಡ್‌ನ ಟಿ20 ವಿಶ್ವಕಪ್ ಆಡಬಹುದು ಎಂದು ಅಂದಾಜಿಸಲಾಗಿದೆ. ಶ್ರೇಯಾಂಕದ ಆಧಾರದ ಮೇಲೆ, ಸ್ಕಾಟ್ಲೆಂಡ್ ಮೇಲುಗೈ ಸಾಧಿಸಿದೆ. ಬಿಸಿಬಿಗೆ ಈಗ ಕೇವಲ ಒಂದು ದಿನದ ಕೊನೆಯ ಗಡುವನ್ನು ಐಸಿಸಿ ನೀಡಿದೆ.
ಐಸಿಸಿ ಸಭೆಯಲ್ಲಿ ಒಟ್ಟು 16 ದೇಶಗಳು ಭಾಗವಹಿಸಿದ್ದವು ಎಂದು ತಿಳಿದು ಬಂದಿದೆ. ಈ ದೇಶಗಳಲ್ಲಿ 14 ದೇಶಗಳು ಐಸಿಸಿ ಪರವಾಗಿ ಮತ ಚಲಾಯಿಸಿದ್ದಾರೆ. ಎರಡು ಮತಗಳು ಐಸಿಸಿ ವಿರುದ್ಧ ಬಿದ್ದಿವೆ. ಈ ಎರಡು ಮತಗಳಲ್ಲಿ ಬಾಂಗ್ಲಾ ಒಂದು ದೇಶವಾಗಿದ್ದರೆ, ಇನ್ನೊಂದು ಪಾಕಿಸ್ತಾನ ಆಗಿರಬಹುದು ಎಂದು ಅಂದಾಜಿಸಲಾಗಿದೆ.